ಬೆಳಗಾವಿ: ಸರ್ವಾಧಿಕಾರಿ ಯಾವಾಗ ಹೆದರುತ್ತಾನೋ ಆಗ ಪೊಲೀಸರನ್ನು ಕಳುಹಿಸುತ್ತಾನೆ. ದೆಹಲಿಯ ಸರ್ವಾಧಿಕಾರಿ ಎಲ್ಲರ ಬಾಯಿಗೆ ಪಟ್ಟಿ ಕಟ್ಟಲು ಬಯಸುತ್ತಿದ್ದಾರೆ. ಆದರೆ, ಅವರಿಗೆ ರಾಹುಲ್ ಗಾಂಧಿ (Rahul Gandhi) ಹಾಗೂ ಕಾಂಗ್ರೆಸ್ ನಾಯಕರ ಬಾಯಿ ಮುಚ್ಚಿಸಲಾಗುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ ಟೀಕಿಸಿದ್ದಾರೆ.
ಮಹಿಳೆಯರ ಮೇಲೆ ಇನ್ನೂ ಅತ್ಯಾಚಾರಗಳು ನಡೆಯುತ್ತಿವೆ ಎಂಬ ಹೇಳಿಕೆ ನೀಡಿದ ರಾಹುಲ್ ಗಾಂಧಿ ಅವರ ನವ ದೆಹಲಿಯ ನಿವಾಸಕ್ಕೆ ಪೊಲೀಸರು ಭೇಟಿ ನೀಡಿದ ವಿಚಾರಕ್ಕೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಇದು ಪ್ರಜಾಪ್ರಭುತ್ವ ಮೇಲೆ ಯಾವ ರೀತಿ ದಾಳಿಯಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ. ಅದಾನಿಯ ದೊಡ್ಡ ಹಗರಣ ಹೊರಗೆ ಬಂದಿದೆ. ಈ ಬಗ್ಗೆ ಸಂಸತ್ ಒಳಗೂ, ಹೊರಗೂ ಚರ್ಚೆ ಆಗಬಾರದೆಂಬ ಬಯಕೆ ಪ್ರಧಾನಿಗಿದೆ. ವಿಪಕ್ಷಗಳು ಅದಾನಿ ಬಗ್ಗೆ ಹೇಳಬಾರದು, ತನಿಖೆಗೆ ಒತ್ತಾಯಿಸಬಾರದು. ಹೀಗಾಗಿ ಎಲ್ಲರ ಬಾಯಿ ಮುಚ್ಚಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಮಾ.20ರಂದು ಬೆಳಗಾವಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬರುತ್ತಿದ್ದಾರೆ. ಕರ್ನಾಟಕದ ಯುವಕರಿಗೆ ಅತಿ ದೊಡ್ಡ ಗ್ಯಾರಂಟಿ ಯೋಜನೆ ಘೋಷಣೆ ಮಾಡಲಿದ್ದಾರೆ. ರಾಹುಲ್ ಗಾಂಧಿ ಮನೆಗೆ ಎಷ್ಟೊಂದು ಪೊಲೀಸ್ ಅಧಿಕಾರಿಗಳು ಹೋಗಿದ್ದಾರೆ ಎಂಬುದನ್ನು ತಾವು ಮಾಧ್ಯಮಗಳಲ್ಲಿ ನೋಡಿರಬಹುದು. ಬೆಳಗಾವಿಗೆ ಹೋಗಿ ಯುವಕರಿಗೆ ಗ್ಯಾರಂಟಿ ಕಾರ್ಡ್ ಘೋಷಣೆ ಮಾಡಬಾರದು ಎಂಬುದು ಅವರ ಉದ್ದೇಶವಾಗಿದೆ ಎಂದು ಆರೋಪ ಮಾಡಿದರು.
ಇದನ್ನೂ ಓದಿ | Siddaramaiah: ಕೋಲಾರದಿಂದ ಸ್ಪರ್ಧಿಸದಂತೆ ಹೈಕಮಾಂಡ್ ಹೇಳಿದೆ ಎಂದ ಡಾ. ಯತೀಂದ್ರ: ಆದರೆ ಸುರ್ಜೆವಾಲ ಹೇಳಿದ್ದೇ ಬೇರೆ
ನಾಳೆ ಬೆಳಗಾವಿಯಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ‘ಯುವ ಕ್ರಾಂತಿ’ ರ‍್ಯಾಲಿ
ಬೆಳಗಾವಿಯಲ್ಲಿ ಮಾ.20ರಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ವತಿಯಿಂದ ‘ಯುವ ಕ್ರಾಂತಿ’ ರ‍್ಯಾಲಿ ಆಯೋಜಿಸಲಾಗಿದೆ. ಹೀಗಾಗಿ ಕಾರ್ಯಕ್ರಮವನ್ನು ಆಯೋಜಿಸಿರುವ ಬೆಳಗಾವಿಯ ಸಿಪಿಎಡ್ ಮೈದಾನಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ ಅವರು ಭಾನುವಾರ ಭೇಟಿ ನೀಡಿ ಸಿದ್ಧತೆಯನ್ನು ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ರಣದೀಪ್ ಸುರ್ಜೆವಾಲ ಅವರು, ಕರ್ನಾಟಕದ ಯುವಕರ ಭವಿಷ್ಯದ ಮೇಲೆ ಬಿಜೆಪಿ ಸರ್ಕಾರದ ಗ್ರಹಣವಿದೆ. ಯುವಕ್ರಾಂತಿ ರ‍್ಯಾಲಿಯಿಂದ ಇದಕ್ಕೆ ಮುಕ್ತಿ ಸಿಗಲಿದೆ. ಸೋಮವಾರ ಬೆಳಗ್ಗೆ 11 ಗಂಟೆಗೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಯುವಕರ ಜೀವನ ಉಜ್ವಲಗೊಳಿಸುವ ಗ್ಯಾರಂಟಿ ಕಾರ್ಡ್ ಅನಾವರಣ ಮಾಡಲಿದ್ದಾರೆ. ಮುಂದೆ ಈ ಕಾರ್ಯಕ್ರಮವನ್ನು ಮೋದಿ ಸರ್ಕಾರ ಸಹ ಜಾರಿ ಮಾಡಬೇಕಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ | Karnataka Election 2023: ಸ್ಪರ್ಧೆ ಖಚಿತ ಎಂದ ಆರ್. ಶಂಕರ್; ಮತದಾರರಿಗೆ ಭರ್ಜರಿ ಬಾಡೂಟ
ಮೋದಿ ಅಧಿಕಾರಕ್ಕೆ ಬಂದ ಮೇಲೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದರು. ಆದರೂ ದೇಶದಲ್ಲಿ ಶೇ. 8ರಷ್ಟು ನಿರುದ್ಯೋಗ ಇದೆ. ಬ್ರ್ಯಾಂಡ್ ಕರ್ನಾಟಕಕ್ಕೆ ಬಿಜೆಪಿ ಸರ್ಕಾರದಿಂದ ಧಕ್ಕೆಯಾಗಿದೆ. ಕರ್ನಾಟಕಕ್ಕೆ ಬರಬೇಕಾಗಿದ್ದ ಉದ್ಯಮಗಳು ಬೇರೆ ರಾಜ್ಯಕ್ಕೆ ಹೋಗಿವೆ. ಫಾಕ್ಸ್‌ಕಾನ್ ಕಂಪನಿ, ಓಲಾ ಕಂಪನಿಗಳು ತೆಲಂಗಾಣಕ್ಕೆ ಹೋದವು ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.