ಕಾರವಾರ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ (CT Ravi) ಅವರು ಈಗ ವಿವಾದವೊಂದಕ್ಕೆ ಗುರಿಯಾಗಿದ್ದಾರೆ. ಮಾಂಸದ ಊಟ ಸೇವಿಸಿ (Meat meals) ದೇವರ ದರ್ಶನ ಮಾಡಿರುವ ಗಂಭೀರ ಆರೋಪ ಅವರ ಮೇಲೆ ಕೇಳಿಬಂದಿದ್ದು, ಈ ಸಂಬಂಧ ಬಾಡೂಟ ಮಾಡಿರುವ ವಿಡಿಯೊಗಳು ಹಾಗೂ ಫೋಟೊಗಳು ವೈರಲ್ ಆಗಿವೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳಕ್ಕೆ ಭೇಟಿ ನೀಡಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಫೆ.19ರ ಭಾನುವಾರದಂದು ಸಿ.ಟಿ. ರವಿ ಅವರು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದರು. ಕಾರವಾರದಲ್ಲಿ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಳಿಕ ಅಲ್ಲಿಂದ ಭಟ್ಕಳಕ್ಕೆ ತೆರಳಿದ್ದರು. ಭಟ್ಕಳದ ಶಿರಾಲಿಯಲ್ಲಿರುವ ಶಾಸಕ ಸುನೀಲ್ ನಾಯ್ಕ ಮನೆಯಲ್ಲಿ ಬಾಡೂಟವನ್ನು ಸೇವನೆ ಮಾಡಿದ್ದರು.
ಬಾಡೂಟ ಸವಿದ ಸಿ.ಟಿ. ರವಿ ಅವರು ಅಲ್ಲಿಂದ ಭಟ್ಕಳ ನಗರದ ಹಳೇ ಬಸ್ ನಿಲ್ದಾಣದ ಸಮೀಪ ಇರುವ ನಾಗಬನ ಹಾಗೂ ಕರಿಬಂಟ ಹನುಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಭಟ್ಕಳ ಶಾಸಕ ಸುನಿಲ್ ನಾಯ್ಕ ಹಾಗೂ ಕಮಿಟಿ ಸದಸ್ಯರು ಈ ವೇಳೆ ಇವರ ಜತೆಗಿದ್ದರು. ಅಲ್ಲದೆ, ದೇವಸ್ಥಾನದ ಆವರಣದಲ್ಲೇ ಶಾಸಕ ಸುನೀಲ್ ನಾಯ್ಕ ಹಾಗೂ ಕಮಿಟಿ ಸದಸ್ಯರಿಂದ ಸನ್ಮಾನವನ್ನೂ ಸ್ವೀಕರಿಸಿದ್ದರು.
ಇದನ್ನೂ ಓದಿ: Shobha Karandlaje: ಸಿದ್ದರಾಮಯ್ಯರನ್ನು ಹೊಡೆದುಹಾಕಿ ಎಂಬ ಅಶ್ವತ್ಥನಾರಾಯಣ ಹೇಳಿಕೆ ನೂರಕ್ಕೆ ನೂರು ತಪ್ಪು: ಶೋಭಾ ಕರಂದ್ಲಾಜೆ
ಈಗ ಶಾಸಕರ ಜತೆ ಬಾಡೂಟ ಸವಿದಿರುವ ಹಾಗೂ ಬಳಿಕ ಅಲ್ಲಿಂದ ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದು ಜಿಲ್ಲೆಯ ಜನತೆಯಲ್ಲಿ ವ್ಯಾಪಕ ಚರ್ಚೆಗೂ ಕಾರಣವಾಗಿದೆ.