ಬೆಂಗಳೂರು: ವಿಶೇಷ ತಿನಿಸಿಗೆ ದಕ್ಷಿಣ ಭಾರತದ ರಾಜ್ಯಗಳು ಹೇಳಿಮಾಡಿಸಿದ ಜಾಗಗಳು. ಅಷ್ಟೇ ಏಕೆ, ಕರ್ನಾಟಕದ ಮೈಸೂರು ಪಾಕ್, ಗೋಕಾಕ್ ಕರದಂಟು, ಮಂಗಳೂರನ ನೀರ್ ದೋಸೆ, ಉತ್ತರ ಕರ್ನಾಟಕದ ಜೋಳದ ರೊಟ್ಟಿ ತುಂಬ ಪ್ರಸಿದ್ಧ. ಹೀಗೆ ವಿಧ ವಿಧದ ತಿಂಡಿಗೆ ಕರುನಾಡು ಎಂದಿಗೂ ಖ್ಯಾತಿ ಗಳಿಸಿದೆ. ಅದರಲ್ಲೂ, ಮಾವಳ್ಳಿ ಟಿಫಿನ್ ರೂಮ್ ಅರ್ಥಾತ್ ಎಂಟಿಆರ್ ಹೋಟೆಲ್ ಎಂದರೆ ಎಲ್ಲರ ಬಾಯಲ್ಲೂ ನೀರೂರುತ್ತದೆ. ಇಂತಹ ಎಂಟಿಆರ್ ಸಂಸ್ಥೆಯು 2ನೇ ಮಹಾಯುದ್ಧದ ವೇಳೆ ಜಗತ್ತಿಗೆ ರವೆ ಇಡ್ಲಿಯನ್ನು (MTR Rava Idli) ಪರಿಚಯಿಸಿತು ಎಂಬುದು ಮತ್ತೊಂದು ಮಹತ್ವದ ಅಂಶವಾಗಿದೆ.
ಬೆಂಗಳೂರಿನಲ್ಲಿ ಜನರಿಗೆ ಸುಲಭವಾಗಿ ಬಗೆಬಗೆಯ ತಿಂಡಿ ಸಿಗುವಂತಾಗಲಿ ಎಂದು ಪಾರಂಪಳ್ಳಿ ಯಜ್ಞನಾರಾಯಣ ಮೈಯ್ಯ ಅವರು ಎಂಟಿಆರ್ ಸ್ಥಾಪನೆ ಮಾಡಿದರು. ಮುಂದೆ ಎರಡನೇ ಮಹಾಯುದ್ಧದ ವೇಳೆ ಇದೇ ಎಂಟಿಆರ್ ಸಂಸ್ಥೆಯು ಜನರಿಗೆ ರವೆ ಇಡ್ಲಿಯನ್ನು ಪರಿಚಯಿಸಿತು. ಸಾಮಾನ್ಯ ಇಡ್ಲಿಗಿಂತ ಜನ ರವೆ ಇಡ್ಲಿಯನ್ನೇ ಹೆಚ್ಚು ಬಯಸಲು ಶುರು ಮಾಡಿದರು. ರವೆ ಇಡ್ಲಿ ಆರೋಗ್ಯಕ್ಕೆ ಒಳ್ಳೆಯದು ಎಂಬ ಭಾವನೆ ಮೂಡಿತು. ಅಷ್ಟೇ ಏಕೆ, ಈಗ ರವೆ ಇಡ್ಲಿಯು ಭಾರತ ಮಾತ್ರವಲ್ಲ ವಿದೇಶದಲ್ಲೂ ಹೆಸರಾಗಿದೆ.
2ನೇ ಮಹಾಯುದ್ಧಕ್ಕೂ ರವೆ ಇಡ್ಲಿಗೂ ಏನು ಸಂಬಂಧ?
ಎರಡನೇ ಮಹಾಯುದ್ಧದ ವೇಳೆ ಜಪಾನ್ ಬರ್ಮಾ ಮೇಲೆ ಆಕ್ರಮಣ ಮಾಡಿತು. ಏಷ್ಯಾ ಉಪಖಂಡದಲ್ಲಿಯೇ ಅತಿ ಹೆಚ್ಚು ಅಕ್ಕಿ ಉತ್ಪಾದಿಸುವ ದೇಶ ಬರ್ಮಾ ಆಗಿತ್ತು. ಹಾಗಾಗಿ, ಭಾರತದಲ್ಲಿ ಅಕ್ಕಿಗೆ ಕೊರತೆಯಾಯಿತು. ಅಕ್ಕಿಯ ಬೆಲೆ ಗಗನಕ್ಕೇರಿತು. ಆದರೆ, ದಕ್ಷಿಣ ಭಾರತದಲ್ಲಿ ಜನ ಹೆಚ್ಚು ಅನ್ನ ಊಟ ಮಾಡುವುದರಿಂದ ಅನ್ನಕ್ಕೆ ತೊಂದರೆಯಾಯಿತು. ಆಗ, ಅಕ್ಕಿಯ ಉತ್ಪನ್ನದ ಬದಲು ಎಂಟಿಆರ್ ಸಂಸ್ಥೆಯು ರವೆ ಇಡ್ಲಿಯನ್ನು ಪ್ರಾಯೋಗಿಕವಾಗಿ ತಯಾರಿಸಿತು. ಅನ್ನದ ಬದಲಾಗಿ ಜನ ರವೆ ಇಡ್ಲಿಗೆ ಹೆಚ್ಚು ಮಾರುಹೋದರು. ಹೀಗೆ, ಮಹಾಯುದ್ಧದ ವೇಳೆ ಎಂಟಿಆರ್, ಬೆಂಗಳೂರಿನಲ್ಲಿ ರವೆ ಇಡ್ಲಿ ಕ್ರಾಂತಿ ಆರಂಭಿಸಿತು. ಈಗಲೂ ಬೆಂಗಳೂರಿನಲ್ಲಿ ರವೆ ಇಡ್ಲಿ ಇಲ್ಲದ ಹೋಟೆಲ್ ಇಲ್ಲ, ರವೆ ಇಡ್ಲಿ ತಿನ್ನದ ಬೆಂಗಳೂರಿಗರು ಇರಲಿಕ್ಕಿಲ್ಲ.
ದಿ ಹಿಂದು ಪತ್ರಿಕೆಗೆ ಸಂದರ್ಶನ ನೀಡುವ ವೇಳೆ ಎಂಟಿಆರ್ ಕಂಪನಿಯ ಮ್ಯಾನೇಜಿಂಗ್ ಪಾರ್ಟ್‌ನರ್ ಆಗಿರುವ ವಿಕ್ರಮ್ ಮೈಯ್ಯ ಅವರು ಈ ಕುರಿತು ಪ್ರಸ್ತಾಪಿಸಿದ್ದಾರೆ. “ರವೆ ಇಡ್ಲಿಯು ಯಜ್ಞನಾರಾಯಣ ಮೈಯ್ಯ ಅವರ ಮಹಾನ್ ಪ್ರಯೋಗಗಳಲ್ಲಿ ಒಂದು. ಈಗಲೂ ಜನ ರವೆ ಇಡ್ಲಿಯನ್ನು ಇಷ್ಟಪಡುತ್ತಾರೆ. ಮೊಸರು, ಗೋಡಂಬಿಯನ್ನೂ ಬೆರೆಸಿ ರವೆ ಇಡ್ಲಿ ಮಾಡಲು ಆರಂಭಿಸಿದ್ದೇ ಅವರು” ಎಂದು ಹೇಳಿದರು.
ಇದನ್ನೂ ಓದಿ: Travel Tips: ನೀವು ತಿಂಡಿಪೋತರಾದರೆ ಈ ಜಾಗಗಳಿಗೆ ಪ್ರವಾಸ ಮಾಡಲೇಬೇಕು!