ಧಾರವಾಡ: ಒಂದು ತಿಂಗಳ ಒಳಗಾಗಿ ಧಾರವಾಡದಲ್ಲಿನ ರಸ್ತೆ ಗುಂಡಿಗಳನ್ನು ಸಂಪೂರ್ಣ ಮುಚ್ಚಿಸಬೇಕು ಎಂದು ಕೆಪಿಸಿಸಿ ವಕ್ತಾರ ಹಾಗೂ ಕಾಂಗ್ರೆಸ್ ಮುಖಂಡ ಪಿ.ಎಚ್. ನೀರಲಕೇರಿ ಆಗ್ರಹಿಸಿದ್ದಾರೆ.
ತೀರಾ ಹದಗೆಟ್ಟಿರುವ ಧಾರವಾಡದ ರಸ್ತೆ ಗುಂಡಿಗಳನ್ನು ಮುಚ್ಚಿ, ಸಾರ್ವಜನಿಕರಿಗೆ ಸುಗಮ ಸಂಚಾರಕ್ಕಾಗಿ ಅವಕಾಶ ಮಾಡಿಕೊಡಲು ಧಾರವಾಡ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರಿಗೆ ದೇವರು ಒಳ್ಳೆಯ ಬುದ್ಧಿ ನೀಡಲಿ ಎಂದು ಬೆಲ್ಲದ ಭಾವಚಿತ್ರಕ್ಕೆ ಹಾಲೆರೆದು ನೀರಲಕೇರಿ ಅವರು ಆಗ್ರಹಿಸಿದರು.
ʻʻರಸ್ತೆ ನಿರ್ಮಾಣ, ರಿಪೇರಿ ಮಾಡಲು ಮುಂದಾಗುವ ಶಾಸಕರು ಕೇವಲ ಗುದ್ದಲಿ ಪೂಜೆ ಮಾತ್ರ ಮಾಡುತ್ತಾರೆ. ಆ ಮೂಲಕ ಮಾಧ್ಯಮಗಳಲ್ಲಿ ಮಿಂಚುತ್ತಾರೆ. ಆದರೆ, ವಾಸ್ತವದಲ್ಲಿ ಧಾರವಾಡದ ರಸ್ತೆಗಳ ಪರಿಸ್ಥಿತಿ ತೀರಾ ಶೋಚನಿಯವಾಗಿದೆ’ʼ ಎಂದು ಪಿ.ಎಚ್. ನಿರಲಕೇರಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ʻʻಬಿಆರ್‌ಟಿಎಸ್ ರಸ್ತೆಯೂ ಹದಗೆಟ್ಟಿದ್ದು ಸಾರ್ವಜನಿಕರು ಪ್ರತಿನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ. ನವಲೂರು ಬಳಿ ಬಿಆರ್‌ಟಿಎಸ್ ರಸ್ತೆ ಪರಿಸ್ಥಿತಿ ಶಾಸಕರಿಗೆ ಗೊತ್ತಿಲ್ಲವೇ ಅಥವಾ ಕಣ್ಮುಚ್ಚಿ ಕುಳಿತುಕೊಂಡಿದ್ದಾರೆಯೇʼʼ ಎಂದು ಪ್ರಶ್ನಿಸಿದರು. ಕಳೆದ ಎರಡು ದಿನಗಳ ಹಿಂದೆ ಅಲ್ಲಿ ಇಬ್ಬರು ಬೈಕ್ ಸವಾರರು ಬಿದ್ದು ಗಂಭೀರವಾಗಿ ಗಾಯಗೊಂಡು ಕೀಮ್ಸ್‌ಗೆ ದಾಖಲಾಗಿದ್ದಾರೆ ಎಂದು ಹೇಳಿದರು.
ʻʻಅರವಿಂದ್ ಬೆಲ್ಲದ ಅವರು ಪ್ರಜ್ಞಾವಂತರಿದ್ದಾರೆ ಎಂದು ಧಾರವಾಡ ಜನ ಅವರಿಗೆ ಮತ ಹಾಕಿ ಗೆಲ್ಲಿಸಿದರು. ಇಂದಿನ ಧಾರವಾಡ ಪರಿಸ್ಥಿತಿ ನೋಡಿ ಮತ ಹಾಕಿದವರು ಹಣೆಹಣೆ ಚಚ್ಚಿಕೊಳ್ಳುತ್ತಿದ್ದಾರೆʼʼ ಎಂದು ವಾಗ್ದಾಳಿ ಮಾಡಿದರು ನೀರಲಕೇರಿ.
ಇದನ್ನೂ ಓದಿ | KPTCL protest | ಟವರ್ ಹಾಕಲು ಜಾಗ ಕೊಟ್ಟ ರೈತರಿಗೆ ಪರಿಹಾರ ಕೊಡದ ಕೆಪಿಟಿಸಿಎಲ್; ಟವರ್ ಏರಿ ಪ್ರತಿಭಟನೆ!