ಬೆಳಗಾವಿ: ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ (Belagavi News) ಆವರಣದಲ್ಲಿ ಧರಣಿ ಸತ್ಯಾಗ್ರಹ ಕುಳಿತಿದ್ದ ನವ ಕರ್ನಾಟಕ ಎಂಆರ್‌ಡಬ್ಲ್ಯೂ , ವಿಆರ್‌ಡಬ್ಲ್ಯೂ , ಯುಆರ್‌ಡಬ್ಲ್ಯೂ ವಿಶೇಷಚೇತನ ಗೌರವಧನ ಕಾರ್ಯಕರ್ತರನ್ನು ಮಂಗಳವಾರ ಸಂಜೆ ಭೇಟಿ ಮಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸುವ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ವಿಶೇಷಚೇತನರು ಧರಣಿ ವಾಪಸ್ ಪಡೆದರು.
ಧರಣಿ ಸ್ಥಳಕ್ಕೆ ತೆರಳಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಅವರ ಬೇಡಿಕೆಗಳ ಕುರಿತು ಸುದೀರ್ಘವಾಗಿ ಚರ್ಚಿಸಿದರು. ರಾಜ್ಯದ 6,860 ಜನ ಎಂಆರ್ಡಬ್ಲ್ಯೂ / ವಿಆರ್‌ಡಬ್ಲ್ಯೂ / ಯುಆರ್‌ಡಬ್ಲ್ಯೂ ವಿಶೇಷಚೇತನ ಗೌರವಧನ ಕಾರ್ಯಕರ್ತರ ಹುದ್ದೆಗಳನ್ನು ಕಾಯಂಗೊಳಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಧರಣಿ ನಿರತರು ಸಚಿವರಿಗೆ ಮನವಿ ಸಲ್ಲಿಸಿದರು.
ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಜತೆ ಈ ಕುರಿತು ಚರ್ಚಿಸುತ್ತೇನೆ. ಜತೆಗೆ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಮಂಡಳದ ಅಧಿವೇಶನದ ವೇಳೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿ, ಬೇಡಿಕೆಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸಲಿದೆ ಎಂದು ತಿಳಿಸಿದರು.
ಇದನ್ನೂ ಓದಿ | ಆಸ್ಟ್ರೇಲಿಯಾ ಸಚಿವರೊಂದಿಗೆ ಎಂ.ಬಿ. ಪಾಟೀಲ್ ಮಾತುಕತೆ; ರಾಜ್ಯದಲ್ಲಿ ಹೂಡಿಕೆಗೆ ಬೆಂಬಲ
ಸಚಿವರು ನಮ್ಮ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸಿದ್ದಾರೆ. ಅವರ ಭರವಸೆಯ ಹಿನ್ನೆಲೆಯಲ್ಲಿ ಧರಣಿ ವಾಪಸ್ ಪಡೆಯುತ್ತಿರುವುದಾಗಿ ಸಂಘದ ರಾಜ್ಯ ಅಧ್ಯಕ್ಷ ಫಕೀರ ಗೌಡ ಪಾಟೀಲ ಹೇಳಿದರು.
ನೌಕರರ ಬೇಡಿಕೆಗಳೇನು?
ರಾಜ್ಯದ 6860 ಎಂಆರ್‌ಡಬ್ಲ್ಯೂ, ವಿಆರ್‌ಡಬ್ಲ್ಯೂ, ಯುಆರ್‌ಡಬ್ಲ್ಯೂ ವಿಶೇಷಚೇತನ ಗೌರವಧನ ಕಾರ್ಯಕರ್ತರ ಹುದ್ದೆಗಳನ್ನು ಕಾಯಂಗೊಳಿಸುವಂತೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮುಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ರಾಜ್ಯದಲ್ಲಿರುವ ಎಲ್ಲಾ ವಿಶೇಷಚೇತನರಿಗೆ ಅವರ ವಾಸಸ್ಥಳದಲ್ಲಿಯೇ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪುನರ್ವಸತಿ ಸೇವೆಯನ್ನು ಒದಗಿಸುವುದು ಹಾಗೂ ಅವರ ಜೀವನಕ್ಕೆ ಅವಶ್ಯಕ ಸೇವೆಗಳನ್ನು ಅವರಿರುವಲ್ಲಿಯೇ ಪೂರೈಸುವುದು. ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಹಾಗೂ ಇನ್ನಿತರ ಸೌಲಭ್ಯಗಳನ್ನು ವಿಕಲಚೇತನರ ಮನೆಬಾಗಿಲಿಗೆ ತಲುಪಿಸುವುದಕ್ಕಾಗಿ ರಾಜ್ಯ ಸರ್ಕಾರ 2007-08ನೇ ಸಾಲಿನಲ್ಲಿ “ಅಂಗವಿಕಲರ ಗ್ರಾಮೀಣ ಪುನರ್ವಸತಿ ಕಾರ್ಯಕ್ರಮ” ಜಾರಿಗೆ ತಂದಿದೆ. ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕರ್ನಾಟಕ ಸರ್ಕಾರವು ಗೌರವಧನ ಆಧಾರದ ಮೇಲೆ 2007-08ನೇ ಸಾಲಿನಲ್ಲಿ ತಾಲೂಕಾ ಪಂಚಾಯತಿಗೊಬ್ಬರಂತೆ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ (ಎಂಆರ್‌ಡಬ್ಲ್ಯೂ) ಗ್ರಾ.ಪಂ.ಗೆ ಒಬ್ಬರಂತೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ (ವಿಆರ್‌ಡಬ್ಲ್ಯೂ) ಹಾಗೂ ನಗರ ವ್ಯಾಪ್ತಿಯಲ್ಲಿ 2018 ರಲ್ಲಿ ನಗರ ಪುನರ್ವಸತಿ ಕಾರ್ಯಕರ್ತ (ಯುಆರ್‌ಡಬ್ಲ್ಯೂ) ನೇಮಕ ಮಾಡಿಕೊಂಡಿದ್ದು ಹೀಗೆ ರಾಜ್ಯದಲ್ಲಿರುವ ವಿಶೇಷಚೇತನರ ಸೇವೆ ಮಾಡಲು ಅವಕಾಶ ಕಲ್ಪಿಸಿದೆ.”
ಇದನ್ನೂ ಓದಿ | University of Fisheries: ಮೀನುಗಾರಿಕೆ ವಿವಿ ಸ್ಥಾಪನೆಗೆ ಕ್ರಮ: ಸಿದ್ದರಾಮಯ್ಯ
ಪ್ರಸ್ತುತ 6860 ವಿಶೇಷಚೇತನ ಗೌರವಧನ ಕಾರ್ಯಕರ್ತರು ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಸುಮಾರು ವರ್ಷಗಳಿಂದ ಕೆಲಸ ಮಾಡುತ್ತಿರುವ ನಮ್ಮೆಲ್ಲರಿಗೆ ಸೇವಾಭದ್ರತೆ ಎಂಬುದೇ ಇಲ್ಲ. ಕಚೇರಿಯಲ್ಲಿ ಕುಳಿತುಕೊಂಡು ಕೆಲಸ ಮಾಡಲು ಮೂಲಭೂತ ಸೌಲಭ್ಯಗಳಿಲ್ಲ. ನಾವು ಈ ಹುದ್ದೆಯನ್ನೇ ನಂಬಿಕೊಂಡು ಉಪಜೀವನ ಸಾಗಿಸುತ್ತಿದ್ದೇವೆ. ಭವಿಷ್ಯದಲ್ಲಿ ಇಂದಲ್ಲ ನಾಳೆ ಕಾಯಂ ಆಗುವುದೆಂಬ ನಂಬಿಕೆಯಿಂದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಹಾಕದೆ ಜೀವನವನ್ನು ಹಾಳು ಮಾಡಿಕೊಂಡಿದ್ದೇವೆ. ಸಾವಿರಾರು ಕಾರ್ಯಕರ್ತರ ವಯೋಮಿತಿ ಮೀರುತ್ತಿರುವುದರಿಂದ ಕರ್ನಾಟಕ ಸರ್ಕಾರ 6860 ಗೌರವಧನ ಕಾರ್ಯಕರ್ತರ ಹುದ್ದೆಗಳನ್ನು ಕಾಯಂಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ