ಬೆಂಗಳೂರು: ಸಾರ್ವಜನಿಕರನ್ನು ಡಿಜಿಟಲ್ ಅರೆಸ್ಟ್ (Digital Arrest) ಮಾಡುತ್ತಿದ್ದ ದುಬೈ ಮೂಲದ ವ್ಯಕ್ತಿ ಸೇರಿ ಐವರು ಸೈಬರ್ ವಂಚಕರನ್ನು ಬಂಧಿಸುವಲ್ಲಿ ಸಿಐಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 1.70 ಕೋಟಿ ರೂಪಾಯಿ, 7700 ಯುಎಸ್ ಡಾಲರ್ (6,46,441 ರೂ.) ಸೇರಿ 1.76 ಕೋಟಿ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ.
ದುಬೈನ ಯುಸುಫ್ ಸೇಠ್, ಬೆಂಗಳೂರಿನ ಮಹಮ್ಮದ್ ಶಾಕಿಬ್, ಮಹಮ್ಮದ್ ಅಯಾನ್, ಅಹಸಾನ್ ಅನ್ಸಾರಿ, ಸೊಲೋಮನ್ ರಾಜ ಬಂಧಿತರು. ನಿಮ್ಮ ಹೆಸರಿನ ಪಾರ್ಸೆಲ್‌ನಲ್ಲಿ ಡ್ರಗ್ಸ್ ಇದೆ ಎಂದು ಸಾರ್ವಜನಿಕರಿಗೆ ಕರೆ ಮಾಡುತ್ತಿದ್ದ ಆರೋಪಿಗಳು, ನಾವು ಪೊಲೀಸರು. ಇದನ್ನು ಬಗೆಹರಿಸಲು ಹಣ ಕೊಡಬೇಕು ಎಂದು ಬೇಡಿಕೆ ಇಡುತ್ತಿದ್ದರು.
ಈ ರೀತಿ ಬೆದರಿಕೆ ಹಾಕಿ ಕೊಡುಗು ಮೂಲದ ವ್ಯಕ್ತಿಯಿಂದ 2.21 ಕೋಟಿ ರೂ.ಗಳನ್ನು ಆರ್‌ಟಿಜಿಎಸ್ ಮಾಡಿಸಿಕೊಂಡಿದ್ದರು. ಆರೋಪಿಗಳು ದುಬೈನಲ್ಲಿ ವಂಚನೆ ಮಾಡಲು ಭಾರತೀಯ ಬ್ಯಾಂಕ್ ಅಕೌಂಟ್ ಅನ್ನು ಬಳಸಿದ್ದರು. ಈ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿತ್ತು. ಸದ್ಯ ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ವಂಚನೆ ಹಣದಿಂದ ಬೆನ್ಜ್ ಕಾರು ಖರೀದಿಸಿದ್ದರು. ಅವರಿಂದ ಒಟ್ಟು 1.76 ಕೋಟಿ ರೂ.ಗಳನ್ನು ಸಿಐಡಿ ವಶಕ್ಕೆ ಪಡೆದಿದ್ದು, ಸಿಐಡಿ ಪೊಲೀಸರಿಂದ ತನಿಖೆ ಮುಂದುವರಿದಿದೆ.
ಇದನ್ನೂ ಓದಿ | Crime News: ಕುಡಿದ ಮತ್ತಿನಲ್ಲಿ ಪತ್ನಿಯ ಕುತ್ತಿಗೆ ಕಡಿದು ಕೈಯಲ್ಲಿ ಕತ್ತಿ ಹಿಡಿದು ನರ್ತಿಸಿದ ಪತಿ
ಆನ್‌ಲೈನ್ ಹೂಡಿಕೆ ಹೆಸರಲ್ಲಿ ವಂಚನೆ; 1.53 ಕೋಟಿ ರೂ. ಕಳೆದುಕೊಂಡ ಟೆಕ್ಕಿ ದಂಪತಿ
ಬೆಂಗಳೂರು: ಸೈಬರ್ ಕ್ರೈಂ (Cyber Crime) ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದೀಗ ವಂಚಕನೊಬ್ಬ ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ಬೆಂಗಳೂರಿನ ಟೆಕ್ಕಿ ದಂಪತಿ ಬಳಿಯಿಂದ ಬರೋಬ್ಬರಿ 1.53 ಕೋಟಿ ರೂಪಾಯಿ ಪೀಕಿಸಿದ್ದು, ಸದ್ಯ ಪೊಲೀಸರು 1.4 ಕೋಟಿ ರೂ. ಅನ್ನು 50ಕ್ಕೂ ಹೆಚ್ಚು ಖಾತೆಗಳಿಂದ ರಿಕವರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ವಂಚನೆಗೆ ಒಳಗಾದ ದಂಪತಿ ನೀಡಿ ದೂರು ಆಧರಿಸಿ ಪೂರ್ವ ವಲಯದ ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಬಾಣಸವಾಡಿಯಲ್ಲಿ ವಾಸಿಸುತ್ತಿರುವ ದಂಪತಿಗೆ ಬ್ಯಾಂಕ್ ಅಧಿಕಾರಿಗಳ ಜತೆ ಸೇರಿ ವಂಚಕ ಬಲೆ ಬೀಸಿದ್ದ. ಹೆಚ್ಚಿನ ಲಾಭದ ಆಸೆ ತೋರಿಸಿ ಈ ಕೃತ್ಯ ಎಸಗಿದ್ದ ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ.
ಬ್ರಿಟನ್‌ನಲ್ಲಿ ಕುಳಿತು ವಂಚಕ ಈ ವಂಚನೆ ಜಾಲವನ್ನು ನಡೆಸುತ್ತಿದ್ದ. ಈತ ಹಣ ಸ್ವೀಕರಿಸಲು ಉತ್ತರ ಭಾರತೀಯರ ಒಂದಿಷ್ಟು ಖಾತೆಗಳನ್ನು ಬಾಡಿಗೆಗೆ ಪಡೆದಿದ್ದ. ಅಷ್ಟೇ ಅಲ್ಲ ಹೂಡಿಕೆ ನಿಜ ಎಂದು ಬಿಂಬಿಸಲು ಈತ ನಕಲಿ ವೆಬ್‌ಸೈಟ್ ಒಂದನ್ನು ತೆರೆದು ದಂಪತಿಗೆ ಇದರ ಆಕ್ಸೆಸ್ ಕೂಡ ನೀಡಿದ್ದ.
ಇದರಲ್ಲಿ ತಮ್ಮ ಹೂಡಿಕೆ ಬೆಳೆಯುತ್ತಿರುವುದನ್ನು ಕಂಡು ದಂಪತಿ ಖುಷಿಯಾಗಿದ್ದರು. ಕೆಲವು ತಿಂಗಳ ನಂತರ ಒಂದಿಷ್ಟು ಹಣವನ್ನು ಹಿಂಪಡೆಯಲು ನೋಡಿದ್ದಾರೆ. ಆದರೆ ಹಣ ತೆಗೆಯಲು ಆಗುತ್ತಿರಲಿಲ್ಲ. ಇದರಿಂದ ಅವರಿಗೆ ಅನುಮಾನ ಮೂಡತೊಡಗಿತ್ತು. ಅಷ್ಟೇ ಅಲ್ಲ ನಕಲಿ ವೆಬ್‌ಸೈಟ್‌ನ ಆಕ್ಸೆಸ್ ಕೂಡ ಹೋಗಿತ್ತು. ಕೊನೆಗೆ ದಂಪತಿಯನ್ನು ಈ ವೆಬ್‌ಸೈಟ್ ಬ್ಲಾಕ್ ಮಾಡಿತ್ತು.
ಇದರೊಂದಿಗೆ ತಾವು ವಂಚನೆಗೆ ಸಿಲುಕಿರುವುದು ದಂಪತಿಗೆ ದೃಢವಾಗಿತ್ತು. ಕೂಡಲೇ ದಂಪತಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ಆರಂಭಿಸಿದ್ದಲ್ಲದೆ ಬ್ಯಾಂಕ್ ಅಧಿಕಾರಿಗಳ ಜತೆ ಸೇರಿ ನಡೆಸಿದ್ದ ಈ ವಂಚನೆ ಜಾಲವನ್ನು ಭೇದಿಸಿದ್ದಾರೆ. ಈ ಹಗರಣದಲ್ಲಿ ಭಾಗಿಯಾಗಿದ್ದ 50ಕ್ಕೂ ಹೆಚ್ಚು ಖಾತೆಗಳನ್ನು ಬ್ಲಾಕ್ ಮಾಡಿದ್ದಾರೆ.
ಲಂಡನ್ನಿಂದ ಕೃತ್ಯ
ʼʼಆರೋಪಿ ಲಂಡನ್ನಲ್ಲಿ ಕುಳಿತು ಕೃತ್ಯ ಎಸಗಿರುವ ಬಗ್ಗೆ ಮಾಹಿತಿ ಇದ್ದು, ಇದಕ್ಕಾಗಿ ಉತ್ತರ ಭಾರತದ ಹಲವಾರು ಅಕೌಂಟ್ಗಳನ್ನು ಬಳಕೆ ಮಾಡಿದ್ದಾನೆ. ಷೇರು ಮಾರ್ಕೆಟ್ ಬ್ರೋಕರೇಜ್ ರೀತಿಯ ನಕಲಿ ವೆಬ್‌ಸೈಟ್ ರಚನೆ ಮಾಡಿದ್ದಾನೆ. ಸದ್ಯ ಆರೋಪಿ ಯಾರು ಎಂಬುದರ ಸ್ಪಷ್ಟತೆ ಇಲ್ಲʼʼ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಶಪಡಿಸಿಕೊಳ್ಳಲಾದ ಹಣವನ್ನು ಪೊಲೀಸರು ವಂಚನೆಗೆ ಒಳಗಾದ ದಂಪತಿಗೆ ಮರಳಿಸುತ್ತಿದ್ದಾರೆ.