Site icon Vistara News

ಜನರ ಜತೆಗೆ ಮುಖಾಮುಖಿಗೆ ಡಿಜಿಟಲ್‌ ಮಾಧ್ಯಮ ಸಶಕ್ತ: ಸಿ.ಎಸ್. ಸುಧೀರ್

sudheer cs

ಬೆಂಗಳೂರು: ಜನರ ಜತೆ ಮುಖಾಮುಖಿಗೆ ಡಿಜಿಟಲ್‌ ಮಾಧ್ಯಮ ಅತ್ಯಂತ ಸಶಕ್ತ ಎಂದು ಫ್ರೀಡಂ ಆ್ಯಪ್‌ನ ಸಂಸ್ಥಾಪಕರು ಹಾಗೂ ಸಿಇಒ ಸಿ.ಎಸ್.‌ ಸುಧೀರ್‌ ತಿಳಿಸಿದರು.

ಭಾರತದಲ್ಲಿ ಡಿಜಿಟಲ್‌ ಮಾಧ್ಯಮದ ಭವಿಷ್ಯ ಕುರಿತ ವಿಸ್ತಾರ ಡಿಜಿಟಲ್‌ ಸಂವಾದದಲ್ಲಿ ಮಾತನಾಡಿದ ಅವರು, ” ಕೃಷಿ, ಸಣ್ಣಪುಟ್ಟ ಉದ್ಯೋಗ, ವ್ಯಾಪಾರ ಮಾಡುವವರಿಗೆ ತಮ್ಮದೇ ಗುರಿ ಇರುತ್ತದೆ. ತಮ್ಮ ಆದಾಯವನ್ನು ಹೆಚ್ಚಿಸುವ ಆಶಯವನ್ನು ಹೊಂದಿರುತ್ತಾರೆ. ದೇಶದಲ್ಲಿ ಕೋಟ್ಯಂತರ ಗೃಹಿಣಿಯರಿಗೆ ತಮ್ಮ ಆದಾಯ ಗಳಿಕೆಗೆ ಒಂದು ಉತ್ತಮ ಮಾದರಿ ಬೇಕು ಎಂಬ ಹಂಬಲ ಇರುತ್ತದೆ. ಆದರೆ ಇದಕ್ಕೆ ತರಬೇತಿಯ ಅಗತ್ಯ ಇರುತ್ತದೆ. ತಂತ್ರಜ್ಞಾನದ ನೆರವು ಮತ್ತು ಕೌಶಲ ಬೇಕಾಗುತ್ತದೆ. ಇವೆಲ್ಲದಕ್ಕೂ ಮುಖಾಮುಖಿಯ ಅಗತ್ಯವನ್ನು ಡಿಜಿಟಲ್‌ ಮಾಧ್ಯಮ ಪರಿಣಾಮಕಾರಿಯಾಗಿ ಕಲ್ಪಿಸುತ್ತದೆ. ಫ್ರೀಡಂ ಆ್ಯಪ್‌ ಹೀಗಾಗಿಯೇ ಜನಪ್ರಿಯವಾಗಿದೆ. ಈ ಬಗ್ಗೆ ಸೂಕ್ತ ತರಬೇತಿಯನ್ನು ನೀಡುತ್ತದೆ. ಹದಿನೈದು ವರ್ಷಗಳ ಹಿಂದೆ ಇಂಥ ಬದಲಾವಣೆಯನ್ನು ನಿರೀಕ್ಷಿಸಲೂ ಸಾಧ್ಯವಿರಲಿಲ್ಲʼʼ ಎಂದು ವಿವರಿಸಿದರು.

ಉದಾಹರಣೆಗೆ ಜೇನು ಸಾಕಣೆ ಮಾಡಿ ವರ್ಷಕ್ಕೆ ಕೋಟ್ಯಂತರ ರೂ. ಸಂಪಾದನೆ ಮಾಡುವವರೂ ಇದ್ದಾರೆ. ಆದರೆ ಹೇಗೆ ಇದರಲ್ಲಿ ಆದಾಯ ಮಾಡುವುದು ಎಂಬ ಯೋಚನೆಯಲ್ಲಿಯೇ ಕಾಲ ಕಳೆಯುವವರು ಇರುತ್ತಾರೆ. ಈ ಸಮಸ್ಯೆಗೆ ಡಿಜಿಟಲ್‌ ಮಾಧ್ಯಮವಾಗಿ ಫ್ರೀಡಂ ಆ್ಯಪ್‌ ಸಹಕಾರಿಯಾಗುತ್ತದೆ ಎಂದು ವಿವರಿಸಿದರು.

” ಮಾಧ್ಯಮಗಳು ಜನರಲ್ಲಿ ಒಳ್ಳೆಯ ಹವ್ಯಾಸಗಳು, ಉತ್ತಮ ಗುಣಗಳನ್ನು, ಉದ್ಯಮಶೀಲತೆಯನ್ನು ಬೆಳೆಸಬೇಕು. ಅದು ಅವುಗಳ ಸಾಮಾಜಿಕ ಜವಾಬ್ದಾರಿಯೂ ಹೌದು. ಜನರ ಬದುಕಿಗೆ ಹತ್ತಿರವಾಗುವಂಥ, ಉಪಯೋಗವಾಗುವಂಥ ಸುದ್ದಿ, ವಿಶ್ಲೇಷಣೆ, ಮಾಹಿತಿ, ತಿಳುವಳಿಕೆಯನ್ನು ಡಿಜಿಟಲ್‌ ಮಾಧ್ಯಮ ನೀಡಬೇಕುʼʼ ಎಂದರು.

Exit mobile version