ಬೆಂಗಳೂರು: ರಾಗಿ ಅಥವಾ ಭತ್ತದ ತಳಿಗೆ ರಾಜ್ಯದ ಹಿರಿಯ ಮುತ್ಸದ್ದಿ, ರೈತ ಹೋರಾಟಗಾರರಾದ ದಿ. ಜಿ. ಮಾದೇಗೌಡರ (G Madegowda) ಹೆಸರಿಡಲು ಕ್ರಮ ವಹಿಸಿ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ (Agricultural University) ಉಪ ಕುಲಪತಿಗಳಿಗೆ ಮತ್ತು ಕೃಷಿ ಇಲಾಖೆ ಕಾರ್ಯದರ್ಶಿಗಳಿಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ (N Chaluvarayaswamy) ಅವರು ಸೂಚನೆ ನೀಡಿದ್ದಾರೆ. ಈ ಮೂಲಕ ಶಾಸಕ ದಿನೇಶ್ ಗೂಳಿಗೌಡ (Dinesh Gooligowda) ಅವರ ಮನವಿಗೆ ತುರ್ತು ಸ್ಪಂದನೆ ನೀಡಿದ್ದಾರೆ.
ಜುಲೈ 12ರ ಸೋಮವಾರದಂದು ನಡೆದಿದ್ದ ಡಾ. ಜಿ. ಮಾದೇಗೌಡ ಪ್ರತಿಷ್ಠಾನದ 23ನೇ ವರ್ಷದ ರಾಜ್ಯ ಮಟ್ಟದ ಜಿ. ಮಾದೇಗೌಡ ಸಮಾಜಸೇವಾ ಮತ್ತು ಸಾವಯವ ಕೃಷಿ ಪ್ರಶಸ್ತಿ ಸಮಾರಂಭದಲ್ಲಿ ಶಾಸಕ ದಿನೇಶ್ ಗೂಳಿಗೌಡ ಅವರು ಈ ವಿಷಯದ ಬಗ್ಗೆ ಕೃಷಿ ಸಚಿವರ ಗಮನ ಸೆಳೆದಿದ್ದರು.
“ಜಿ. ಮಾದೇಗೌಡರು ಕಳೆದ 60 ವರ್ಷಗಳ ಕಾಲ ಶೈಕ್ಷಣಿಕವಾಗಿ, ರಾಜಕೀಯವಾಗಿ ಹತ್ತು ಹಲವು ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಅವರ ಹೆಸರು ಮುಂದಿನ ಪೀಳಿಗೆಗೆ ಚಿರಸ್ಥಾಯಿಯಾಗಿ ಉಳಿಯಲು ಭತ್ತ ಅಥವಾ ರಾಗಿ ತಳಿಗೆ ಅವರ ಹೆಸರನ್ನು ನಾಮಕರಣ ಮಾಡಬೇಕು. ಈ ಮೂಲಕ ಅವರಿಗೆ ಗೌರವವನ್ನು ಸಮರ್ಪಣೆ ಮಾಡಬೇಕು” ಎಂದು ವೇದಿಕೆಯಲ್ಲಿದ್ದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ ಮನವಿ ಮಾಡಿದ್ದರು. ಈ ಮನವಿಗೆ ಅದೇ ಕಾರ್ಯಕ್ರಮದಲ್ಲಿ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದರು. ತುರ್ತಾಗಿ ಈ ಬಗ್ಗೆ ಕ್ರಮ ವಹಿಸುವುದಾಗಿಯೂ ಹೇಳಿದ್ದರು.
ಈಗ ಈ ಸಂಬಂಧ ಕ್ರಮ ವಹಿಸುವಂತೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಉಪ ಕುಲಪತಿಗಳಿಗೆ ಮತ್ತು ಕೃಷಿ ಇಲಾಖೆ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: Independence Day : ಯುವಾಬ್ರಿಗೇಡ್‌ನಿಂದ ಈ ಸ್ವಾತಂತ್ರ್ಯ ಶ್ರಾವಣಕ್ಕೆ ವಿಶ್ವಗುರು ಭಾರತದ ಸಂಕಲ್ಪ
ಶಾಸಕ ದಿನೇಶ್ ಗೂಳಿಗೌಡ ಅಭಿನಂದನೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ದಿನೇಶ್ ಗೂಳಿಗೌಡ ಅವರು, ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರು ತುರ್ತಾಗಿ ಸ್ಪಂದಿಸಿರುವುದು ನಿಜಕ್ಕೂ ಅಭಿನಂದನೀಯ ಎಂದು ಹೇಳಿದ್ದಾರೆ.