Site icon Vistara News

Namma Metro: ನಮ್ಮ ಮೆಟ್ರೋಗೆ ಬಸವೇಶ್ವರರ ಹೆಸರಿಡಲು ಸಿಎಂ ಜತೆ ಚರ್ಚೆ: ಎಂ.ಬಿ. ಪಾಟೀಲ್‌

KHIR City project Launch on August 23 at bengaluru says Minister MB Patil

ಬೆಂಗಳೂರು: ಅನುಭವ ಮಂಟಪದ ರೂವಾರಿ ಬಸವೇಶ್ವರರ ಹೆಸರನ್ನು ‘ನಮ್ಮ ಮೆಟ್ರೋʼಗೆ ಇಡುವ ಸಂಬಂಧ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ (Namma Metro) ಶುಕ್ರವಾರ ತಿಳಿಸಿದರು.

ಮೆಟ್ರೋಗೆ ಬಸವೇಶ್ವರರ ಹೆಸರು ಇಡಬೇಕು ಎನ್ನುವ ಬೇಡಿಕೆ ಇದೆ. ‌ಕೇವಲ ಯಾವುದೋ ಒಂದು ನಿಲ್ದಾಣಕ್ಕೆ ಹೆಸರು ಇಡುವ ಬದಲು‌ ಇಡೀ ಮೆಟ್ರೊ ವ್ಯವಸ್ಥೆಗೇ ಬಸವೇಶ್ವರರ ಹೆಸರು ಇಡುವುದು ಸೂಕ್ತ. ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇಟ್ಟ ಹಾಗೆ ಮೆಟ್ರೋಗೊ ಮಾಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ಅಂತಿಮ ಮಾಡಲಾಗುವುದು ಎಂದರು.

ಅಂತೆಯೇ, ಬಿಜಾಪುರ ಹೋಗಿ ವಿಜಯಪುರ ಆಗಿರುವ ಜಿಲ್ಲೆಗೆ ʼಬಸವೇಶ್ವರ ಜಿಲ್ಲೆʼ ಎಂದು ನಾಮಕರಣ ಮಾಡಬೇಕೆಂಬ ಧ್ವನಿಯೂ ಕೇಳಿಬಂದಿದೆ. ಯಾವುದಕ್ಕೇ ಆಗಲಿ ಬಸವೇಶ್ವರರ ಹೆಸರನ್ನು ಇಡುವುದಕ್ಕೆ ನಮ್ಮ ಯಾರ ವಿರೋಧವೂ ಇಲ್ಲ. ವೈಯಕ್ತಿಕವಾಗಿ ನಾನಂತೂ ಬಸವಣ್ಣನವರ ಅಪ್ಪಟ ಅನುಯಾಯಿ. ಆದರೆ, ಹೆಸರು ಬದಲಾವಣೆ ಮಾಡುವುದಕ್ಕೆ ಮುಂಚೆ ಇತರ ಹತ್ತು ಹಲವು ಸಾಧಕ ಬಾಧಕಗಳ ಬಗ್ಗೆ ಆಲೋಚಿಸಬೇಕಾಗುತ್ತದೆ ಎಂದು ಎಂ.ಬಿ. ಪಾಟೀಲ್ ವಿವರಿಸಿದರು.

ಕರ್ನಾಟಕದ ಹೆಸರು ʼಬಸವೇಶ್ವರ ನಾಡುʼ?

ಕರ್ನಾಟಕ ರಾಜ್ಯದ ಹೆಸರನ್ನು ʼಬಸವೇಶ್ವರ ನಾಡುʼ ಎಂದು ಬದಲಾಯಿಸುವ ಪ್ರಸ್ತಾವ ಇದೆಯೇ ಎಂದು ಸುದ್ದಿಗಾರರ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಂತಹ ಪ್ರಸ್ತಾಪದ ಬಗ್ಗೆ ನನಗೆ ಯಾವ ಮಾಹಿತಿಯೂ ಇಲ್ಲ. ಆದರೆ, ಮಹಾರಾಷ್ಟ್ರದಲ್ಲಿ ಛತ್ರಪತಿ ಶಿವಾಜಿ ಅವರನ್ನು ಆ ರಾಜ್ಯದ ಸಾಂಸ್ಕೃತಿಕ ಪ್ರತೀಕ ಎಂದು ಪರಿಗಣಿಸಿರುವ ರೀತಿಯಲ್ಲೇ ನಮ್ಮ ರಾಜ್ಯದಲ್ಲಿ ಬಸವೇಶ್ವರ ಅವರನ್ನು ಸಾಂಸ್ಕೃತಿಕ ಪ್ರತೀಕವಾಗಿ ಪರಿಗಣಿಸಬೇಕು ಎಂಬ ಬೇಡಿಕೆಗಳು ಇವೆ ಎಂದರು.

ಇದನ್ನೂ ಓದಿ | Tiger Nail : ಜನರ ದಾರಿ ತಪ್ಪಿಸಲು ಹುಲಿ ಉಗುರಿನ ನಾಟಕ; ಬೋಗಸ್‌ ಭಾಗ್ಯ ಮರೆಮಾಚಲು ಪ್ಲ್ಯಾನ್‌ ಎಂದ ಸಿ.ಟಿ. ರವಿ

ಒಂದು ಹೆಸರನ್ನು ಬದಲಾಯಿಸಿದರೆ ಅದು ಸ್ಥಳೀಯ ಮಟ್ಟದಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದವರೆಗೆ ಬದಲಾವಣೆ ಆಗಬೇಕಾಗುತ್ತದೆ. ಹೀಗಾದಾಗ ಕೆಲವು ತೊಡಕುಗಳು ಕೂಡ ಉಂಟಾಗುತ್ತವೆ. ಬಿಜಾಪುರ ಎಂಬ ಹೆಸರನ್ನು ವಿಜಯಪುರ ಎಂದು ಬದಲಾಯಿಸಿದಾಗ ಕೂಡ ಸಾಕಷ್ಟು ಅಡಚಣೆಗಳು ಎದುರಾಗಿದ್ದವು. ಈಗಷ್ಟೇ ಅವೆಲ್ಲಾ ಒಂದು ಹಂತಕ್ಕೆ ಬಂದಿವೆ. ಅಲ್ಪಾವಧಿಯಲ್ಲಿ ಒಂದು ಸ್ಥಳದ ಹೆಸರನ್ನು ಎರಡನೇ ಸಲ ಬದಲಾಯಿಸುವ ಬಗ್ಗೆ ಸಾಕಷ್ಟು ಚರ್ಚೆ ನಡೆಸಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

Exit mobile version