ಬೆಂಗಳೂರು: ‘ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ’ ಎಂಬ ಮಾತಿನಂತೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದು, ಕಾಂಗ್ರೆಸ್ ಗೆಲುವು ಸಾಧಿಸಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ, ಸಚಿವ ಸಂಪುಟ ಸಭೆ ವಿಸ್ತರಣೆಯಾದರೂ ಪಕ್ಷದಲ್ಲಿ ಆಂತರಿಕ ಗೊಂದಲ, ಅಸಮಾಧಾನ ಮಾತ್ರ ನಿಂತಿಲ್ಲ. ಖಾತೆ ಹಂಚಿಕೆ ಬಳಿಕವೂ ಸಚಿವರ ಮಧ್ಯೆಯೇ ಅಸಮಾಧಾನದ ಹೊಗೆ ಜಾಸ್ತಿಯಾದ ಕಾರಣ ರಾತ್ರೋರಾತ್ರಿ ಸಿದ್ದರಾಮಯ್ಯ ಅವರು ಖಾತೆಗಳನ್ನು ಬದಲಾವಣೆ ಮಾಡಿದ್ದಾರೆ.
ಹೌದು, ಎಂ.ಸಿ.ಸುಧಾಕರ್ ಅವರಿಗೆ ನೀಡಿದ್ದ ವೈದ್ಯಕೀಯ ಶಿಕ್ಷಣ ಶರಣ ಪ್ರಕಾಶ್ ಪಾಟೀಲ್ ಅವರಿಗೆ ನೀಡಲಾಗಿದೆ. ಇನ್ನು ಶರಣ ಪ್ರಕಾಶ್ ಪಾಟೀಲ್ ಅವರಿಗೆ ನೀಡಿದ್ದ ಉನ್ನತ ಶಿಕ್ಷಣ ಖಾತೆಯನ್ನು ಎಂ.ಸಿ.ಸುಧಾಕರ್ ಅವರಿಗೆ ನೀಡಿ ಸಮಾಧಾನ ಮಾಡಿದ್ದಾರೆ. ಹಾಗೆಯೇ, ಪ್ರಿಯಾಂಕ್ ಖರ್ಗೆ ಅವರಿಗೆ ಪಂಚಾಯತ್ ರಾಜ್ ಜತೆಗೆ ಐಟಿಬಿಟಿ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಕಾನೂನು ಸಂಸದೀಯ ಜತೆಗೆ ಪ್ರವಾಸೋದ್ಯಮ ಖಾತೆಯನ್ನು ಎಚ್.ಕೆ.ಪಾಟೀಲ್ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ಬೋಸರಾಜು ಅವರಿಗೆ ಸಣ್ಣ ನೀರಾವರಿ ಖಾತೆ ಜತೆಗೆ ವೈಜ್ಞಾನ ಮತ್ತು ತಂತ್ರಜ್ಞಾನ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಮತ್ತೊಂದೆಡೆ, ಡಾ.ಜಿ.ಪರಮೇಶ್ವರ್ ಅವರಿಗೆ ಗೃಹ ಖಾತೆಯನ್ನು ನಿರ್ವಹಣೆ ಮಾಡಲು ಇಷ್ಟವಿಲ್ಲ. ರಾಮಲಿಂಗಾರೆಡ್ಡಿ ಅವರಿಗೆ ಸಾರಿಗೆ ಖಾತೆ ಸುತಾರಾಂ ಬೇಕಾಗಿಲ್ಲ. ಇವರಿಬ್ಬರು ಕೂಡ ಖಾತೆ ಬದಲಾವಣೆಗೆ ಪಟ್ಟು ಹಿಡಿದಿರುವುದು ಸಿದ್ದರಾಮಯ್ಯ ಅವರಿಗೆ ತಲೆನೋವು ತಂದಿದೆ. ಹಾಗಾಗಿಯೇ, ಸಚಿವರು ಹಾಗೂ ಅವರ ಖಾತೆ ಕುರಿತ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಲು ವಿಳಂಬವಾಗಿದೆ ಎಂದು ತಿಳಿದುಬಂದಿದೆ.
ಇಲ್ಲಿದೆ ಸಚಿವರು ಹಾಗೂ ಅವರ ಖಾತೆಗಳ ಅಂತಿಮ ಪಟ್ಟಿ
ಮೂಲ-ವಲಸಿಗ ಜಗಳ
ಸಚಿವ ಸಂಪುಟ ವಿಸ್ತರಣೆ ನಂತರ ಸಚಿವರಲ್ಲಿ ಅಸಮಾಧಾನದ ಜತೆಗೆ ಕಾಂಗ್ರೆಸ್‌ನಲ್ಲಿ ಮತ್ತೆ ಮೂಲ ಹಾಗೂ ವಲಸಿಗ ಜಗಳ ಆರಂಭವಾಗಿದೆ. ಅತ್ಯಂತ ಹಿರಿಯ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದರೂ ಸಚಿವ ಸ್ಥಾನ ಸಿಗದೇ ಇರುವ ಬಗ್ಗೆ ಬಿ.ಕೆ. ಹರಿಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ʼಹೊರಗಿನಿಂದ ಬಂದʼ ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.
ಇದನ್ನೂ ಓದಿ: Karnataka Cabinet expansion: ಸಂಪುಟದಲ್ಲಿನ್ನು ಸೀಟಿಲ್ಲ; ನಾಯಕರ, ಬೆಂಬಲಿಗರ ಆಕ್ರೋಶಕ್ಕೆ ಬೆಲೆ ಇಲ್ಲ
ಸಚಿವ ಸ್ಥಾನ ಮಿಸ್ ಆದ ಕುರಿತು ಮಾತನಾಡಿದ ಹರಿಪ್ರಸಾದ್, ಸಿಎಂ ಏನು ಬೇಕೋ ಹಾಗೆ ಮಾಡಿಕೊಂಡಿದ್ದಾರೆ. ಸಭಾ ನಾಯಕನಿಗೆ ಸಚಿವ ಸ್ಥಾನ ನೀಡುವ ಪದ್ಧತಿ, ಸಂಪ್ರದಾಯ ಇತ್ತು. ಸಿಎಂ ಅದನ್ನು ಈಗ ಬದಲಾಯಿಸಿದ್ದಾರೆ. ಅಷ್ಟಕ್ಕೂ ನನ್ನನ್ನು ಮಂತ್ರಿ ಮಾಡಿ ಎಂದು ಯಾರಲ್ಲೂ ಕೇಳಿಕೊಂಡಿರಲಿಲ್ಲ. ಎಲ್ಲಿಯವರೆಗೂ ಹೇಳುತ್ತಾರೋ ಅಲ್ಲಿಯವರೆಗೂ ನಾನು ಇರುತ್ತೇನೆ ಎಂದರು. ಮತ್ತೊಂದೆಡೆ, ಖಾತೆ ಸಿಗದ ಕಾರಣ ಟಿ.ಬಿ.ಜಯಚಂದ್ರ ಅವರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.