ಹಾವೇರಿ: ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳಿಗೆ ಅಭ್ಯರ್ಥಿಗಳ ಆಯ್ಕೆಯು ತಲೆನೋವಾಗಿ ಪರಿಣಮಿಸುತ್ತಿದೆ. ಯಾರಿಗೇ ಟಿಕೆಟ್ ನೀಡಿದರೂ ಮತ್ತೊಂದು ಬಣ ಬಂಡಾಯ ಏಳುತ್ತಿರುವ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ಹಾವೇರಿ ಜಿಲ್ಲೆಯ ಹಲವು ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಕೊಡುವ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಬಂಡಾಯ ಭುಗಿಲೇಳುತ್ತಿದೆ. ಹಾನಗಲ್, ಶಿಗ್ಗಾಂವಿ ಕ್ಷೇತ್ರದಲ್ಲಿ ಬಂಡಾಯದ ಬಾವುಟವನ್ನು ಹಾರಿಸಲಾಗಿತ್ತು. ಈಗ ಬ್ಯಾಡಗಿಯ ಸರದಿಯಾಗಿದೆ. ಮಾಜಿ ಸಚಿವ ಬಸವರಾಜ್ ಶಿವಣ್ಣನವರ್‌ಗೆ ಈ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ತೀವ್ರ ಆಕ್ರೋಶ ಹೊರಹಾಕಿರುವ ಕಾಂಗ್ರೆಸ್ ಮುಖಂಡ ಎಸ್.ಆರ್. ಪಾಟೀಲ್ ಅಸಮಾಧಾನವನ್ನು ಹೊರಹಾಕಿದ್ದಾರೆ.
ಬ್ಯಾಡಗಿ ಕಾಂಗ್ರೆಸ್ ಟಿಕೆಟ್ ಅನ್ನು ಮಾಜಿ ಸಚಿವ ಬಸವರಾಜ್ ಶಿವಣ್ಣನವರ್‌ಗೆ ಘೋಷಣೆ ಮಾಡುತ್ತಿದ್ದಂತೆ ಬಂಡಾಯ ಆರಂಭವಾಗಲಿದೆ. 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಸ್.ಆರ್. ಪಾಟೀಲ್ ತಮಗೇ ಟಿಕೆಟ್ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಸಂಬಂಧ ಅವರ ತಮ್ಮ ಬೆಂಬಲಿಗರ ಸಭೆ ನಡೆಸಿದ್ದು, ತಮ್ಮ ಆಕ್ರೋಶವನ್ನು ಹೊರಹಾಕಿದರು. ಆಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಬೆಂಬಲಿಗರು ಒತ್ತಾಯ ಮಾಡಿದ್ದಾರೆ. ಅಲ್ಲದೆ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರೆ ಆರ್ಥಿಕ ನೆರವು ನೀಡುವುದಾಗಿ ಹೇಳಿದ್ದಾರೆ.
ಏಪ್ರಿಲ್ 8ರವರೆಗೆ ಗಡುವು
ಈ ಬಗ್ಗೆ ತೀವ್ರ ಆಕ್ರೋಶವನ್ನು ಹೊರಹಾಕಿರುವ ಎಸ್.ಆರ್. ಪಾಟೀಲ್, 1977ರಲ್ಲಿ ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ನಾಗಿದ್ದೆ. ಮೂರು ಸಲ ಪುರಸಭೆ ಅಧ್ಯಕ್ಷನಾಗಿದ್ದೆ. ದುಡ್ಡು ಕೊಟ್ಟು ರಾಜಕಾರಣ ಮಾಡುವುದಕ್ಕೆ ಬಂದವನಲ್ಲ. ಪಕ್ಷದ ಟಿಕೆಟ್ ತಗೊಂಡು ಬಂದವರಿಗೆ ಗೆಲ್ಲಿಸಿ ಕಳುಹಿಸಿದ್ದೇವೆ. ಪಕ್ಷದ ಉಳಿವಿಗಾಗಿ ನನ್ನ ಸ್ವಂತ ಹಣ ವೆಚ್ಛ ಮಾಡಿದ್ದೇನೆ. 2008ರಲ್ಲಿ ಬಸವರಾಜ್ ಶಿವಣ್ಣನವರ್ ಬ್ಯಾಡಗಿ ಕ್ಷೇತ್ರಕ್ಕೆ ಬರಲ್ಲ ಎಂದು ಹೇಳಿದರು. 2013ರಲ್ಲಿ ಪಕ್ಷ ನಮಗೆ ಅನ್ಯಾಯ ಮಾಡಿತು. 2013ರಲ್ಲಿ ಶಿವಣ್ಣನವರ್‌ಗಾಗಿ ನಾನು ಟಿಕೆಟ್ ತ್ಯಾಗ ಮಾಡಿದೆ. 2018ರಲ್ಲಿ ನನಗೆ ಟಿಕೆಟ್ ಸಿಕ್ಕಾಗ ದ್ರೋಹ ಮಾಡಿದರು. ಮನಷ್ಯತ್ವ ಇರುವ ವ್ಯಕ್ತಿ ನನಗೆ ದ್ರೋಹ ಮಾಡುತ್ತಿರಲಿಲ್ಲ. ಕೆಲವರು ನನಗೆ ಟಿಕೆಟ್ ಬಿಟ್ಟು ಕೊಟ್ಟೆ ಎಂದು ಹೇಳಿಕೊಳ್ಳುತ್ತಾರೆ. ಕಳೆದ ನಾಲ್ಕೂವರೆ ವರ್ಷ ಯಾರೂ ಕ್ಷೇತ್ರಕ್ಕೆ ಬರಲಿಲ್ಲ. ಹೀಗಾಗಿ ಏಪ್ರಿಲ್ 8ರವರೆಗೆ ಟಿಕೆಟ್ ಬದಲಾವಣೆಗೆ ಕಾಲಾವಕಾಶ ಕೊಡುತ್ತೇನೆ. ಇಲ್ಲದಿದ್ದರೆ ಅಂದು ಮತ್ತೊಂದು ಸಭೆ ಕರೆದು ನನ್ನ ತೀರ್ಮಾನವನ್ನು ತಿಳಿಸುತ್ತೇನೆ ಎಂದು ಹರಿಹಾಯ್ದಿದ್ದಾರೆ.
ಇದನ್ನೂ ಓದಿ: Road Accident: ನಾಯಂಡಹಳ್ಳಿ ಬಳಿ ಭೀಕರ ಅಪಘಾತಕ್ಕೆ ಮಹಿಳೆ ತಲೆ ಛಿದ್ರ; ರೊಚ್ಚಿಗೆದ್ದ ಸಾರ್ವಜನಿಕರಿಂದ ಕಲ್ಲು ತೂರಾಟ
ಇದು ತಪ್ಪು ಆಯ್ಕೆ
ಬ್ಯಾಡಗಿ ಕ್ಷೇತ್ರದ ಅಭ್ಯರ್ಥಿಯನ್ನು ತಪ್ಪಾಗಿ ಆಯ್ಕೆ ಮಾಡಿದ್ದರು. ಬಹಳಷ್ಟು ಜನರಿಗೆ ಅಭ್ಯರ್ಥಿ ಘೋಷಣೆ ಬಗ್ಗೆ ಸಮಾಧಾನವಿಲ್ಲ. ಬೇರೆ ಬೇರೆ ಪಕ್ಷಗಳಿಂದ ಕರೆ ಮಾಡಿದ್ದರು. ಜೆಡಿಎಸ್‌ನಿಂದಲೂ ಕರೆ ಮಾಡಿದ್ದರು. ಟಿಕೆಟ್ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಇದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶನಿವಾರ (ಏ. 1) ಕರೆ ಮಾಡಿದ್ದರು. ನಾವೆಲ್ಲರೂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚಿಸುತ್ತೇವೆ. ಏಪ್ರಿಲ್ 8ರಂದು ಒಂದು ನಿರ್ಧಾರಕ್ಕೆ ಬರುತ್ತೇವೆ. ಮನೋಹರ ತಹಸೀಲ್ದಾರ್ ಸಹ ಕರೆ ಮಾಡಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ ಎಸ್.ಆರ್. ಪಾಟೀಲ್, ಬ್ಯಾಡಗಿ ಕ್ಷೇತ್ರದಲ್ಲಿ ಪಕ್ಷ ಕಟ್ಟಲು ಶಿವಣ್ಣನವರ್ ಕೊಡುಗೆ ಏನು? ಎಂದು ಪ್ರಶ್ನೆ ಮಾಡಿದರು.