ಬೆಂಗಳೂರು: ಪ್ರಸ್ತುತ ಮುಂಗಾರು ಸಮಯವಾಗಿದ್ದು, ರಾಜ್ಯದ ಬಹುತೇಕ ಜಲ್ಲೆಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ಸಾಂಕ್ರಾಮಿಕ ರೋಗ ಹೆಚ್ಚಾಗುವ ಭೀತಿ (Rain Effects) ಕಂಡುಬಂದಿದೆ. ನೆರೆ ಪರಿಸ್ಥಿತಿಯಿಂದಾಗಿ ಸೊಳ್ಳೆಗಳು ಹೆಚ್ಚಾಗುತ್ತಿದೆ. ಇದರಿಂದ ಕಾಯಿಲೆ ಕೂಡ ಹೆಚ್ಚಾಗಬಹುದು. ಹೀಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸರಕಾರ ಸೂಚನೆ ನೀಡಿದೆ.
ರಾಜ್ಯದಲ್ಲಿ ಮಳೆ ಹೆಚ್ಚಾಗಿದ್ದು, ರೋಗವಾಹಕ ಆಶ್ರಿತ ರೋಗಗಳಾದ ಮಲೇರಿಯಾ, ಡೆಂಗೆ, ಚಿಕುನ್‌ಗುನ್ಯ, ಮೆದುಳು ಜ್ವರ ಹಾಗೂ ಆನೆಕಾಲು ರೋಗಗಳು ಹರಡುವ ಸಂಭವ ಅಧಿಕವಾಗಿರುತ್ತದೆ. ಈ ಹಿನ್ನೆಲೆಯಲ್ಲಿ, ರೋಗ ಪ್ರಸರಣ ಪರಿಸ್ಥಿತಿಯ ನಿಯಂತ್ರಣಕ್ಕೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತಗಳಿಗೆ ಸೂಚಿಸಿದೆ.
ಜಿಲ್ಲಾಡಳಿತಗಳಿಗೆ ಸೂಚನೆಗಳು
- ಆರೋಗ್ಯ ಸಂಬಂಧಿತ ತುರ್ತು ಪರಿಸ್ಥಿತಿಯನ್ನು ಎದುರಿಸಲು ತಂಡಗಳು ಸಿದ್ಧವಿರಬೇಕು. ಈ ಕಾರಣಕ್ಕಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ತ್ವರಿತ ಪ್ರತಿಕ್ರಿಯಾ ತಂಡಗಳು (Rapid Response team) ಅಗತ್ಯ ಔಷಧಗಳು. ಸಲಕರಣೆಗಳು ಹಾಗೂ ವಾಹನ ಸೌಲಭ್ಯಗಳೊಂದಿಗೆ ಸನ್ನದ್ಧವಾಗಿರಬೇಕು.
- ಪ್ರವಾಹ ಪೀಡಿತವಾಗುವಂಥ (Flood-prone) ಗ್ರಾಮಗಳಿಗೆ ಅಥವಾ ವಾರ್ಡ್‌ಗಳಿಗೆ ಅಗತ್ಯವಿರುವ ಸೂಕ್ಷ್ಮ
ಯೋಜನೆಯನ್ನು ಮುಂಚಿತವಾಗಿಯೇ ಸಿದ್ಧಪಡಿಸಿರಬೇಕು. ಅಲ್ಲದೆ, ತುರ್ತು ಪರಿಸ್ಥಿತಿಗೆ ಶೀಘ್ರವಾಗಿ ಸ್ಪಂದಿಸಬೇಕು. - ವೈದ್ಯಾಧಿಕಾರಿಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇ೦ದ್ರದ ಅಧಿಕಾರಿಗಳು ರೋಗವಾಹಕ ಆಶ್ರಿತ ರೋಗಗಳ ನಿರ್ದಿಷ್ಟ ಸರ್ವೇಕ್ಷಣೆಯನ್ನು (ಸಕ್ರಿಯ ಹಾಗೂ ಸ್ಥಿತ) ಹೆಚ್ಚಿಸಬೇಕು. ಅಲ್ಲದೆ, ಅಗತ್ಯ ದತ್ತಾಂಶವನ್ನು ವಿಶ್ಲೇಷಿಸಿ, ರೋಗ ಪ್ರಸರಣವನ್ನು ಪತ್ತೆಹಚ್ಚಿ, ಅಗತ್ಯ ನಿಯಂತ್ರಣ ಕ್ರಮಗಳನ್ನು ಅನುಷ್ಠಾನಗೊಳಿಸಬೇಕು.
- ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ತಾಲೂಕು ವೈದ್ಯಾಧಿಕಾರಿಗಳು ಕೀಟಶಾಸ್ತ್ರೀಯ ಸೂಚ್ಯಂಕಗಳನ್ನು (Entomological indices) ಮುಂಚಿತವಾಗಿಯೇ ವಿಶ್ಲೇಷಿಸಿರಬೇಕು. ಅಲ್ಲದೆ, ಉಲ್ಭಣಿಸಬಹುದಾದ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು.
- ಅಗತ್ಯ ಔಷಧಗಳು, ಪರೀಕ್ಷಾ ಕಿಟ್, ಕೀಟನಾಶಕ, ಹಾಗೂ ಅಗತ್ಯ ಯಂತ್ರೋಪಕರಣಗಳು ತುರ್ತು ಪರಿಸ್ಥಿತಿಯಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಬೇಕು.
- ಪ್ರತಿಯೊಂದು ಇಲಾಖೆಯೂ ಈ ಸಂದರ್ಭದಲ್ಲಿ ನೆರವೇರಿಸಬೇಕಾದ ಕಾರ್ಯವನ್ನು ಅರಿತುಕೊಂಡಿರಬೇಕು ಹಾಗೂ ಇತರ ಇಲಾಖೆಯೊಂದಿಗೆ ಸಮನ್ವಯ ಹೊಂದಿರಲು ಸೂಕ್ತ ಸಭೆ ನಡೆಸಬೇಕು.
- ಆರೋಗ್ಯ ಇಲಾಖೆ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸರ್ವೇಕ್ಷಣಾ ಚಟುವಟಿಕೆ ನಡೆಸಬೇಕು.
- ಸ್ಥಳೀಯ ಆಸ್ಪತ್ರೆಗಳಲ್ಲಿ ರೋಗವಾಹಕ ಆಶ್ರಿತ ರೋಗಗಳ ಅಗತ್ಯ ಚಿಕಿತ್ಸೆ ಹಾಗೂ ನಿರ್ವಹಣೆಗಾಗಿ ಸೂಕ್ತ ವ್ಯವಸ್ಥೆ ಮಾಡಿಕೊಂಡಿರಬೇಕು.
- ಈ ಮೇಲಿನ ಎಲ್ಲಾ ಅಂಶಗಳನ್ನು ಅನುಷ್ಠಾನಕ್ಕೆ ತರಲು ಹಾಗೂ ಇದರ ಸಂಪೂರ್ಣ ಉಸ್ತುವಾರಿ ಹಾಗೂ ಮೇಲ್ವಿಚಾರಣೆಯನ್ನು ನಿಭಾಯಿಸಲು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿರಬೇಕು.
ಈ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಾಧ್ಯತೆಯಿದ್ದು, ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಹಾಗೂ ಪಾಲಿಸುವುದು ಅಗತ್ಯವಾಗಿದೆ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಸೂಚಿಸಿದೆ.
ಇದನ್ನೂ ಓದಿ: ಹೃದಯ ಆರೋಗ್ಯ ಚೆನ್ನಾಗಿರಬೇಕಾ? ಸಾಕಷ್ಟು ನಿದ್ರೆ ಮಾಡಿ!