Site icon Vistara News

Karnataka Election 2023: ಬಳ್ಳಾರಿಯಲ್ಲಿ ಶಾಂತಿಯುತ ಮತದಾನಕ್ಕೆ ಸಿದ್ಧತೆ: ಡಿಸಿ ಪವನ್ ಕುಮಾರ್ ಹೇಳಿಕೆ

Karnataka election 2023 District administration all preparations for peaceful polling in Ballari District says District Collector Pawan Kumar Malapati

ಬಳ್ಳಾರಿ: ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ (Karnataka election 2023) ಸಂಬಂಧಿಸಿದಂತೆ ಜಿಲ್ಲೆಯ 5 ವಿಧಾನಸಭಾ ಮತಕ್ಷೇತ್ರಗಳಿಗೆ ಮೇ 10 ರಂದು ಬೆಳಗ್ಗೆ 07 ರಿಂದ ಸಂಜೆ 06 ಗಂಟೆಯವರೆಗೆ ಶಾಂತಿಯುತವಾಗಿ ಮತದಾನ ಜರುಗಿಸಲು ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಒಟ್ಟು 11,52,411 ಜನ ಮತದಾರರು ತಮ್ಮ ಮತದಾನ ಹಕ್ಕು ಚಲಾಯಿಸಲಿದ್ದು, 1,222 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಮತ್ತು ಚುನಾವಣಾ ಕರ್ತವ್ಯಕ್ಕಾಗಿ 5,815 ಅಧಿಕಾರಿ ಮತ್ತು ಸಿಬ್ಬಂದಿಯನ್ನು ತರಬೇತಿ ನೀಡಿ ನಿಯೋಜಿಸಲಾಗಿದೆ ಎಂದರು.

ಇದನ್ನೂ ಓದಿ: Road Accident : ತುಮಕೂರು ಬಳಿ ರಸ್ತೆ ಅಪಘಾತ; ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ದುರ್ಮರಣ

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ, ಮೇ 10 ರ ಬುಧವಾರ ಮತದಾನ ಮತ್ತು ಮೇ 13 ರ ಶನಿವಾರ ಮತ ಎಣಿಕೆ ಕಾರ್ಯ ನಡೆಯಲಿದೆ. ಈಗಾಗಲೇ ಮತದಾರರ ಅಂತಿಮ ಪಟ್ಟಿಯಲ್ಲಿರುವಂತೆ ಜಿಲ್ಲೆಯಲ್ಲಿ 5,67,319 ಪುರುಷ ಮತದಾರರು ಮತ್ತು 5,84,920 ಮಹಿಳಾ ಮತದಾರರು, 172 ತೃತೀಯ ಲಿಂಗಿ ಮತದಾರರು ಸೇರಿ ಒಟ್ಟು 11,52,411 ಮತದಾರರು ಮತದಾನದ ಹಕ್ಕು ಚಲಾಯಿಸಲಿದ್ದಾರೆ. ಇದರಲ್ಲಿ 39,359 ಯುವ ಮತದಾರರು ಪ್ರಥಮ ಬಾರಿಗೆ ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಯುವ ಮತದಾರರನ್ನು ನೋಂದಾಯಿಸಿದ ಕೀರ್ತಿ ಜಿಲ್ಲೆಯದಾಗಿದೆ ಎಂದರು.

ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ 1,222 ಮತಗಟ್ಟೆಗಳಿಗೆ 2445 (ಬ್ಯಾಲೆಟ್ ಯುನಿಟ್), 1716 (ಕಂಟ್ರೋಲ್ ಯುನಿಟ್) ಮತ್ತು 1857 (ವಿ.ವಿ.ಪ್ಯಾಟ್)ಗಳನ್ನು ಬಳಸಲಾಗುತ್ತಿದೆ ಎಂದರು.

ಇದನ್ನೂ ಓದಿ: ದ್ರೌಪದಿ ಮುರ್ಮು ಭಾಷಣದ ಮಧ್ಯೆ ಕಡಿತಗೊಂಡ ವಿದ್ಯುತ್​; ಸೌಮ್ಯವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ ರಾಷ್ಟ್ರಪತಿ

ಮತಗಟ್ಟೆಗಳ ವಿವರ

ಜಿಲ್ಲೆಯಲ್ಲಿ ಗ್ರಾಮೀಣ ವ್ಯಾಪ್ತಿಯಲ್ಲಿ 676 ಮತಗಟ್ಟೆ ಕೇಂದ್ರ, ನಗರ, ಪಟ್ಟಣ ಪ್ರದೇಶದಲ್ಲಿ 515 ಮತಗಟ್ಟೆ ಕೇಂದ್ರಗಳು ಸೇರಿ ಒಟ್ಟು 1,222 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕಂಪ್ಲಿ-240, ಸಿರುಗುಪ್ಪ-227, ಬಳ್ಳಾರಿ ಗ್ರಾಮೀಣ-242, ಬಳ್ಳಾರಿ ನಗರ-262 ಹಾಗೂ ಸಂಡೂರು ಕ್ಷೇತ್ರದಲ್ಲಿ 251 ಮತಗಟ್ಟೆಗಳಿವೆ. ಜಿಲ್ಲೆಯ 5 ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 295 ಸೂಕ್ಷ್ಮ ಹಾಗೂ 73 ಮತಗಟ್ಟೆಗಳನ್ನು ಅತಿಸೂಕ್ಷ್ಮ ಎಂದು ಗುರುತಿಸಲಾಗಿದೆ.
ಮತದಾನ ಪ್ರಮಾಣ ಕುಸಿತಕ್ಕೆ ಮೂಲ ಸೌಕರ್ಯದ ಕೊರತೆಯೂ ಒಂದು ಕಾರಣವಾಗಿದೆ ಎಂಬ ಅಂಶಗಳು ಕೇಳಿಬಂದ ಹಿನ್ನೆಲೆಯಲ್ಲಿ, ಈ ಬಾರಿ ಎಲ್ಲ ಮತಗಟ್ಟೆಗಳಿಗೆ ಅವಶ್ಯಕ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಕುಳಿತುಕೊಳ್ಳಲು ಬೆಂಚ್ ವ್ಯವಸ್ಥೆ ಹಾಗೂ ನೆರಳಿಗೆ ಶ್ಯಾಮಿಯಾನ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಹೇಳಿದರು.

ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಮತಗಟ್ಟೆಯ ಸಿಬ್ಬಂದಿಗೆ ಈಗಾಗಲೇ ಎರಡು ಬಾರಿ ತರಬೇತಿ ನೀಡಿದ್ದು, ಮೇ 9 ರಂದು ಕೂಡ ಅಗತ್ಯ ಮಾಹಿತಿ ನೀಡಿ ತರಬೇತಿ ನೀಡಲಾಗುವುದು. ಮತ ಎಣಿಕೆ ಸಿಬ್ಬಂದಿ, ಅಧಿಕಾರಿಗಳಿಗೆ ಮೇ 7 ರಂದು ಮತ್ತು ಮೇ 12 ರಂದು ತರಬೇತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: IT Raid : ಮೈಸೂರು, ಬೆಂಗಳೂರಲ್ಲಿ ಐಟಿ ದಾಳಿ; 20 ಕೋಟಿ ಮೌಲ್ಯದ ನಗ, ನಗದು ಸೀಜ್‌

ಮತಗಟ್ಟೆಗಳಲ್ಲಿ ವೆಬ್‍ಕಾಸ್ಟಿಂಗ್

ಈ ಹಿಂದಿನ ಚುನಾವಣೆಗಳಲ್ಲಿ ಒಟ್ಟಾರೆ ಮತಗಟ್ಟೆಯ ಶೇ. 10 ರಷ್ಟು ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಮಾಡಲಾಗುತ್ತಿತ್ತು. ಈ ಬಾರಿ ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲೆಯ ಒಟ್ಟು 1,222 ಮತಗಟ್ಟೆಗಳ ಪೈಕಿ 700 ಮತಗಟ್ಟೆಗಳಿಗೆ ಅಂದರೆ ಶೇ. 50 ಕ್ಕಿಂತ ಹೆಚ್ಚು ಮತಗಟ್ಟೆಗಳಲ್ಲಿ ವೆಬ್‍ಕಾಸ್ಟಿಂಗ್ ವ್ಯವಸ್ಥೆ ಮಾಡಿ, ಸಿಸಿ ಟಿವಿ ಕ್ಯಾಮೆರಾ ಮೂಲಕ ನೇರವಾಗಿ ಲೈವ್ ವಿಡಿಯೋ ನೋಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಚುನಾವಣಾ ಕಾರ್ಯದ ಮೇಲುಸ್ತುವಾರಿಗೆ ಕೇಂದ್ರ ಸರ್ಕಾರಿ ಇಲಾಖೆ, ಬ್ಯಾಂಕ್‍ಗಳಿಗೆ ಸಂಬಂಧಿಸಿದ ಒಟ್ಟು 184 ಮೈಕ್ರೋ ಆಬ್ಸರ್ವರ್‌ಗಳನ್ನು ಮತಗಟ್ಟೆಗಳಿಗೆ ನಿಯೋಜಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲಾಗುತ್ತದೆ ಎಂದರು.

ಮತಗಟ್ಟೆಗಳಿಗೆ 5,815 ಸಿಬ್ಬಂದಿ ನೇಮಕ

ಜಿಲ್ಲೆಯಲ್ಲಿ ಶಾಂತಿಯುತ ಹಾಗೂ ಚುನಾವಣಾ ಆಯೋಗದ ನಿಯಮಾನುಸಾರ ಮತದಾನ ಜರುಗಿಸಲು ಅಗತ್ಯ ಕ್ರಮ ವಹಿಸಲಾಗಿದೆ. ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸಲು 1,457 ಪಿ.ಆರ್.ಒ, 1,483 ಎ.ಪಿ.ಆರ್.ಒ, 2,875 ಪಿ.ಓ ಹಾಗೂ ಹೆಚ್ಚುವರಿಯಾಗಿ 99 ಸಿಬ್ಬಂದಿ ಸೇರಿ ಒಟ್ಟು 5,815 ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು ಪ್ರತಿ ಮತಗಟ್ಟೆಗಳಿಗೆ ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಲಾಗಿದೆ. ಕಂಪ್ಲಿ ಕ್ಷೇತ್ರಕ್ಕೆ 1137, ಸಿರಗುಪ್ಪ-1093, ಬಳ್ಳಾರಿ ಗ್ರಾಮೀಣ-1172, ಬಳ್ಳಾರಿ ನಗರ-1226 ಹಾಗೂ ಸಂಡೂರು ಕ್ಷೇತ್ರಕ್ಕೆ 1187 ಸಿಬ್ಬಂದಿಗಳನ್ನು ಮತದಾನ ದಿನದ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದರು.

ಮತದಾನ ದಿನದಂದು 316 ವಾಹನಗಳ ಬಳಕೆ

ಮೇ 10 ರಂದು ಜರುಗುವ ಮತದಾನ ಕಾರ್ಯಕ್ಕಾಗಿ ಬಸ್ಸುಗಳು, ಮಿನಿ ಬಸ್ಸು, ಟ್ರ್ಯಾಕ್ಸ್ ಸೇರಿದಂತೆ ಒಟ್ಟು 316 ವಾಹನಗಳನ್ನು ಬಳಸಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ಪೈಕಿ 184 ಬಸ್ಸುಗಳು, 62 ಮಿನಿ ಬಸ್ಸುಗಳು, 60 ಟ್ರ್ಯಾಕ್ಸ್ ಮತ್ತು ಇತರೆ ವಾಹನ ಬಳಸಲಾಗುತ್ತಿದ್ದು, ಇವಿಎಂಗಳನ್ನು ಸಾಗಿಸಲು ಒಟ್ಟು 10 ಬಸ್ ಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.

ಮನೆಯಿಂದ ಮತದಾನ

ಏ.29 ರಿಂದ ಮೇ 01 ರವರೆಗೆ 80 ವರ್ಷ ಮೇಲ್ಪಟ್ಟ ಮತದಾರರು ಹಾಗೂ ವಿಕಲಚೇತನ ಮತದಾರರ ಮನೆ ಮನೆಗೆ ತೆರಳಿ ಮತದಾನ ಕಾರ್ಯವನ್ನು ಕೈಗೊಳ್ಳಲಾಗಿತ್ತು. ಮನೆಯಿಂದಲೇ ಮತದಾನ ಮಾಡಲು ನೋಂದಾಯಿಸಿಕೊಂಡಿದ್ದ 80 ವರ್ಷ ಮೇಲ್ಪಟ್ಟ ವಯಸ್ಕರು ಹಾಗೂ ವಿಶೇಷ ಚೇತನರ 277 ಮತದಾರರ ಪೈಕಿ 254 ಮತದಾರರು ಮತದಾನ ಮಾಡಿದ್ದಾರೆ ಎಂದು ತಿಳಿಸಿದರು.

ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್

ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯವನ್ನು ಆಯಾ ವಿಧಾನಸಭಾ ಮತಕ್ಷೇತ್ರಗಳ ಕೇಂದ್ರ ಸ್ಥಾನಗಳಲ್ಲಿ ಮಾಡಲಾಗುತ್ತದೆ. 91-ಕಂಪ್ಲಿ ವಿಧಾನಸಭಾ ಮತಕ್ಷೇತ್ರದ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯವನ್ನು ನಗರದ ಸುಧಾಕ್ರಾಸ್‍ನ ಸೆಂಟ್ ಫಿಲೊಮೀನಾಸ್ ಹೈಸ್ಕೂಲ್, 92-ಸಿರುಗುಪ್ಪ ವಿಧಾನಸಭಾ ಮತಕ್ಷೇತ್ರದಲ್ಲಿ ಸಿರುಗುಪ್ಪದ ಬಳ್ಳಾರಿ ರಸ್ತೆಯ ವಿವೇಕಾನಂದ ಪಬ್ಲಿಕ್ ಶಾಲೆ, 93-ಬಳ್ಳಾರಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರ- ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್, 94-ಬಳ್ಳಾರಿ ನಗರ ವಿಧಾನಸಭಾ ಮತಕ್ಷೇತ್ರ-ನಗರದ ಕೋಟೆ ಪ್ರದೇಶದ ಸೆಂಟ್ ಜಾನ್ಸ್ ಕಂಪೋಸಿಟ್ ಜ್ಯೂನಿಯರ್ ಕಾಲೇಜ್, 95-ಸಂಡೂರು ವಿಧಾನಸಭಾ ಮತಕ್ಷೇತ್ರದ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯವನ್ನು ಸಂಡೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಆರ್.ವೈ.ಎಂ.ಇ. ಕಾಲೇಜ್‍ನಲ್ಲಿ ಮತ ಎಣಿಕಾ ಕೇಂದ್ರ

ಮತದಾನ ಪೂರ್ಣಗೊಂಡ ನಂತರ ಮತದಾನವಾದ ವಿದ್ಯುನ್ಮಾನ ಮತಯಂತ್ರಗಳನ್ನು ಹಾಗೂ ಮಹತ್ವದ ದಾಖಲೆಗಳನ್ನು ಪೊಲೀಸ್ ಭದ್ರತೆಯೊಂದಿಗೆ ಮತ ಎಣಿಕೆ ಕೇಂದ್ರವಾದ ನಗರದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜ್‍ನಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದ್ದು, ಮೇ 13 ರಂದು ಮತ ಎಣಿಕೆ ಕಾರ್ಯ ಇದೇ ಕಾಲೇಜಿನಲ್ಲಿ ನಡೆಯಲಿದೆ ಎಂದರು.

ಇದನ್ನೂ ಓದಿ: IPL 2023: ನಾಲ್ಕು ವರ್ಷಗಳ ಬಳಿಕ ಸೇಡು ತೀರಿಸಿದ ಚೆನ್ನೈ; ಮುಂಬೈ ವಿರುದ್ಧ 6 ವಿಕೆಟ್​​ ಗೆಲುವು

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಜಿಲ್ಲೆಯಲ್ಲಿ ಮತದಾನ ದಿನದಂದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಲು ಹಾಗೂ ಭದ್ರತೆಗೆ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 1,738 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಭದ್ರತಾ ಕಾರ್ಯಕ್ಕೆಂದೇ ಸುಮಾರು 3500 ಸಿಬ್ಬಂದಿಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Ranbir Kapoor: ಹಿಂದಿ ಚಿತ್ರೋದ್ಯಮ ಹೊಸಬರಿಗೆ ಅವಕಾಶ ಕೊಡಲ್ಲ ಎಂದ ರಣಬೀರ್ ಕಪೂರ್

ಮತ ಎಣಿಕೆ ದಿನದ ಭದ್ರತಾ ಸಿಬ್ಬಂದಿ

ಮತ ಎಣಿಕೆ ದಿನವಾದ ಮೇ 13 ರಂದು ಮತ ಎಣಿಕೆ ಕೇಂದ್ರವಾದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜ್‍ನಲ್ಲಿ ಬಿಗಿ ಭದ್ರತೆ ಒದಗಿಸಲು 4 ಡಿಎಸ್‍ಪಿ, 12 ಪಿಐ, 23 ಪಿಎಸ್‍ಐ, 90 ಎಎಸ್‍ಐ, 484 ಹೆಡ್ ಕಾನ್‍ಸ್ಟೇಬಲ್ ಮತ್ತು ಪೊಲೀಸ್ ಕಾನ್ಸ್‍ಸ್ಟೇಬಲ್, 20 ಡಬ್ಲ್ಯೂ ಸ್ಟಾಫ್, 4 ಡಿಎಆರ್, 3 ಕೆಎಸ್‍ಆರ್‌ಪಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ವಶಪಡಿಸಿಕೊಂಡ ಸಾಮಗ್ರಿಗಳ ವಿವರ

ಚುನಾವಣೆ ನೀತಿ ಸಂಹಿತೆ ಘೊಷಣೆಯ ಬಳಿಕ ಈವರೆಗೆ ಜಿಲ್ಲೆಯಲ್ಲಿ ರೂ.1.33 ಕೋಟಿ ನಗದು, 54.01 ಲಕ್ಷ ರೂ. ಮೌಲ್ಯದ 16,057 ಲೀ. ಮದ್ಯ, 2.8 ಕೆ.ಜಿ ಮಾದಕವಸ್ತು, 7.50 ಲಕ್ಷ ರೂ. ನಷ್ಟು ಸೀರೆ, ಹಾಗೂ 33 ಲಕ್ಷ ಮೌಲ್ಯದ ಬಂಗಾರ, ರೂ.3 ಲಕ್ಷ ಮೌಲ್ಯದ 4 ಕೆಜಿಯಷ್ಟು ಬೆಳ್ಳಿ ಹಾಗೂ 4 ವಾಹನಗಳನ್ನು ಪೊಲೀಸ್ ಇಲಾಖೆಯಿಂದ ವಶಪಡಿಸಿಕೊಳ್ಳಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ, ಜಿ.ಪಂ. ಸಿಇಒ ರಾಹುಲ್ ಶರಣಪ್ಪ ಸಂಕನೂರು ಉಪಸ್ಥಿತರಿದ್ದರು.

Exit mobile version