Site icon Vistara News

Bhatkal News: ಭಟ್ಕಳ ಭಗವಾಧ್ವಜ ತೆರವಿನಲ್ಲಿ ಉಸ್ತುವಾರಿ ಸಚಿವರ ಕೈವಾಡ: ಹರಿಪ್ರಕಾಶ್ ಕೋಣೆಮನೆ ಆರೋಪ

Hariprakash Konemane

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಟ್ಕಳವು (Bhatkal News) ಹಿಂದು ಜಾಗೃತಿಯ ಬಹುಮುಖ್ಯ ಪ್ರದೇಶವಾಗಿದೆ. ಇಲ್ಲಿಯ ತೆಂಗಿನಗುಂಡಿಯ ಭಗವಾಧ್ವಜ ತೆರವಿನಲ್ಲಿ ಕಾಂಗ್ರೆಸ್‌ನ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ನೇರ ಹಸ್ತಕ್ಷೇಪ ಇದೆ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್ ಕೋಣೆಮನೆ ಆಪಾದಿಸಿದರು. ನಿಮ್ಮ ಕಾಲ ಮೇಲೆ ನೀವೇ ಚಪ್ಪಡಿ ಕಲ್ಲು ಹಾಕಿಕೊಳ್ಳುವ ಪ್ರಯತ್ನ ಮಾಡಬೇಡಿ ಎಂದು ಸಚಿವರಿಗೆ ಸಲಹೆ ನೀಡಿದರು.

ಭಟ್ಕಳದ ತೆಂಗಿನಗುಂಡಿಯಲ್ಲಿ ವೀರಸಾವರ್ಕರ್ ಕಟ್ಟೆ, ಭಗವಾಧ್ವಜ ತೆರವು ಪ್ರಕರಣದ ಬಗ್ಗೆ ಭಟ್ಕಳ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ವೈಫಲ್ಯದಿಂದ ಇಡೀ ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಬಿಜೆಪಿ‌ ಸರ್ಕಾರ ದೇಶಭಕ್ತಿ ಮೂಡಿಸುವ ನಿಟ್ಟಿನಲ್ಲಿ ಅಳವಡಿಸಿದ್ದ ಪಠ್ಯವನ್ನು ಕಾಂಗ್ರೆಸ್‌ ಸರ್ಕಾರ ತೆಗೆದುಹಾಕಿದೆ. ಒಂದು ಸಮುದಾಯದ ತುಷ್ಟೀಕರಣ ನಿಟ್ಟಿನಲ್ಲಿ ಸಮಾಜದಲ್ಲಿ ದ್ವೇಷ ಬಿತ್ತುವ ಕೆಲಸವಾಗುತ್ತಿದೆ ಎಂದು ಕೋಣೆಮನೆ ಕಿಡಿಕಾರಿದರು.

ಸಾವರ್ಕರ್‌ ಪ್ರತಿಮೆ, ಹನುಮ ಧ್ವಜ, ಭಗವಾಧ್ವಜವನ್ನಷ್ಟೇ ತೆರವು ಮಾಡೋದೇಕೆ?

ಸಾವರ್ಕರ್‌ ಕಟ್ಟೆ ನಿರ್ಮಾಣಕ್ಕೆ ಪರವಾನಗಿ ಪಡೆಯಲಾಗಿತ್ತೇ ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಭಟ್ಕಳ ಸೇರಿ ರಾಜ್ಯದ ಉದ್ದಗಲಕ್ಕೂ ಪರವಾನಗಿ ಪಡೆಯದೆ ಹಲವು ಪ್ರತಿಮೆಗಳನ್ನು ನಿರ್ಮಿಸಲಾಗಿದೆ. ಮಹಾತ್ಮ ಗಾಂಧಿ ಪ್ರತಿಮೆಯಿಂದ ಹಿಡಿದು ರಾಜಕುಮಾರ್‌ ಪ್ರತಿಮೆವರೆಗೆ ಎಲ್ಲೆಲ್ಲಿ ಎಷ್ಟು ಪ್ರತಿಮೆಗಳಿಗೆ ಪರವಾನಗಿ ಪಡೆದು ಕಟ್ಟಲಾಗಿದೆ ಎಂಬುವುದನ್ನು ಸರ್ವೆ ಮಾಡಿಸಿ, ಆನಂತರ ಕೊನೆಗೆ ಸಾವರ್ಕರ್ ಪ್ರತಿಮೆಗೆ ಕಟ್ಟೆಗೆ ಕೈ ಹಾಕಬಹುದು. ಇನ್ನೂ ನಾವು ಬ್ರಿಟಿಷರ ಪ್ರತಿಮೆಗಳನ್ನೂ ಇಟ್ಟುಕೊಂಡಿದ್ದೇವೆ. ಅದನ್ನು ಬಿಟ್ಟು ಯಾಕೆ ಸಾವರ್ಕರ್‌ ಪ್ರತಿಮೆ, ಹನುಮ ಧ್ವಜ ಹಾಗೂ ಭಗವಾಧ್ವಜಗಳನ್ನೇ ತೆರವು ಮಾಡುತ್ತಾರೆ ಎಂದವರು ಪ್ರಶ್ನಿಸಿದರು.

ಇದನ್ನೂ ಓದಿ | Hanuman Flag: ಧ್ವಜಸ್ತಂಭವನ್ನು ನಿರ್ಮಿಸಿದ್ದೇ ಹನುಮಾನ್‌ ಧ್ವಜ ಹಾರಿಸಲು; ಕಾಂಗ್ರೆಸ್‌ ಜನರ ಕ್ಷಮೆ ಕೇಳಲಿ: ವಿಜಯೇಂದ್ರ

ಕಾಂಗ್ರೆಸ್‌ ಪಕ್ಷ ಗ್ಯಾರಂಟಿ ಯೋಜನೆಗಳ ಸಹಾಯದಿಂದ ಅಧಿಕಾರ ಪಡೆದು ತನ್ನ ಆಡಳಿತ ವೈಫಲ್ಯ ಮುಚ್ಚಿಕೊಳ್ಳುವ ಯತ್ನ ಮಾಡುತ್ತಿದೆ. ಕೆರಗೋಡಿನಲ್ಲಿ ಯಾರದೇ ವಿರೋಧ ಇಲ್ಲದಿದ್ದರೂ ಅನುಮತಿ ಪಡೆದು ಹಾಕಿದ್ದ ಭಗವಾಧ್ವಜ ತೆರವುಗೊಳಿಸಲಾಗಿದೆ. ಮಂಡ್ಯದಲ್ಲಿ ಹಿಂದು ವಿರೋಧಿ ಧೋರಣೆಗೆ ಜನರ ಪ್ರತಿಕ್ರಿಯೆ ನೋಡಿದ್ದೇವೆ. ಇದೀಗ ಭಟ್ಕಳದ ತೆಂಗಿನಗುಂಡಿಯಲ್ಲಿ ಭಗವಾಧ್ವಜ ಕಟ್ಟೆ ತೆರವುಗೊಳಿಸಲಾಗಿದೆ. ಯಾವುದೇ ರೀತಿಯಲ್ಲೂ ಈ ರೀತಿಯ ಅಪಮಾನ ಸಹಿಸುವುದಿಲ್ಲ ಎಂದು ಹೇಳಿದರು.

ವೀರ ಸಾವರ್ಕರ್ ಕುರಿತಾಗಿ ಕಾಂಗ್ರೆಸ್ ಪಕ್ಷಕ್ಕೆ ದ್ವೇಷ ಇದೆ. ಸಾವರ್ಕರ್ ಮುಸಲ್ಮಾನರಿಗೆ ಪ್ರತ್ಯೇಕ ದೇಶ ಆಗುವುದು ಹಾಗೂ ಮುಸ್ಲಿಂ ಸಮಾಜದ ತುಷ್ಟೀಕರಣ ವಿರೋಧಿಸಿದ್ದರು. ಅವರು ಇಡೀ ಹಿಂದು ಸಮಾಜವನ್ನು ಒಂದಾಗಿಡಲು ಜೀವನ ಮುಡಿಪಾಗಿಟ್ಟವರು, ಆ ಕಾರಣಕ್ಕಾಗಿ ಕಾಂಗ್ರೆಸ್‌ನವರು ಸಾವರ್ಕರ್, ವಿವೇಕಾನಂದ ಅವರನ್ನು ವಿರೋಧಿಸುತ್ತಾರೆ ಎಂದು ತಿಳಿಸಿದರು.

ಈ ರೀತಿಯ ಘಟನೆ ಮತ್ತೆ ಮುಂದುವರಿದಲ್ಲಿ ಭಟ್ಕಳದ ಎಲ್ಲ ವೃತ್ತಗಳಲ್ಲಿ ಸಾವರ್ಕರ್ ಕಟ್ಟೆ ಸ್ಥಾಪನೆಯಾಗುತ್ತದೆ. ಸಾವರ್ಕರ್ ಕಟ್ಟೆ ಒಂದೇ ಇರಬೇಕೋ ನೂರಾರು ಇರಬೇಕೋ ಎನ್ನುವುದನ್ನು ನೀವೇ ತೀರ್ಮಾನ ಮಾಡಿ. ಭಟ್ಕಳ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಇಂತಹ ಘಟನೆ ಜಿಲ್ಲೆಯಲ್ಲಿ ಮತ್ತೆ ಸಂಭವಿಸಬಾರದು ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ | Congress Guarantee: ಕಾಂಗ್ರೆಸ್‌ ಗ್ಯಾರಂಟಿಗೆ ಗ್ಯಾರಂಟಿಯೇ ಇಲ್ಲ; ಕಾಂಗ್ರೆಸ್‌ ವಿರುದ್ಧ ಪ್ರಲ್ಹಾದ್‌ ಜೋಶಿ ಕಿಡಿ

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಸುನೀಲ್ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ, ಬಿಜೆಪಿ ಮುಖಂಡ ಗೋವಿಂದ್ ನಾಯ್ಕ ಮತ್ತಿತರರು ಇದ್ದರು.

Exit mobile version