ಚಿಕ್ಕಬಳ್ಳಾಪುರ: ದಾಂಪತ್ಯದಲ್ಲಿ ಸಣ್ಣ ಭಿನ್ನಾಭಿಪ್ರಾಯ ಬಂದರೂ ವಿಚ್ಛೇದನಕ್ಕೆಂದು ಕೋರ್ಟ್‌ಗಳಿಗೆ ಅರ್ಜಿ ಹಾಕುವವರ ಸಂಖ್ಯೆ ಜಾಸ್ತಿಯಾಗಿದೆ. ಕುಳಿತು ಮಾತನಾಡದೆ, ಆಪ್ತರ ಸಲಹೆ ಪಡೆಯದೆ, ಅಹಂಕಾರದಿಂದ ಮದುವೆಯ ಬಂಧವನ್ನು ತೊರೆಯುವ ನವಜೋಡಿಗಳೂ ಜಾಸ್ತಿ ಇದ್ದಾರೆ. ಹೀಗೆ, ಸಣ್ಣ-ಪುಟ್ಟ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳದೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ ಮೂರು ಜೋಡಿಗಳನ್ನು ಚಿಕ್ಕಬಳ್ಳಾಪುರ ನಗರ ನ್ಯಾಯಾಲಯದ ನ್ಯಾಯಾಧೀಶರು (Divorce Case) ಮತ್ತೆ ಒಂದಾಗಿಸಿದ್ದಾರೆ.
ರಾಜಿ ಸಂಧಾನದ ಮೂಲಕ ಕ್ಷಿಪ್ರವಾಗಿ ಪ್ರಕರಣಗಳನ್ನು ಸುಖಾಂತ್ಯಗೊಳಿಸಲು ಚಿಕ್ಕಬಳ್ಳಾಪುರ ನಗರ ನ್ಯಾಯಾಲಯವು ಲೋಕ ಅದಾಲತ್ ನಡೆಸಿದೆ. ಉಷಾ ಜಿ. ಹಾಗೂ ಮುನಿರಾಜು, ದೀಪಾ ಹಾಗೂ ರಮೇಶ್ ಮತ್ತು ಆಶಾ ಹಾಗೂ ವಿನೋದ್ ಕುಮಾರ್ ಎಂಬ ಜೋಡಿಗಳು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಆದರೆ, ನ್ಯಾಯಾಧೀಶರಾದ ಲಕ್ಷ್ಮೀಕಾಂತ್ ಜೆ. ಮಿಸ್ಕಿನ್ ಹಾಗೂ ವಿವೇಕಾನಂದ ಪಂಡಿತ್ ಅವರು ದಂಪತಿಗಳಿಗೆ ದಾಂಪತ್ಯದ ಪ್ರಾಮುಖ್ಯತೆ, ಪರಸ್ಪರ ಅರ್ಥ ಮಾಡಿಕೊಂಡು ಜೀವನ ಸಾಗಿಸುವುದನ್ನು ತಿಳಿಸಿ, ಮೂರೂ ಜೋಡಿಗಳು ಮತ್ತೆ ಒಂದಾಗುವಂತೆ ಮಾಡಿದ್ದಾರೆ.
ಮಾಡಿದ ತಪ್ಪು ಅರಿತು, ನ್ಯಾಯಾಧೀಶರ ಮಾತಿಗೆ ಬೆಲೆಕೊಟ್ಟು ಮತ್ತೆ ಒಂದಾಗಲು ಮೂರೂ ಜೋಡಿಗಳು ಸಮ್ಮತಿ ಸೂಚಿಸಿದ್ದು, ಪರಸ್ಪರ ಹಾರ ಬದಲಾಯಿಸಿಕೊಂಡು, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ. ದಂಪತಿಗಳು ಮತ್ತೆ ಒಂದಾಗಿದ್ದಕ್ಕೆ ನ್ಯಾಯಾಧೀಶರು, ದಂಪತಿಗಳ ಸಂಬಂಧಿಕರು, ವಕೀಲರು ಸಂತಸ ವ್ಯಕ್ತಪಡಿಸಿದ್ದಾರೆ.
ಇದಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಉಷಾ ಜಿ., “ಸಣ್ಣ ಭಿನ್ನಾಭಿಪ್ರಾಯ, ಅಹಂಕಾರದಿಂದಾಗಿ ದೂರವಾಗಲು ತೀರ್ಮಾನಿಸಿದ್ದೆವು. ಆದರೆ, ನಮ್ಮ ಅಹಂಕಾರ ಬಿಟ್ಟು, ಪರಸ್ಪರ ಅರ್ಥ ಮಾಡಿಕೊಂಡು ಜೀವನ ಸಾಗಿಸಲು ತೀರ್ಮಾನಿಸಿದ್ದೇವೆ,ʼʼ ಎಂದು ಹೇಳಿದ್ದಾರೆ.
ಇದನ್ನೂ ಓದಿ | Carla belluci: ಇವಳ ಮದುವೆಯಲ್ಲಿ ಟಿಕೆಟ್ ಹಣ ಕೊಟ್ಟು ಆಗಮನವೇ ಆಶೀರ್ವಾದ, ದುಡ್ಡು ಕೊಟ್ಟರೇ ಊಟ!