Site icon Vistara News

BMTC bus tender | ಎತ್ತರದ ಮೆಟ್ಟಿಲು ಇರುವ ಹೊಸ ಬಸ್‌ ಖರೀದಿಗೆ ಆಕ್ಷೇಪ: ರಾಜ್ಯ, ಕೇಂದ್ರಕ್ಕೆ ಹೈಕೋರ್ಟ್‌ ನೋಟಿಸ್

BMTC Bus

ಬೆಂಗಳೂರು: ಬಸ್ಸು ಅಂದರೆ ಎಲ್ಲರಿಗೂ ಅನುಕೂಲಕರ ಆಗೋ ಹಾಗಿರಬೇಕು, ಅಷ್ಟೆಲ್ಲ ಎತ್ತರದ ಮೆಟ್ಟಿಲು ಮಾಡಿದರೆ ವಿಕಲಚೇತನರು, ಹಿರಿಯರು ಹತ್ತುವುದು ಹೇಗೆ?: ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಬಿಎಂಟಿಸಿಯ ಹೊಸ ಬಸ್‌ ಖರೀದಿ ಟೆಂಡರನ್ನು (BMTC bus tender) ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಹೈಕೋರ್ಟ್‌ ಕೂಡಾ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ಬೆಂಗಳೂರು ಮಹಾನಗರದ ಸಾರಿಗೆ ಸಂಸ್ಥೆ (ಬಿಎಂಟಿಸಿ) 840 ಹೊಸ ಬಸ್‌ಗಳ ಖರೀದಿಗೆ ಟೆಂಡರ್‌ ಹೊರಡಿಸಿದೆ. ಈ ಬಸ್‌ಗಳ ಮೆಟ್ಟಿಲುಗಳ ಎತ್ತರ ವಿಕಲಚೇತನರಿಗೆ ಪೂರಕವಾಗಿಲ್ಲ ಎಂದು ಬೆಂಗಳೂರು ನಿವಾಸಿ ವಿಕಲಚೇತನರಾದ ಸುನೀಲ್ ಕುಮಾರ್ ಜೈನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠ ನೋಟಿಸ್‌ ಜಾರಿಗೊಳಿಸಿದೆ.

ಯಾರಿಗೆಲ್ಲ ನೋಟಿಸ್‌?
ವಿಕಲಚೇತನರ ಪರವಾದ ಅರ್ಜಿಯನ್ನು ಅತ್ಯಂತ ಜತನದಿಂದ ಆಲಿಸಿದ ಪೀಠವು ಪ್ರತಿವಾದಿಗಳಾದ ರಾಜ್ಯ ಸಾರಿಗೆ ಇಲಾಖೆ, ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ವಿಕಲಚೇತನರ ಸಬಲೀಕರಣ ಇಲಾಖೆ ಮತ್ತು ಬಿಎಂಟಿಸಿಗೆ ನೋಟಿಸ್ ಜಾರಿಗೊಳಿಸಿತು.

ಯಾಕೆ ಆಕ್ಷೇಪ?
ಬಿಎಂಟಿಸಿ 840 ಹೊಸ ಬಸ್‌ಗಳ ಖರೀದಿಗೆ ಟೆಂಡರ್ ಆಹ್ವಾನಿಸಿ 2022ರ ಅಕ್ಟೋಬರ್‌ 28ರಂದು ಅಧಿಸೂಚನೆ ಹೊರಡಿಸಿದೆ. ಖರೀದಿಸಲು ಉದ್ದೇಶಿಸಿರುವ ಬಸ್‌ಗಳ ಚಾಸಿಸ್‌ನ (ತಳಕಟ್ಟು) ಎತ್ತರ, 1,000 ಮಿಲಿ ಮೀಟರ್ ಇರಬೇಕು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಇದನ್ನು ದಾವೆಯಲ್ಲಿ ಪ್ರಶ್ನಿಸಲಾಗಿದೆ.

ಇದು ಮೋಟಾರು ವಾಹನ ಕಾಯಿದೆಯ ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ, ಖರೀದಿಸಲು ಉದ್ದೇಶಿಸಿರುವ ಬಸ್‌ಗಳ ಚಾಸಿಸ್‌ನ (ತಳಕಟ್ಟು) ಎತ್ತರ 1,000 ಮಿಲಿ ಮೀಟರ್ ಇರಬೇಕು ಎನ್ನುವುದಕ್ಕೆ ಸೀಮಿತವಾಗಿ ಅಧಿಸೂಚನೆ ರದ್ದುಪಡಿಸಬೇಕು ಎಂದು ಕೋರಲಾಗಿದೆ.

ಪೋಲಿಯೋ ಕಾರಣಕ್ಕೆ ಅಂಗವೈಕಲ್ಯಕ್ಕೆ ತುತ್ತಾಗಿರುವ ಅರ್ಜಿದಾರರು, ಓಡಾಟಕ್ಕಾಗಿ ಗಾಲಿ ಖುರ್ಚಿಯನ್ನು ಅವಲಂಬಿಸಿದ್ದಾರೆ. ನೆಲಮಟ್ಟದಿಂದ 400 ಮಿಲಿ ಮೀಟರ್‌ನಿಂದ 650 ಮಿಮೀ ಎತ್ತರ ಇರುವ ಮತ್ತು ಬಾಗಿಲು ಮೂಲಕ ಗಾಲಿ ಕುರ್ಚಿಗಳಿಂದ ಹತ್ತಿ ಇಳಿಯಲು ಅನುಕೂಲವಾಗುವಂತೆ ವ್ಯವಸ್ಥೆ ಇರುವ (ವೀಲ್ ಚೇರ್ ಬೋರ್ಡಿಂಗ್ ಡಿವೈಸ್) ಬಸ್‌ಗಳನ್ನು ಖರೀದಿ ಮಾಡಲು ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಈ ಮಧ್ಯೆ ಅರ್ಜಿ ನ್ಯಾಯಾಲಯದಲ್ಲಿ ಇತ್ಯರ್ಥವಾಗುವರೆಗೆ 840 ಹೊಸ ಬಸ್‌ಗಳ ಖರೀದಿಗೆ ಹೊರಡಿಸಿರುವ ಟೆಂಡರ್ ಅಧಿಸೂಚನೆಗೆ ತಡೆಯಾಜ್ಞೆ ನೀಡಬೇಕು. ಇಲ್ಲವೇ ಬಸ್ ಖರೀದಿ ಪ್ರಕ್ರಿಯು ಅರ್ಜಿ ಕುರಿತ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿ ಆದೇಶ ಹೊರಡಿಸಬೇಕು ಎಂದು ಮಧ್ಯಂತರ ಮನವಿಯನ್ನು ಅರ್ಜಿದಾರರು ಮಾಡಿದ್ದಾರೆ.

ಇದನ್ನೂ ಓದಿ | Allahabad High Court | ಇಬ್ಬರು ವಯಸ್ಕರು ಒಟ್ಟಿಗೆ ವಾಸಿಸುವುದು ಅನೈತಿಕವಲ್ಲ: ಅಲಹಾಬಾದ್ ಹೈಕೋರ್ಟ್

Exit mobile version