ತುಮಕೂರು: ಮೆರವಣಿಗೆ ಸಂದರ್ಭದಲ್ಲಿ ಜನರು ಕುಣಿಯಲೆಂದು ಹಾಕಿದ್ದ ಡಿಜೆ ಸಂಗೀತವನ್ನು ಬಂದ್ ಮಾಡಿದ್ದನ್ನು ಆಕ್ಷೇಪಿಸಿ ವ್ಯಕ್ತಿಯೊಬ್ಬ ಇಬ್ಬರಿಗೆ ಚಾಕುವಿನಿಂದ ಇರಿದ ವಿದ್ಯಮಾನ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಭುವನಹಳ್ಳಿಯಲ್ಲಿ ನಡೆದಿದೆ. ಇಬ್ಬರ ಹೊಟ್ಟೆ ಭಾಗಕ್ಕೆ ಚೂರಿಯಿಂದ ಇರಿಯಲಾಗಿದ್ದು, ಒಬ್ಬನ ಕರುಳೇ ಹೊರಗೆ ಬಂದಿದೆ. ಆದರೆ, ಸಕಾಲದಲ್ಲಿ ದೊರಕಿದ ಚಿಕಿತ್ಸೆಯಿಂದ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಿಕ್ಕಣ್ಣ (53), ಗೋವಿಂದರಾಜು (29) ಹಲ್ಲೆಗೊಳಗಾದವರು. ಗೋವಿಂದರಾಜು ಚಾಕುವಿನಿಂದ ಹಲ್ಲೆ ಮಾಡಿದ ಆರೋಪಿ.
ಏನಾಗಿತ್ತು ಮೆರವಣಿಗೆ ವೇಳೆ?
ಶಿರಾ ತಾಲೂಕಿನ ಭುವನಹಳ್ಳಿ ಗಾಮದಲ್ಲಿ ಗುರುವಾರ ರಾತ್ರಿ ಅದ್ಧೂರಿಯಾಗಿ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗಿತ್ತು. ಈ ಸಂದರ್ಭದಲ್ಲಿ ಆಯೋಜಿಸಿದ್ದ ಮೆರವಣಿಗೆ ವೇಳೆ ಸಂಭ್ರಮಾಚರಣೆಗಾಗಿ ಡಿಜೆ ಸಿಸ್ಟಮ್ ತರಿಸಲಾಗಿತ್ತು. ಯುವಕರು ಡಿಜೆ ಹಾಡಿಗೆ ಮೈಮರೆತು ಕುಣಿಯುತ್ತಿದ್ದರು. ಈ ನಡುವೆ ಸಮಯವಾಯಿತು ಎಂದೋ, ಬೇರಾವುದೋ ಕಾರಣಕ್ಕೆ ಆಯೋಜಕರು ಡಿಜೆ ಸಾಂಗ್ ಬಂದ್ ಮಾಡಿದರು.
ಇದು ಗೋವಿಂದ ರಾಜು ಎಂಬ ಸ್ಥಳೀಯನಿಗೆ ಸಿಟ್ಟು ತರಿಸಿತ್ತು. ಆತ ಡಿಜೆ ಹಚ್ಚುವಂತೆ ಆಯೋಜಕರು ಮತ್ತು ಡಿಜೆ ಆಪರೇಟರ್‌ಗಖ ಜೊತೆ ಜಗಳ ತೆಗೆದಿದ್ದ. ಆತನ ಕಿರಿಕಿರಿ ತಾಳಲಾರದೆ ಆಯೋಜಕರು ಅವನಿಗೆ ಥಳಿಸಿ ಹೊರಗೆ ಕಳುಹಿಸಿದ್ದರು. ನೂರಾರು ಜನರ ಮುಂದೆ ತನ್ನನ್ನು ಥಳಿಸಿದ್ದರಿಂದ ಸಿಟ್ಟಿಗೆದ್ದಿದ್ದ ಗೋವಿಂದರಾಜು ಚಾಕು ತಂದು ಇಬ್ಬರ ಮೇಲೆ ಇರಿದೇ ಬಿಟ್ಟ.
ಚಿಕ್ಕಣ್ಣ (53), ಗೋವಿಂದರಾಜು (29) ಎಂಬವರ ಮೇಲೆ ಹಲ್ಲೆ ನಡೆದಿದ್ದು, ತಕ್ಷಣವೇ ಗಾಯಾಳುಗಳನ್ನು ಶಿರಾ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತು. ಇರಿತದ ತೀವ್ರತೆ ಎಷ್ಟಿತ್ತೆಂದರೆ ಚಿಕ್ಕಣ್ಣನ ಕರುಳೇ ಹೊರಗೆ ಬಂದಿತ್ತು. ಆತನನ್ನು ಕೂಡಲೇ ತುಮಕೂರಿನ ಶ್ರೀದೇವಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಇದೀಗ ಗಾಯಗೊಂಡ ಇಬ್ಬರೂ ಚೇತರಿಸಿಕೊಳ್ಳುತ್ತಿದ್ದಾರೆ. ಚೂರಿಯಿಂದ ಇರಿದ ಗೋವಿಂದರಾಜುವನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ| ಗಣೇಶ ಇಡುವ ವಿಚಾರಕ್ಕೆ ಗುಂಪು ಘರ್ಷಣೆ: ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಮುಸುಕುಧಾರಿಗಳು ಎಸ್ಕೇಪ್