ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವಾಗುತ್ತಿರುವ ʼವೀಕೆಂಡ್ ವಿತ್ ರಮೇಶ್ ಶೋ-5ʼ ರಲ್ಲಿ (Weekend With Ramesh) ಈ ವಾರ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಾಧಕರ ಕುರ್ಚಿ ಏರಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಜ್ಯ ಕಾಂಗ್ರೆಸ್‌ನ ಟ್ರಬಲ್ ಶೂಟರ್ ಡಿಕೆಶಿ ಅವರು ಜೂನ್ 10 ಮತ್ತು 11ರಂದು ರಾತ್ರಿ 9ಕ್ಕೆ ಪ್ರಸಾರವಾಗಲಿರುವ ಸಂಚಿಕೆಗಳಲ್ಲಿ ತಮ್ಮ ರಾಜಕೀಯ ಜೀವನದ ಏಳು ಬೀಳುಗಳ ಬಗ್ಗೆ ಮಾತನಾಡಲಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಜೀವನದ ಸಂಪೂರ್ಣ ಚಿತ್ರಣ ಕಟ್ಟಿಕೊಡಲಿರುವ ಕಾರ್ಯಕ್ರಮದ ಟ್ರೇಲರ್ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಆಪ್ತರು ಹಾಗೂ ವಿವಿಧ ರಾಜಕಾರಣಿಗಳು, ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮಾತನಾಡಿದ್ದಾರೆ.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ರಾಜಕೀಯ ವ್ಯಕ್ತಿಗಳು ಬರುತ್ತಿರುವುದು ಇದೇ ಮೊದಲೇನೂ ಅಲ್ಲ. ಹಲವು ಸೀಸನ್‌ಗಳಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಇದನ್ನೂ ಓದಿ | Bera movie: ಬೇರ: ಕೋಮು ದ್ವೇಷದ ಮೂಲ ಚಿತ್ರಿಸುವ ಕನ್ನಡ ಸಿನಿಮಾ ಜೂನ್ 16ರಂದು ರಿಲೀಸ್
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್ ಅವರ ಪೂರ್ಣ ಹೆಸರು ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾರ್ .ಯಾವುದೇ ಕುಟುಂಬ ರಾಜಕೀಯದ ಹಿನ್ನೆಲೆ ಹೊಂದಿಲ್ಲ. ಒಕ್ಕಲಿಗ ಸಮುದಾಯಕ್ಕೆ ಸೇರಿದ ನಾಯಕ ಇವರು.
- 7 ಬಾರಿ ಶಾಸಕರಾಗಿ ಆಯ್ಕೆ
- 1985ರಲ್ಲಿ ಮೊದಲ ಬಾರಿಗೆ ಸಾತನೂರು ಕ್ಷೇತ್ರದಲ್ಲಿ ಜೆಡಿಎಸ್ನ ಎಚ್. ಡಿ.ದೇವೇಗೌಡರ ವಿರುದ್ಧ ಸೋಲು
- 1987ರಲ್ಲಿ ಸಾತನೂರು ಕ್ಷೇತ್ರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆ
- 1989ರ ಸಾತನೂರು ಕ್ಷೇತ್ರದಿಂದ ಗೆಲ್ಲುವ ಮೂಲಕ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆ
- 1991ರಲ್ಲಿ ಎಸ್.ಬಂಗಾರಪ್ಪ ಸಂಪುಟದಲ್ಲಿ ಬಂಧಿಖಾನೆ ಖಾತೆ ಸಚಿವರಾಗಿ ನೇಮಕ
- 1994ರಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಸಾತನೂರು ಕ್ಷೇತ್ರದಲ್ಲಿ ಕಣಕ್ಕಿಳಿದು ಜಯ
- 1999ರ ಚುನಾವಣೆಯಲ್ಲಿ ಸಾತನೂರು ಕ್ಷೇತ್ರದಿಂದ ಮತ್ತೆ ಆಯ್ಕೆ
- 1999ರಲ್ಲಿ ಎಸ್.ಎಂ.ಕೃಷ್ಣ ಸಂಪುಟದಲ್ಲಿ ಸಹಕಾರ ಸಚಿವರಾಗಿ ಬಳಿಕ ನಗರಾಭಿವೃದ್ಧಿ ಸಚಿವರಾಗಿ ಸೇವೆ
- 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ಬಳಿಕ ಕನಕಪುರದಿಂದ ಸ್ಪರ್ಧಿಸಿ ಗೆಲುವು
- 2013ರ ಚುನಾವಣೆಯಲ್ಲಿ ಗೆದ್ದ ಬಳಿಕ ಸಿದ್ದರಾಮಯ್ಯ ಸಂಪುಟದಲ್ಲಿ ಇಂಧನ ಖಾತೆ ಸಚಿವರಾಗಿ ಆಯ್ಕೆ
- 2018ರಲ್ಲಿ ಮೈತ್ರಿ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಜಲಸಂಪನ್ಮೂಲ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ ಸೇವೆ
- 2020ರ ಮಾರ್ಚ್ 11ರಂದು ಕೆಪಿಸಿಸಿಯ 23ನೇ ಅಧ್ಯಕ್ಷರಾಗಿ ನೇಮಕ