ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಗುರುವಾರ ರಾತ್ರಿ ಖ್ಯಾತ ಚಿತ್ರ ನಟ ಕಿಚ್ಚ್ ಸುದೀಪ್ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಸೃಷ್ಟಿಸಿದೆ. ಅವರ ಜತೆಗೆ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ಕೂಡಾ ಇದ್ದರು.
ಕಿಚ್ಚ್ ಸುದೀಪ್ ಅವರು ಸದ್ಯ ಸಿನಿಮಾ ಕ್ರಿಕೆಟ್ ಲೀಗ್ (ಸಿಸಿಎಲ್)ನಲ್ಲಿ ಬ್ಯುಸಿಯಾಗಿದ್ದಾರೆ. ಆದರೂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಲು ಉತ್ಸಾಹ ತೋರಿದ್ದು ವಿಶೇಷವಾಗಿದೆ. ರಾತ್ರಿ ಕಿಚ್ಚ ಮನೆಗೆ ಹೋದ ಶಿವಕುಮಾರ್ ಅಲ್ಲೇ ಡಿನ್ನರ್ ಕೂಡಾ ಮುಗಿಸಿ ಬಂದಿದ್ದಾರೆ. ಅಂದರೆ ತುಂಬಾ ಆತ್ಮೀಯವಾಗಿ ತುಂಬಾ ಹೊತ್ತು ಮಾತನಾಡಿರುವುದು ಖಚಿತವಾಗಿದೆ. ಡಿ.ಕೆ. ಶಿವಕುಮಾರ್ ಮತ್ತು ಕಿಚ್ಚ ಅವರ ಜತೆಗೆ ಖುಷಿ ಖುಷಿಯಾಗಿರುವ ಚಿತ್ರಗಳು ವೈರಲ್ ಆಗಿವೆ.
ಈ ಭೇಟಿಯಲ್ಲಿ ಯಾವುದೇ ರಾಜಕೀಯ ಇಲ್ಲ, ಇದು ಫ್ರೆಂಡ್ಲಿ ವಿಸಿಟ್ ಎಂದು ಮೊಹಮ್ಮದ್ ನಲಪಾಡ್ ಅವರು ವಿಸ್ತಾರ ನ್ಯೂಸ್‌ಗೆ ಸ್ಪಷ್ಟನೆ ನೀಡಿದ್ದಾರಾದರೂ ಭೇಟಿಯಾದ ಸಮಯ ಹಲವಾರು ಊಹಾಪೋಹಗಳಿಗೆ ಕಾರಣವಾಗಿದೆ.
ನಟ ಸುದೀಪ್ ಎಲ್ಲ ರಾಜಕೀಯ ಪಕ್ಷಗಳ ಜತೆಗೆ, ರಾಜಕೀಯ ನಾಯಕರ ಜತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಈ ನಡುವೆ ಅವರು ಬಿಜೆಪಿಗೆ ಸೇರುತ್ತಾರೆ ಎಂಬ ಸುದ್ದಿಯೊಂದು ಇತ್ತೀಚೆಗೆ ಹರಡಿತ್ತು. ವಾಲ್ಮೀಕಿ ಸಮುದಾಯಕ್ಕೆ ಸೇರಿದ ಅವರನ್ನು ಈ ವರ್ಗದ ಜನರನ್ನು ಸೆಳೆಯುವ ಉದ್ದೇಶದಿಂದ ಪಕ್ಷಕ್ಕೆ ಸೇರಿಸಿಕೊಳ್ಳುವ ಉದ್ದೇಶ ಹೊಂದಿದೆ ಎಂದು ಹೇಳಲಾಗಿತ್ತು. ಸ್ವತಃ ಅವರೇ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆದಿತ್ತು.
ಸಿನಿಮಾ ರಂಗದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿರುವ ಸುದೀಪ್ ಅವರ ಬೆಂಬಲಿಗರನ್ನು ಸೆಳೆಯುವುದು ಕೂಡಾ ರಾಜಕೀಯ ನಾಯಕರ ಉದ್ದೇಶವಾಗಿರುತ್ತದೆ. ಆದರೆ, ಸುದೀಪ್ ಮಾತ್ರ ಈ ರೀತಿಯ ಬಲೆಗೆ ಸಿಕ್ಕಿಬೀಳುವುದಿಲ್ಲ ಎಂದು ಹೇಳಲಾಗುತ್ತಿದೆ. ಕಳೆದ ಬಾರಿಯೂ ಅವರನ್ನು ಸೆಳೆಯಲು ಮೂರು ಪಕ್ಷಗಳು ಪ್ರಯತ್ನಿಸಿದ್ದವು. ಈ ನಡುವೆ ಸುದೀಪ್ ಅವರು ತಾವು ತುಂಬಾ ಗೌರವಿಸುವ, ಆತ್ಮೀಯರಾಗಿರುವ ಅಭ್ಯರ್ಥಿಗಳ ಪರವಾಗಿ ವೈಯಕ್ತಿಕವಾಗಿ ಪಕ್ಷಾತೀತವಾಗಿ ಪ್ರಚಾರ ನಡೆಸಿದ್ದರು.
ಈ ಬಾರಿ ಅವರು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಭೇಟಿಯಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಎಂದು ಭಾವಿಸಲಾಗಿದೆ. ಅವರ ನಡುವಿನ ಮಾತುಕತೆಯ ವಿವರ ಸದ್ಯ ಲಭ್ಯವಿಲ್ಲ.
ಇದನ್ನೂ ಓದಿ | Karnataka Election | ಕಾಂಗ್ರೆಸ್ ಸೇರುತ್ತಾರಾ ಕಿಚ್ಚ ಸುದೀಪ್? ರಮ್ಯಾ ಮಧ್ಯಸ್ಥಿಕೆ!