ಕಾಂಗ್ರೆಸ್ ನಾಯಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಅವರು ನೊಣವಿನಕೆರೆ ಅಜ್ಜಯ್ಯನ ಪರಮಭಕ್ತ. ಜೀವನದ ಪ್ರತಿ ಪ್ರಮುಖ ಘಟ್ಟಗಳಲ್ಲೂ ಅವರು ಅಜ್ಜಯ್ಯನನ್ನು ಭೇಟಿ ಮಾಡುತ್ತಾರೆ. ಭವಿಷ್ಯ ಕೇಳಿ, ಅಜ್ಜಯ್ಯ ನುಡಿದಂತೆ ನಡೆಯುತ್ತಾರೆ. ತಮ್ಮ ರಾಜಕೀಯ ನಿರ್ಧಾರಗಳಿಗೂ ಸಹ ಅವರು ನೊಣವಿನಕೆರೆ ಅಜ್ಜಯ್ಯನ ಸಲಹೆಯನ್ನು ಪಡೆಯುತ್ತಾರೆ. ಅಂತೆಯೇ ಈಗ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ಮತ್ತೆ ನೊಣವಿನಕೆರೆ ಅಜ್ಜಯ್ಯನಿದ್ದಲ್ಲಿಗೆ ತೆರಳಿದ್ದಾರೆ. ಇಂದು ಬೆಳಗ್ಗೆ ಅವರ ಮನೆಗೆ ಬೆಂಬಲಿಗರು, ಕಾರ್ಯಕರ್ತರು ಆಗಮಿಸುತ್ತಿದ್ದರು. ಹೀಗಿದ್ದಾಗ್ಯೂ ಪ್ರಥಮ ಪೂಜೆ ಅಜ್ಜಯ್ಯಂಗೆ ಎಂದು ಅಲ್ಲಿಗೆ ಹೋಗಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ತಮ್ಮ ಕುಟುಂಬದ ಜತೆ ನೊಣವಿನಕೆರೆ ಅಜ್ಜಯ್ಯನಿದ್ದಲ್ಲಿಗೆ ಬಂದಿದ್ದು, ಮಠದ ಮೂಲ ಗದ್ದುಗೆಗೆ ಪೂಜೆ ಸಲ್ಲಿಸಲಿದ್ದಾರೆ. ಅಲ್ಲಿ ಮಾಧ್ಯಮದವರಿಗೆ, ಇತರರಿಗೆ ಪ್ರವೇಶ ಇಲ್ಲ, ರಹಸ್ಯವಾಗಿ ಅವರು ಪೂಜೆ ಮಾಡಲಿದ್ದಾರೆ. ಇಂದು ಡಿಕೆಶಿ ನೊಣವಿನಕೆರೆ ಅಜ್ಜಯ್ಯನ ಮಠಕ್ಕೆ ಬರುತ್ತಿದ್ದಂತೆ ಅವರಿಗೆ ಶಾಲು ಹೊದೆಸಿ, ಹಾರ ಹಾಕಿ ಬರಮಾಡಿಕೊಳ್ಳಲಾಗಿದೆ. ಅಲ್ಲಿ ಹಲವು ಕಾರ್ಯಕರ್ತರೂ ನೆರೆದಿದ್ದರು. ಡಿ.ಕೆ.ಶಿವಕುಮಾರ್ ಜತೆ ಅವರ ಸೋದರ ಡಿ.ಕೆ.ಸುರೇಶ್ ಕೂಡ ಇದ್ದರು. ಇದೇ ವೇಳೆ ಅನೇಕ ಕಾರ್ಯಕರ್ತರು ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಕೂಗಿದರು. ಅವರಿಗೆ ಹಾಕಲು ಹೂವು ತಂದಿದ್ದರು. ಆದರೆ ಅದನ್ನು ನೋಡಿ ಡಿಕೆ ಶಿವಕುಮಾರ್ ಸಿಟ್ಟಾಗಿದ್ದಾರೆ. ‘ತರಲೆ’ಗಳು ಎಂದು ಬೈದಿದ್ದಾರೆ. ಹೂವು ಹಾಕಿಕೊಳ್ಳೋದಿಲ್ಲ, ದೇವರಿಗೆ ಹಾಕಿ, ನನ್ನ ಮೇಲೆ ಅಭಿಮಾನ ಇದ್ರೆ ದೇವಸ್ಥಾನದ ಕಾಂಪೌಂಡಿಂದ ಆಚೆ ಹೋಗಿ ಎಂದು ಖಡಕ್ ಆಗಿ ಹೇಳಿದ್ದಾರೆ.
ಇಂದು ಬೆಂಗಳೂರಿನಿಂದ ನೊಣವಿನಕೆರೆಗೆ ಹೋಗುವುದಕ್ಕೂ ಮೊದಲು ನೆರೆದಿದ್ದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದ ಡಿ.ಕೆ.ಶಿವಕುಮಾರ್ ‘ಕುತೂಹಲ ಪಡಬೇಕಾಗಿದ್ದು ಏನೂ ಇಲ್ಲ. ಯಾರೂ ಟೆನ್ಷನ್ ಮಾಡಿಕೊಳ್ಳಬೇಡಿ. ಎಲ್ಲಿ ಶ್ರಮವಿದೆಯೋ ಅಲ್ಲಿ ಪ್ರತಿಫಲ ಇದ್ದೇ ಇರುತ್ತದೆ. ಎಲ್ಲಿ ಭಕ್ತಿ ಇದೆಯೋ, ಅಲ್ಲಿ ಭಗವಂತ ಇರುತ್ತಾನೆ. ನಾನು ನಂಬಿರುವ ಶಕ್ತಿ, ಪ್ರತಿ ಹೆಜ್ಜೆಯಲ್ಲೂ ಧೈರ್ಯ ತುಂಬಿ, ನನ್ನನ್ನು ಕಷ್ಟದಿಂದ ಪಾರು ಮಾಡಿದ ಅಜ್ಜಯ್ಯನನ್ನು ಭೇಟಿ ಮಾಡಲು ಹೋಗುತ್ತಿದ್ದೇನೆ. ನೊಣವಿನಕೆರೆಯಿಂದ ಒಂದು ಗಂಟೆಗೆ ವಾಪಸ್ ಬರುತ್ತೇನೆ’ ಎಂದು ಹೇಳಿದ್ದರು.
ಇದನ್ನೂ ಓದಿ: ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಮನೆ ಬಳಿ ಜಮಾಯಿಸುತ್ತಿರುವ ಬೆಂಬಲಿಗರು; ಪೊಲೀಸ್ ಭದ್ರತೆ
ಈ ಹಿಂದೆ ಡಿ.ಕೆ.ಶಿವಕುಮಾರ್ ಅವರು ಹಣ ಅಕ್ರಮ ವರ್ಗಾವಣೆ ಆರೋಪದಡಿ ಜೈಲು ಸೇರಿದ್ದರು. ಬಳಿಕ ಬಿಡುಗಡೆಯಾಗಿ ಬಂದ ಮರುದಿನವೇ ಅಜ್ಜಯ್ಯನನ್ನು ಭೇಟಿ ಮಾಡಿ ಪೂಜೆ ಸಲ್ಲಿಸಿದ್ದರು. ಇನ್ನು 2020ರಲ್ಲಿ ಒಮ್ಮೆ ಭೇಟಿಯಾಗಿ ಭವಿಷ್ಯ ಕೇಳಿದ್ದರು. ಡಿಕೆಶಿ ಅಜ್ಜಯ್ಯನನ್ನು ಸದಾ ಭೇಟಿಯಾಗಿ, ಅಲ್ಲಿ ಪೂಜೆ ಮಾಡುತ್ತಾರೆ. ಇದೀಗ ಅವರು ಮುಖ್ಯಮಂತ್ರಿ ಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಸಿದ್ದರಾಮಯ್ಯನವರ ಪೈಪೋಟಿ ಇದೆ. ಇಂಥ ಮಹತ್ವದ, ನಿರ್ಣಾಯಕ ಹೊತ್ತಲ್ಲಿ ಅಜ್ಜಯ್ಯನ ಭೇಟಿ ಮಾಡಿದ್ದಾರೆ. ಇನ್ನು ಮುಖ್ಯಮಂತ್ರಿ ಹುದ್ದೆ ವಿಷಯದಲ್ಲಿ ಹೈಕಮಾಂಡ್ ಡಿ.ಕೆ.ಶಿವಕುಮಾರ್ ಪರ ನಿಲ್ಲುತ್ತದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಅವರು ಏನೂ ಉತ್ತರ ನೀಡಿಲ್ಲ.