ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮನೆ ಮೇಲೆ ದಾಳಿ ಆರೋಪದಲ್ಲಿ ತುಮಕೂರು ಜೈಲಿನಲ್ಲಿ ಬಂಧಿತನಾಗಿರುವ NSUI ಕಾರ್ಯಕರ್ತನನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿ ಮಾಡಿದರು. ಭೇಟಿ ಮಾಡಿ ಹೊರಬಂದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಆರ್‌ಎಸ್‌ಎಸ್ ವಿಚಾರವನ್ನೆ ರೋಹಿತ್ ಚಕ್ರತೀರ್ಥ ಅವರ ಸಮಿತಿ ಸೇರಿಸಿದೆ ಎಂದು ಕಾಂಗ್ರೆಸ್ ವಿರೋಧಿಸಿತ್ತು. ಈ ಕಾರಣಕ್ಕೆ ತುಮಕೂರಿನಲ್ಲಿರುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ಮನೆಯ ಬಳಿ ಕಾಂಗ್ರೆಸ್ ವಿದ್ಯಾರ್ಥಿ ಘಟಕದ ಸದಸ್ಯರು ಪ್ರತಿಭಟನೆಗೆ ಮುಂದಾಗಿದ್ದರು. ಈ ವೇಳೆ ಸಚಿವರ ಮನೆ ಮೇಲೆ ದಾಳಿಗೆ ಮುಂದಾಗಿದ್ದರು ಎಂದು ಆರೋಪಿಸಿ NSUI ಕಾರ್ಯಕರ್ತ ಕೀರ್ತಿ ಗಣೇಶ್ ಸೇರಿ ಅನೇಕರನ್ನು ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ | ಸಚಿವ ಬಿ.ಸಿ. ನಾಗೇಶ್ ಮನೆ ಮೇಲೆ ದಾಳಿ ಯತ್ನಕ್ಕೆ ಬಿಜೆಪಿ ನಾಯಕರ ಖಂಡನೆ
ಇದೇ ವಿಚಾರದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ರಾಜ್ಯ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಮತ್ತಿತರರು ಭಾಗವಹಿಸಿದ್ದರು.
ಶನಿವಾರ ಮದ್ಗಯಾಹ್ನ ಹೊಸದುರ್ಗದಲ್ಲಿ ಉಪ್ಪಾರರ ಸಮಾವೇಶದಲ್ಲಿ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದರು. ಭಾಗವಹಿಸಿದ ನಂತರ ಮಾರ್ಗಮಧ್ಯೆ ತುಮಕೂರಿನ ಕಾರಾಗೃಹಕ್ಕೆ ತೆರಳಿದರು. ಅಲ್ಲಿ ಕೀರ್ತಿ ಗಣೇಸ್ ಅವರನ್ನು ಭೇಟಿ ಮಾಡಿದರು. ಡಿ.ಕೆ. ಶಿವಕುಮಾರ್ ಅವರ ಜತೆಗೆ ಬಿ.ವಿ. ಶ್ರೀನಿವಾಸ್ ಸಹ ಭೇಟಿ ನೀಡಿದರು.
ಇದನ್ನೂ ಓದಿ | ನಮ್ಮದು ಡಿ.ಕೆ. ಶಿವಕುಮಾರ್ ಕುಟುಂಬ ಕೆಟ್ಟೋಯ್ತ?: ಆರೋಪಕ್ಕೆ ಅಶ್ವತ್ಥನಾರಾಯಣ ಆಕ್ರೋಶ
ನಂತರ ಮಾತನಾಡಿದ ಶಿವಕುಮಾರ್, ಬಿಜೆಪಿ ಸರ್ಕಾರ ಶಿಕ್ಷಣ ಸಚಿವ ನಾಗೇಶ್ ಅವರ ಮೂಲಕ ರಾಜ್ಯ ಹಾಗೂ ದೇಶದ ಇತಿಹಾಸ ತಿರುಚಲು ಹೊರಟಿದೆ. ಪಠ್ಯಪುಸ್ತಕದಲ್ಲಿ ಕುವೆಂಪು, ಅಂಬೇಡ್ಕರ್, ಬಸವಣ್ಣ, ನಾರಾಯಣ ಗುರುಗಳಿಗೆ ಅಪಮಾನ ಮಾಡುತ್ತಿರುವುದು ಸರಿಯಲ್ಲ. ದೇಶದ ಸಂಸ್ಕೃತಿ, ಅನೇಕ ಮಹಾನ್ ನಾಯಕರ ವಿಚಾರ ತಿರುಚುವುದು ಸರಿಯಿಲ್ಲ ಎಂದು ಹಲವು ಮಠಾಧೀಶರು, ಸಾಹಿತಿಗಳು ವಿರೋಧಿಸುತ್ತಿದ್ದಾರೆ. ವಿದ್ಯಾರ್ಥಿ ನಾಯಕರು ನಾಗೇಶ್ ಅವರ ಮನೆ ಮುಂದೆ ಹೋಗಿ ಚಡ್ಡಿ ಸುಟ್ಟಿರಬಹುದು, ಧಿಕ್ಕಾರ ಕೂಗಿರಬಹುದು. ಆದರೆ ಅವರು ಮನೆಯೊಳಗೆ ನುಗ್ಗಿಲ್ಲ. ಕಾರ್ಯಕರ್ತರು ಕೆಲ ಕಾಗದ ಸುಟ್ಟಿರಬಹುದು. ನಾವು ಅನೇಕ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಕಾಗದ ಹರಿದಿದ್ದೇವೆ. ಆದರೆ ನಮ್ಮ ಹುಡುಗರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿಲ್ಲ ಎಂದು ಸಮರ್ಥನೆ ಮಾಡಿಕೊಂಡರು.
ಪ್ರತಿಭಟನೆಯಲ್ಲಿ ಸಾಂಕೇತಿಕವಾಗಿ ಇವರೇ ಚಡ್ಡಿ ತೆಗೆದುಕೊಂಡು ಹೋಗಿ ಸುಟ್ಟಿದ್ದಾರೆ. ಅವರು ನಾಗೇಶ್ ಅವರ ಮನೆ ಅಥವಾ ಬೇರೆಯವರ ಮನೆಯ ಚಡ್ಡಿ ತಂದು ಸುಟ್ಟಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡಲು ಸಾಂವಿಧಾನಿಕ ಹಕ್ಕಿದೆ. ಮೊನ್ನೆ ರೈತ ನಾಯಕ ಟಿಕಾಯತ್ ಅವರ ಮೇಲೆ ಬೆಂಗಳೂರಿನಲ್ಲಿ ಕೆಲವರು ಮೋದಿ ಅವರಿಗೆ ಜೈಕಾರ ಕೂಗುತ್ತಾ ಹಲ್ಲೆ ಮಾಡಿದ್ದಾರೆ. ಸರ್ಕಾರ ಇವರ ವಿರುದ್ಧ ಯಾವ ಸೆಕ್ಷನ್ ಹಾಕಿದೆ? ನಮ್ಮ ವಿದ್ಯಾರ್ಥಿ ನಾಯಕರಿಗೆ ಜಾಮೀನು ಸಿಗಬಾರದು ಎಂದು 143, 147, 448, 443, 332 ಸೇರಿದಂತೆ ಹಲವು ಗಂಭೀರ ಸೆಕ್ಷನ್ ಹಾಕಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ | ಚಡ್ಡಿಗೆ ಬೆಂಕಿ ಹಚ್ಚಿದರೆ ನಿಮ್ಮ ಬುಡವೇ ಬೂದಿಯಾಗುತ್ತದೆ: ಕೆ.ಎಸ್. ಈಶ್ವರಪ್ಪ ಕಿಡಿ
ಈ ಜಿಲ್ಲೆಯಲ್ಲಿ ಇಬ್ಬರು ದಲಿತರು ಸತ್ತಾಗ ಸಚಿವರು ಎಲ್ಲಿ ಹೋಗಿದ್ದರು? ಎಂದು ಪ್ರಶ್ನಿಸಿದ ಶಿವಕುಮಾರ್, ಇಲ್ಲಿನ ಶಾಸಕರು, ಜಿಲ್ಲಾ ಮಂತ್ರಿಗಳು ಹೋಗಿ ದಲಿತರ ರಕ್ಷಣೆ ಮಾಡಿದ್ದಾರಾ? ಎರಡು ದಿನವಾದರೂ ಉಸಿರು ಎತ್ತಿರಲಿಲ್ಲ. ಆದರೆ ಈಗ ವಿದ್ಯಾರ್ಥಿ ನಾಯಕರನ್ನು ಅರ್ಧ ಗಂಟೆಯಲ್ಲೇ ಬಂಧಿಸಿದ್ದಾರೆ. ಪಠ್ಯಕ್ರಮ ಬದಲಾವಣೆ ವಿಚಾರವಾಗಿ ನಿರ್ಮಲಾನಂದ ಸ್ವಾಮೀಜಿ, ಸಿದ್ದಗಂಗಾ ಸ್ವಾಮೀಜಿ ಸೇರಿದಂತೆ ಹಲವು ಸ್ವಾಮೀಜಿಗಳು, ಸಾಹಿತಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಪ್ರೇರಣೆಯಿಂದ ರಾಜ್ಯದಲ್ಲಿ ಧರ್ಮ ದ್ವೇಷ ಹೆಚ್ಚುತ್ತಿರುವುದು, ಶಾಂತಿ ಭಂಗವಾಗುತ್ತಿರುವುದು, ಇತಿಹಾಸ ತಿರುಚಲು ಯತ್ನಿಸುತ್ತಿರುವುದನ್ನು ಖಂಡಿಸಿ ಈ ಹುಡುಗರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಈ ಹುಡುಗರಿಗೆ ಜಾಮೀನು ತಿರಸ್ಕಾರಗೊಂಡಿದ್ದು, ಇದು ಅಪಮಾನವಲ್ಲ. ನಾವು ಉನ್ನತ ನ್ಯಾಯಾಲಯದ ಮೊರೆ ಹೋಗುತ್ತೇವೆ. ರಾಜಕೀಯ ದುರುದ್ದೇಶದಿಂದ ಇಂತಹ ಪ್ರಕರಣ ದಾಖಲಿಸಲಾಗುತ್ತಿದೆ. ಬಿಜೆಪಿ ನಾಯಕರು ಹಲವು ಬಾರಿ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ. ಶಿವಮೊಗ್ಗದಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದರೂ ಸಚಿವರು ಶವಯಾತ್ರೆ ಮಾಡಿದ್ದರೂ, ಬಿಜೆಪಿ ನಾಯಕರು ಜನರನ್ನು ಸೇರಿಸಿ ಜಾತ್ರೆ, ಹುಟ್ಟುಹಬ್ಬ ಆಚರಿಸಿದ್ದರು. ಆದರೆ ಅವರ ಮೇಲೆ ಯಾವುದೇ ಪ್ರಕರಣ ದಾಖಲಿಸಿಲ್ಲ. ನಾವು ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಮಾಡಿದ್ದಕ್ಕೆ ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದರು.
ರಾಜಕಾರಣಿಗಳ ಮಾತು ಕೇಳಿ ಅನಗತ್ಯವಾಗಿ ಸೆಕ್ಷನ್ ಹಾಕುತ್ತಿರುವ ಅಧಿಕಾರಿಗಳು ಒಂದು ದಿನ ಇದಕ್ಕೆಲ್ಲಾ ಉತ್ತರ ನೀಡಿ, ಇದರ ಪರಿಣಾಮ ಅನುಭವಿಸಬೇಕಾಗುತ್ತದೆ. ನಮ್ಮ ಹುಡುಗರ ಮೇಲೆ ರೌಡಿ ಶೀಟರ್‌ಗಳು ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ನಾವು ದೂರು ಕೊಟ್ಟರೂ ಪೊಲೀಸ್ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿಲ್ಲ. ಚಿಂತನ ಮಂಥನ ಸಭೆಯಲ್ಲಿದ್ದ ಕಾರಣ ನಾವು ಬರಲು ಸಾಧ್ಯವಾಗಿರಲಿಲ್ಲ. ಇಲ್ಲದಿದ್ದರೆ ನಾವು ಬರುತ್ತಿದ್ದೆವು ಎಂದು ಹೇಳಿದರು.
ಚಡ್ಡಿ ನಮ್ಮ ಬ್ರ್ಯಾಂಡ್ ಎಂದು ಬಿಜೆಪಿ ಸಂಸದರು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಅವರು ಮಾತ್ರ ಚಡ್ಡಿ ಹಾಕುತ್ತಾರಾ? ನಾವು ಹಾಕುವುದಿಲ್ಲವೇ? ಪ್ರತಿಭಟನೆ ಪ್ರತೀಕವಾಗಿ ಚಡ್ಡಿ ಸುಟ್ಟಿದ್ದಾರೆ. ಅವರು ರಾಷ್ಟ್ರಧ್ವಜಕ್ಕೆ ಬೆಂಕಿ ಹಚ್ಚಿಲ್ಲ ಎಂದು ಸಮರ್ಥನೆ ಮಾಡಿಕೊಂಡರು.
ಇದನ್ನೂ ಓದಿ | RSS ಚಡ್ಡಿ ಸುಡಬೇಕು ಎಂದ ಸಿದ್ದರಾಮಯ್ಯ ವಿರುದ್ಧ CM, ಸಚಿವರ ವಾಗ್ದಾಳಿ