Site icon Vistara News

DK Shivakumar: ನಮ್ಮ ಅಧಿಕಾರಿಗಳು ಬಹಳ ಖದೀಮರಿದ್ದಾರೆ, ಡಿ ಗ್ರೇಡ್ ಕ್ಲರ್ಕ್‌ಗಳೆಲ್ಲಾ ಅಧೀಕ್ಷಕ, ಎಂಡಿಗಳಾಗಿದ್ದಾರೆ ಎಂದ ಡಿಕೆಶಿ

DK Shivakumar

ಬೆಂಗಳೂರು: ನಿಗಮ-ಮಂಡಳಿಗಳ ಅಧ್ಯಕ್ಷರಿಗೆ ಈಗಾಗಲೇ ಹೇಳಿದ್ದೇವೆ. ನಮ್ಮ‌ ಅಧಿಕಾರಿಗಳು ಬಹಳ ಖದೀಮರಿದ್ದಾರೆ, ಅಲ್ಲಿದ್ದ (ಹಿಂದಿನ ಸರ್ಕಾರ) ಖದೀಮರು ಇಲ್ಲಿಗೂ ಬಂದು ಸೇರಿಕೊಂಡಿದ್ದಾರೆ. 300-400 ಕೋಟಿ‌ ರೂ. ಅಲ್ಲಿ ತಿಂದ‌ ಅದೇ ಅಧಿಕಾರಿಗಳು ಇಲ್ಲಿದ್ದಾರೆ. ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಡಿ ಗ್ರೇಡ್ ಕ್ಲರ್ಕ್‌ಗಳಲ್ಲಾ ಸೂಪರಿಂಟೆಂಡೆಂಟ್, ಎಂಡಿಗಳನ್ನಾಗಿ ಮಾಡಿಬಿಟ್ಟಿದ್ದಾರೆ. ಅಂತವರ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ (DK Shivakumar) ತಿಳಿಸಿದ್ದಾರೆ.

ವಾಲ್ಮೀಕಿ ನಿಗಮ ಅಕ್ರಮದ ಹಿನ್ನೆಲೆಯಲ್ಲಿ ನಿಗಮ ಮಂಡಳಿಗಳಲ್ಲಿ‌ ಪಾರದರ್ಶಕತೆ ತರುವ ವಿಚಾರದ ಬಗ್ಗೆ ಮಾತನಾಡಿರುವ ಅವರು, ಆರ್ಥಿಕ ಇಲಾಖೆಯ ಖಜಾನೆಯಲ್ಲಿ ಕಂಟ್ರೋಲ್ ಮಾಡುವ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ವಾಲ್ಮೀಕಿ ನಿಗಮ ಮಂಡಳಿ ಹಗರಣದಲ್ಲಿ‌ ಸಿಎಂ ಹಾಗೂ ಡಿಸಿಎಂ ಹೆಸರು ಹೇಳುವಂತೆ ಒತ್ತಡ ವಿಚಾರಕ್ಕೆ ಪ್ರತಿಕ್ರಿಯಿಸಿ, ಬೇಡವೆಂದವರು ಯಾರು?, ನೀವೂ ಹೇಳಿ, ಅವರೂ ಹೇಳಲಿ ಎಂದರು.

ರಾಜ್ಯದ ಹಲವೆಡೆ ಮಳೆಯಾಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ದೇವರ ಕೃಪೆಯಿಂದ ಮಳೆ‌ ಚೆನ್ನಾಗಿ ಆಗುತ್ತಿದೆ. 2-3 ದಿನಗಳಲ್ಲಿ‌ ಕೆಆರ್‌ಎಸ್ ಜಲಾಶಯ ತುಂಬಲಿದೆ. ತಮಿಳುನಾಡಿಗೆ ನೀರು ಬಿಡುವಂತೆ ಕೋರ್ಟ್ ಆದೇಶ ಕೊಟ್ಟಿತ್ತು. ಅದನ್ನ ಪಾಲನೆ ಮಾಡುವ ಸೂಚನೆಗಳು‌ ತಮಗೆಲ್ಲ ಕಾಣುತ್ತಿದೆ. ಮುಂಜಾಗ್ರತೆಯಾಗಿ ಕೆಲವು ಕಡೆ ನೀರು ಬಿಡಬೇಕಾಗುತ್ತದೆ. ಹೆಚ್ಚು ಕಡಿಮೆ‌ ಆಗಬಾರದು ಅಂತ ಪಕ್ಷಿಧಾಮಗಳ ಕಡೆ ದೋಣಿ ಸಂಚಾರ ಎಲ್ಲವನ್ನೂ ನಿಲ್ಲಿಸಿದ್ದೀವಿ. ಮುಂಜಾಗ್ರತಾವಾಗಿ ಹೊಳೆಗಳ ಪಕ್ಕದಲ್ಲಿರುವ ಮನೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದೇವೆ ಎಂದರು.

ಕಾರವಾರದಲ್ಲಿ ವಿಪರೀತ ಮಳೆ ಆಗುತ್ತಿದೆ, ಕೆಲಸಕ್ಕೆ ಬಹಳ ತೊಂದರೆ ಆಗುತ್ತಿದೆ. ಕೇರಳದಿಂದ ಮೂಲದ ಚಾಲಕ ವಾಹನ ಸಮೇತ ಸಿಲುಕಿಕೊಂಡಿದ್ದಾನೆ. 85-90 ಗಂಟೆಗಳು ಕಳೆದು ಹೋಗಿದೆ, ನಮಗೆ‌ ಟ್ರೇಸ್ ಮಾಡೋಕೆ‌ ಆಗಲಿಲ್ಲ. ಬಹಳ ಪ್ರಯತ್ನ ಮಾಡ್ತಾ ಇದ್ದೀವಿ, ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳದಲ್ಲಿದ್ದಾರೆ. ಅವರವರ ಕೆಲಸಗಳನ್ನ ಮಾಡ್ತಾ ಇದ್ದಾರೆ ಎಂದು ತಿಳಿಸಿದರು.

ನಮ್ಮ ರೈತರ ಹಿತಕ್ಕೆ ಏನೇನು ಬೇಕೋ ಅದನ್ನು ಮಾಡುತ್ತೇವೆ. ಕೆರೆಗಳನ್ನು ತುಂಬಿಸೋದಕ್ಕೂ ರೈತರಿಗೆ ಬೇಕಾದ ವ್ಯವಸ್ಥೆ ಮಾಡುತ್ತೇವೆ. ಇದಕ್ಕಾಗಿ ಕೆಲವು ಚಾನೆಲ್‌ಗಳನ್ನು ಓಪನ್ ಮಾಡಿದ್ದೇವೆ. ಭತ್ತ ನಾಟಿ ಮಾಡುವ ಸಂದರ್ಭದಲ್ಲಿ‌ ಸ್ವಲ್ಪ ತಾಳ್ಮೆಯಿಂದ ಇರಬೇಕು. ಕೃಷಿ ಇಲಾಖೆ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದರು.

ಇದನ್ನೂ ಓದಿ | Karnataka Job Reservation : ಹಗರಣಗಳನ್ನು ಮುಚ್ಚಿಡಲು ಕನ್ನಡಿಗರಿಗೆ ಮೀಸಲು ವಿಚಾರ ಮುನ್ನೆಲೆಗೆ ತಂದ ಸರ್ಕಾರ; ಸಿಟಿ ರವಿ ಆರೋಪ

ಅಂಕೋಲಾಕ್ಕೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಿಲಿಟರಿ ಕರೆದುಕೊಂಡು ಇಳಿದಿದ್ದರೆ ಫೀಲ್ಡಿಗೆ ಬಂದಿದ್ದಾರೆ ಅಂತ ಹೇಳಬಹುದು. ಸುಮ್ಮನೇ ವಿಸಿಟ್ ಮಾಡಿ ಬಂದರೆ ಏನಾದ್ರೂ ಆಗುತ್ತಾ? ಒಂದೇ ಗಂಟೆಯಲ್ಲಿ ನಮ್ಮ ಕ್ಯಾಬಿನೆಟ್ ಸಚಿವರನ್ನು ಅಲ್ಲಿಗೆ‌ ಓಡಿಸಿದ್ದೇವೆ. ಮಂಕಾಳ್ ವೈದ್ಯ, ಕೃಷ್ಣಬೈರೇಗೌಡ ಅಲ್ಲಿಗೆ ಹೋಗಿದ್ದರು. ಏನೇನು ಮಾಡಬೇಕೊ ಅದನ್ನು ಮಾಡಿದ್ದಾರೆ, ಅಧಿಕಾರಿಗಳಿಗೆ ಸೂಚನೆ‌ ಕೊಟ್ಟಿದ್ದಾರೆ. ನಮ್ಮ ಸರ್ಕಾರ ಏನು ಮಾಡಬೇಕೋ ಅದನ್ನು ಮಾಡುತ್ತದೆ. ಈಗ ರಾಜಕಾರಣ ಬೇಡ, ಜನರನ್ನು ಉಳಿಸಿಕೊಳ್ಳುವ ಕೆಲಸ ಮಾಡೋಣ ಎಂದು ತಿಳಿಸಿದರು.

Exit mobile version