ಬೆಂಗಳೂರು: ಅಲ್ಪಸಂಖ್ಯಾತ ಸಮುದಾಯಕ್ಕೆ ಕಾಂಗ್ರೆಸ್ ಪ್ರಾಶಸ್ತ್ಯ ನೀಡುತ್ತದೆ, ಅವರು ಅರ್ಜಿ ಸಲ್ಲಿಸದೆ ಇರುವ ಕಡೆಯಲ್ಲೂ ಪಕ್ಷವೇ ಗುರುತಿಸಿ ಟಿಕೆಟ್ ನೀಡುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರು ಪ್ರೆಸ್‌ಕ್ಲಬ್ ವತಿಯಿಂದ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಅನೇಕ ವಿಷಯಗಳ ಕುರಿತು ಸುದೀರ್ಘವಾಗಿ ಡಿ.ಕೆ. ಶಿವಕುಮಾರ್ ಮಾತನಾಡಿದರು.
ಪಕ್ಷದಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಟಿಕೆಟ್ ನೀಡುವ ಕುರಿತು ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಅಲ್ಪಸಂಖ್ಯಾತರಿಂದ ಹೆಚ್ಚಿನ ಅರ್ಜಿ ಬಂದಿರುವುದು ತಪ್ಪಿಲ್ಲ. ಅವರು ಟಿಕೆಟ್ ಕೇಳುತ್ತಿರುವುದರಲ್ಲೂ ತಪ್ಪಿಲ್ಲ. ಪ್ರತಿ ಕ್ಷೇತ್ರವೂ ಬಹಳ ಮುಖ್ಯ. ಬಿಜೆಪಿ ಕಾರ್ಯಯೋಜನೆ ಗೊತ್ತಿದೆ. ಕಾಂಗ್ರೆಸ್ ಪಕ್ಷ ಕೂಡ ಆ ಸಮುದಾಯಕ್ಕೆ ಶಕ್ತಿ ತುಂಬಲು ಪ್ರಯತ್ನಿಸುತ್ತದೆ.
ವಿಧಾನಪರಿಷತ್‌ನಲ್ಲಿ ನಾಲ್ಕು ಸ್ಥಾನಗಳು ಖಾಲಿ ಇದ್ದಾಗ ಅಲ್ಪಸಂಖ್ಯಾತರ ಧ್ವನಿ ಇರಬೇಕು ಎಂಬ ಕಾರಣಕ್ಕೆ ಎರಡು ಸೀಟನ್ನು ಅವರಿಗೆ ನೀಡಲಾಗಿದೆ. ಯಾವುದೇ ಸಮುದಾಯದವರು ಟಿಕೆಟ್ ಕೇಳಿದರೂ ತಪ್ಪಿಲ್ಲ. ಮುಸಲ್ಮಾನರಿಗೆ ಟಿಕೆಟ್ ನೀಡಬೇಕು ಎಂದು ನಾವು ಅಂದುಕೊಂಡಿರುವ ಕ್ಷೇತ್ರಗಳಲ್ಲಿ ಅವರು ಅರ್ಜಿಯನ್ನೇ ಹಾಕಿಲ್ಲ. ಆದರೆ ನಾವೇ ಗುರುತಿಸಿ ಕೆಲವನ್ನು ಸೇರಿಸಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, ಬದುಕು ಬೇಕೋ ಭಾವನೆಗಳು ಬೇಕೋ ಎಂಬ ವಿಚಾರ ಈಗ ಚರ್ಚೆ ಆಗುತ್ತಿದೆ. ನಾವು ಬದುಕಿನ ಬಗ್ಗೆ ಹೋರಾಟ ಮಾಡಿದರೆ, ನಮ್ಮ ವಿರೋಧ ಪಕ್ಷದವರು ಭಾವನೆ ಬಗ್ಗೆ ಹೋರಾಟ ಮಾಡುತ್ತಿದ್ದಾರೆ. ನಾನು ವಿರೋಧ ಪಕ್ಷದ ರಾಜ್ಯದ ಅಧ್ಯಕ್ಷನಾಗಿ ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ನನಗೆ ಜವಾಬ್ದಾರಿಗಳು ಹೆಚ್ಚಾಗಿರುವ ಕಾರಣ ನಾನು ಅಧಿವೇಶನಗಳಲ್ಲಿ ಹೆಚ್ಚಾಗಿ ಮಾತನಾಡಲು ಆಗುತ್ತಿಲ್ಲ. ಅಧಿಕಾರದಲ್ಲಿರುವ ಸರ್ಕಾರದ ವಿರುದ್ಧ ಮಾತನಾಡಲು ಹುಡುಕಲು ನಾನು ಎಲ್ಲಿಗೂ ಹೋಗಬೇಕಿಲ್ಲ. ಮಾಧ್ಯಮಗಳು ಅದರಲ್ಲೂ ಮುದ್ರಣ ಮಾಧ್ಯಮ ಕಾಂಗ್ರೆಸ್‌ಗಿಂತ ಹೆಚ್ಚಾಗಿ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದೆ. ಸರ್ಕಾರ, ಸರ್ಕಾರಿ ಅಧಿಕಾರಿಗಳ ತಪ್ಪು, ಅಕ್ರಮ, ಭ್ರಷ್ಟಾಚಾರಗಳನ್ನು ತಮ್ಮದೇ ಆದ ತನಿಖೆ ಮೂಲಕ ಬಹಿರಂಗಪಡಿಸುತ್ತಿದೆ.
ಇಷ್ಟೆಲ್ಲಾ ಆದರೂ ಮಾಧ್ಯಮಗಳು ಮುಖ್ಯಮಂತ್ರಿ ವಿಚಾರಕ್ಕೆ ಕಿತ್ತಾಟದ ಬಗ್ಗೆ ಹೆಚ್ಚು ಚರ್ಚೆ ಮಾಡಲಾಗುತ್ತಿವೆ. ಮುಖ್ಯಮಂತ್ರಿ ವಿಚಾರವಾಗಿ ನಮ್ಮಲ್ಲಿ ಕಿತ್ತಾಟದ ಬಗ್ಗೆ ಒಂದು ಘಟನೆಯೂ ಸಿಗದಿದ್ದರೂ ಈ ವಿಚಾರ ಚರ್ಚೆಗೆ ಅಕಾಶ ಮಾಡಿಕೊಟ್ಟಿದ್ದೀರಿ. ಆಡಳಿತ ಪಕ್ಷದಲ್ಲಿನ ಆಂತರಿಕ ಭಿನ್ನಮತ ಹೆಚ್ಚು ಚರ್ಚೆ ಆಗುತ್ತಿಲ್ಲ. ಈ ಬಗ್ಗೆ ಬಿಜೆಪಿಯವರು ಮಾತನಾಡುತ್ತಿದ್ದಾರೆ. ಬಿಜೆಪಿಯವರು ತಮ್ಮ ಮುಖ್ಯಮಂತ್ರಿ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಮುಖ್ಯಮಂತ್ರಿ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ಅಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬುದನ್ನು ಒಪ್ಪಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಲಂಚ ಹಾಗೂ ಮಂಚದ ವಿಚಾರದಲ್ಲಿ ಇಬ್ಬರು ಸಚಿವರ ತಲೆತಂಡವಾಗಿದೆ. ಇವರು ರಾಜೀನಾಮೆ ನೀಡುವ ಮುನ್ನ ಅವರಿಗೆ ಕ್ಲೀನ್ ಚಿಟ್ ನೀಡುತ್ತಾರೆ. ಅವರ ಬೆಂಬಲವಾಗಿ ನೀಡುವಾಗ ಅಧಿಕಾರಿಗಳಿಗೆ ಬಿ ರಿಪೋರ್ಟ್ ನೀಡುವಂತೆ ಸೂಚಿಸುತ್ತಾರೆ. ಅವರ ಸಾಧನೆಗೆ ನಾವು ಅಭಿನಂದನೆ ಸಲ್ಲಿಸಬೇಕು ಎಂದು ವ್ಯಂಗ್ಯ ಮಾಡಿದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಪ್ರಧಾನಮಂತ್ರಿಗಳಿಗೆ ದೂರು ನೀಡಿದರು, ಕೆಲವರು ಭ್ರಷ್ಟಾಚಾರ ಕಿರುಕುಳ ತಾಳಲಾರದೆ ಪ್ರಾಣ ಬಿಟ್ಟಿದ್ದಾರೆ. ಆಮೂಲಕ ದೇಶದಲ್ಲೇ ಭ್ರಷ್ಟಾಚಾರದ ರಾಜಧಾನಿ ಎಂಬ ಕುಖ್ಯಾತಿಯನ್ನು ರಾಜ್ಯಕ್ಕೆ ನೀಡಿದ್ದಾರೆ. ಕೆಂಪಣ್ಣ ಅವರ ಆರೋಪ ಸುಳ್ಳಾಗಿದ್ದರೆ ಅವರ ವಿರುದ್ಧ ತನಿಖೆ ಯಾಕಿಲ್ಲ? ಗುತ್ತಿಗೆದಾರರು ದಾಖಲೆ ನೀಡುತ್ತೇವೆ ಎಂದು ಹೇಳಿದ್ದರೂ ಯಾವ ಅಧಿಕಾರಿ ವಿರುದ್ಧವೂ ತನಿಖೆ ಮಾಡಲಿಲ್ಲ. ಭ್ರಷ್ಟಾಚಾರ ವಿಚಾರದ ಬಗ್ಗೆ ಮಾತನಾಡಿದ ಕಾಂಗ್ರೆಸ್ ಶಾಸಕರಿಗೆ ನೋಟಿಸ್ ಕೊಟ್ಟರು. ಇದಕ್ಕಿಂತ ದೊಡ್ಡ ಅಪಮಾನ ಬೇಕೆ?
ಈ ಎಲ್ಲ ಹಗರಣದ ನಂತರ ಈಗ ಮತದಾರರ ಮಾಹಿತಿ ಕಳವು ಮಾಡಲಾಗಿದೆ. ಮನೆಗಳಿಲ್ಲದಿದ್ದರೂ ಮನೆ ಇದೆ ಎಂದು ಮತದಾರರನ್ನು ಸೇರಿಸಿದ್ದಾರೆ. ಕಾಂಗ್ರೆಸ್ ಮತದಾರರನ್ನು ತೆಗೆದು ಹಾಕಿದ್ದಾರೆ. ಸಿಎಸ್‌ಸಿ ಹೆಸರಲ್ಲಿ ಕೆಲವು ರೈತರ ಖಾತೆಗೆ ಕೇಂದ್ರ ಸರ್ಕಾರದ ಹಣ ಹಾಕಿ ಅವರಿಂದ ಹಣ ಪಡೆಯಲಾಗುತ್ತಿದೆ. ಈ ಬಗ್ಗೆ ಮಾಧ್ಯಮಗಳು ಮೃಧು ಧೋರಣೆ ತೋರುತ್ತಿವೆ. ಈ ರಾಜ್ಯದಲ್ಲಿ ಏನಾಗುತ್ತಿದೆ? ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರದ ಗಂಗೋತ್ರಿ ಹರಿದಿದೆ ಎನ್ನುತ್ತೀರಿ, ಆದರೆ ತನಿಖೆ ಮಾಡಿ ಶಿಕ್ಷೆ ನೀಡಿ. ನಿಮ್ಮನ್ನು ತಡೆಯುತ್ತಿರುವವರು ಯಾರು?
ನಮಗೂ ಸಂಕ್ರಾಂತಿ ಬರುತ್ತದೆ
ಈ ಬಾರಿ ನಿಮ್ಮ ಸರ್ಕಾರ ಬಂದರೆ ಮತ್ತೆ ಆಪರೇಷನ್ ಕಮಲ ನಡೆಯದಂತೆ ಹೇಗೆ ತಡೆಯುತ್ತೀರಿ ಎಂದು ಕೇಳಿದ ಪ್ರಶ್ನೆಗೆ, ‘ನಮ್ಮ ಸಮೀಕ್ಷೆಯಲ್ಲಿ ಕಾಂಗ್ರೆಸ್ 136 ಸೀಟು, ಬಿಜೆಪಿ 66 ಸ್ಥಾನ ಪಡೆಯಲಿದೆ. 100 ಕ್ಷೇತ್ರಗಳಲ್ಲಿ ಒಂದು ಅರ್ಜಿಗಳಿದ್ದು, ನಮ್ಮಲ್ಲಿ ಐದಾರು ಚುನಾವಣೆ ಸೋತಿರುವ ಕ್ಷೇತ್ರದಲ್ಲೂ 10 ಅರ್ಜಿಗಳು ಬಂದಿವೆ. ಇದರ ಅರ್ಥ ಏನು? ಬಿಜೆಪಿಯವರು ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳಿಲ್ಲ ಎನ್ನುತ್ತಿದ್ದರು. ಅಶೋಕ್ ಅವರು 10 ಜನ ಶಾಸಕರು ಬರುತ್ತಾರೆ ಎಂದು ಹೇಳಿದ್ದಾರೆ. ಅವರು ತಡಯಾಕೆ ಮಾಡುತ್ತಿದ್ದಾರೆ? ಅವರಿಗೆ ಮಾತ್ರ ಸಂಕ್ರಾಂತಿ ಬರುವುದಿಲ್ಲ, ನಮಗೂ ಸಂಕ್ರಾಂತಿ ಬರುತ್ತದೆ’ ಎಂದು ತಿಳಿಸಿದರು.
ಯಾವುದೇ ಭಿನ್ನಾಭಿಪ್ರಾಯ ಇಲ್ಲ
ಪಕ್ಷದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಗೊಂದಲ ಯಾವ ಸಂದೇಶ ಸಾರುತ್ತದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ‘ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ತಮ್ಮ ನಾಯಕರ ಪರವಾಗಿ ಭಾವನೆ, ಅಭಿಮಾನ ವ್ಯಕ್ತಪಡಿಸುತ್ತಾರೆ. ಆದರೆ ನಾನು ಸಿದ್ದರಾಮಯ್ಯ ಅವರು ಒಂದು ಸಣ್ಣ ಸನ್ನಿವೇಶದಲ್ಲಿ ಕಿತ್ತಾಡಿರುವುದನ್ನು ಹೇಳಿ ನೋಡೋಣ. ಬಿಜೆಪಿಯಲ್ಲಿನ ಕಿತ್ತಾಟದ ಬಗ್ಗೆ ಪಟ್ಟಿ ನೀಡಲೇ?’ ಎಂದು ಕೇಳಿದರು.
ದೆಹಲಿ ನಾಯಕರು ನಿಮ್ಮನ್ನು ಕೂರಿಸಿ ಮಾತನಾಡಿಸಿದ್ದು ಸುಳ್ಳಾ ಎಂಬ ಪ್ರಶ್ನೆಗೆ, ‘ನಮ್ಮನ್ನು ಯಾರೂ ಕೂರಿಸಿ ಮಾತನಾಡಿಲ್ಲ. ನನ್ನನ್ನು, ಶಾಸಕಾಂಗ ಪಕ್ಷದ ನಾಯಕರು ಹಾಗೂ ಇತರ ನಾಯಕರನ್ನು ಕರೆಸಿ ಚುನಾವಣೆ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. ನಾನು ರಾಜ್ಯದ ಅಧ್ಯಕ್ಷನಾಗಿ ಸಮೀಕ್ಷೆ ಮಾಡಿಸಿದ್ದೆ, ರಾಷ್ಟ್ರೀಯ ನಾಯಕರೂ ಸಮೀಕ್ಷೆ ಮಾಡಿಸಿದ್ದಾರೆ. ಅದಕ್ಕಾಗಿ ಒಂದು ವಿಭಾಗವನ್ನೇ ಮಾಡಿದ್ದಾರೆ. ಕೆಲವು ಕ್ಷೇತ್ರಗಳಲ್ಲಿನ ಬೆಳವಣಿಗೆಗಳ ಕುರಿತು ಕೆಲವು ಮಾರ್ಗದರ್ಶನ ನೀಡಿದ್ದಾರೆ. ನಾವು ಒಟ್ಟಾಗಿ ಇರುತ್ತೇವೆ, ನಮ್ಮಲ್ಲಿ ವ್ಯಕ್ತಿಪೂಜೆ ಇಲ್ಲ, ಪಕ್ಷ ಪೂಜೆ ಎಂದು ಹೇಳಿ ಅಧಿಕಾರ ಪಡೆದೆ. ಇದು ಅಚಲ. ಇದಕ್ಕೆ ನಾವೆಲ್ಲರೂ ಒಪ್ಪಿದ್ದೇವೆ’ ಎಂದು ಸ್ಪಷ್ಟನೆ ನೀಡಿದರು.
ಬಿಜೆಪಿಯವರು ನಿಮ್ಮನ್ನು ಕೋತ್ವಾಲ್ ರಾಮಚಂದ್ರನ ಶಿಷ್ಯ ಎಂದು ಕರೆಯುವ ಬಗ್ಗೆ ಕೇಳಿದಾಗ, ‘ಬಿಜೆಪಿ ರೌಡಿ ಮೋರ್ಚಾ ಆರಂಭಿಸಿದ್ದಾರೆ. ಅದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಾನು ಕೊತ್ವಾಲ್ ರಾಮಚಂದ್ರ ಶಿಷ್ಯ ಎಂಬುದಕ್ಕೆ ಏನು ದಾಖಲೆ ಇದೆ? ನಾನು 80ರಿಂದ ಸಕ್ರಿಯ ರಾಜಕಾರಣದಲ್ಲಿದ್ದೇನೆ. ವಿದ್ಯಾರ್ಥಿ ಕಾಲದಿಂದಲೂ ರಾಜಕೀಯದಲ್ಲಿ ಇದ್ದೇನೆ. 85ರಲ್ಲಿ ದೇವೇಗೌಡರ ವಿರುದ್ಧ ಸ್ಪರ್ಧಿಸಿದ್ದೆ. ನನಗೆ ನನ್ನದೇ ಆದ ಇತಿಹಾಸವಿದೆ. ವಿದ್ಯಾರ್ಥಿ ನಾಯಕತ್ವದ ಸಂದರ್ಭದಲ್ಲಿ ಹಲವು ನಾಯಕರು ಬಂದು ಹೋಗಿದ್ದಾರೆ’ ಎಂದು ಹೇಳಿದರು.
ನಾವು ವಿಫಲ ಎಂದು ಜನ ಭಾವಿಸಿದರು
ಪರಿಶಿಷ್ಟರಿಗೆ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಪ್ರಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ‘ನಮ್ಮ ಕಾಲದಲ್ಲಿ ಜನಸಂಖ್ಯೆ ಆಧಾರದ ಮೇಲೆ ಅನುದಾನ ಹಂಚಿಕೆ ಮಾಡಲು ಕಾನೂನು ಮಾಡಿದ್ದೇವೆ. ಆದರೆ ಅವರು ಅದನ್ನು ಪಾಲಿಸುತ್ತಿಲ್ಲ. ಅವರು 600 ಭರವಸೆ ಕೊಟ್ಟಿದ್ದರು. ಆ ಬಗ್ಗೆ ನಾವು ನಿತ್ಯ ಪ್ರಶ್ನೆ ಕೇಳುತ್ತಿದ್ದು, ಒಂದಕ್ಕೂ ಮುಖ್ಯಮಂತ್ರಿಗಳು ಉತ್ತರ ನೀಡಲು ಸಾಧ್ಯವಾಗಿಲ್ಲ. ನಾವು ವಿಫಲವಾಗಿದ್ದೇವೆ ಎಂದು ಭಾವಿಸಿ ಜನ ನಮಗೆ ಮತ ಹಾಕಲಿಲ್ಲ. ಆದರೆ ಆಪರೇಷನ್ ಕಮಲದ ಮೂಲಕ ಸರ್ಕಾರ ಮಾಡಿ ಅಧಿಕಾರ ನಡೆಸಿದ್ದೀರಿ. ನಿಮ್ಮ ಸರ್ಕಾರದ ಅಂಕಪಟ್ಟಿ ನೀವು ನೀಡಿ’ ಎಂದು ತಿಳಿಸಿದರು.
ಇದನ್ನೂ ಓದಿ | ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸಲು ಹೆಣಗಾಡುತ್ತಿದ್ದಾರೆ ಎಂದ ಪರಮೇಶ್ವರ್ ಹೇಳಿಕೆ: ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ