ಚಾಮರಾಜನಗರ: ಟಿಪ್ಪುವನ್ನು ಯಾರೋ ಗೌಡ ಕೊಚ್ಚಿಹಾಕಿ ಕೊಲೆ ಮಾಡಿಬಿಟ್ಟನಂತೆ. ಅದೇ ರೀತಿ ರಾಜ್ಯದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕೊಲೆ ಮಾಡಿ ಎಂದು ಯಾವನೋ ಮಂತ್ರಿ ಹೇಳುತ್ತಾನೆ. ಆತನನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಿ ಎಂದು ನಾನು ಹೇಳಲ್ಲ, ಈ ನೆಲದ ಕಾನೂನು ಪಾಲಿಸಬೇಕು. ಆತ ಎಲ್ಲಿ ಹೇಳಿಕೆ ನೀಡಿದ್ದಾನೋ ಅಲ್ಲಿನ ಪೊಲೀಸ್ ಠಾಣೆಯಲ್ಲಿ ಇವತ್ತೇ ಎಫ್.ಐ.ಆರ್ ಹಾಕಿ ಬಂಧಿಸಬೇಕು ಎಂದು ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ. ಅಲ್ಲದೆ, ಏಕವಚನದಲ್ಲಿಯೇ ದಾಳಿ ನಡೆಸಿದ್ದಾರೆ.
ಜಿಲ್ಲೆಯ ಹನೂರು ಕ್ಷೇತ್ರದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ (Prajadwani Yatra) ಮಾತನಾಡಿದ ಅವರು, ಸಿದ್ದರಾಮಯ್ಯ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ. ಅವರು ರಾಜ್ಯಕ್ಕೆ ದೊಡ್ಡ ಆಸ್ತಿ. ಅಧಿಕಾರದ ಮದದಲ್ಲಿ ಒಬ್ಬ ಉನ್ನತ ಶಿಕ್ಷಣ ಸಚಿವ ಕೊಚ್ಚಿ ಕೊಲೆ ಮಾಡಿ ಎಂದು ಹೇಳುತ್ತಿದ್ದಾನೆ. ಆತನ ವಿರುದ್ಧ ಕ್ರಮ ಕೈಗೊಳ್ಳದೆ ಸರ್ಕಾರ, ಗೃಹ ಸಚಿವ ಹಾಗೂ ಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ. ಕ್ಷಮಾಪಣೆ ಕೇಳಿದರೆ ಸಾಕಾ? ಇದು ಆಡಳಿತ ನಡೆಸುತ್ತಿರುವವರಿಗೆ ಕಪ್ಪು ಚುಕ್ಕೆಯಾಗಿದೆ ಎಂದು ಕಿಡಿಕಾರಿದರು.
ಗುತ್ತಿಗೆದಾರ ಸಂತೋಷ್ ಪಾಟೀಲ್‌ನಿಂದ 40 ಪರ್ಸೆಂಟ್ ಕಮಿಷನ್ ಕೇಳಿದ್ದಕ್ಕೆ ಕೆ.ಎಸ್. ಈಶ್ವರಪ್ಪ ರಾಜಿನಾಮೆ ಕೊಟ್ಟರು. ಕಮಿಷನ್ ಕೊಡಲು ಸಾಧ್ಯವಾಗದೆ ಸಂತೋಷ್ ಆತ್ಮಹತ್ಯೆ ಮಾಡಿಕೊಂಡ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ 40 ಪರ್ಸೆಂಟ್ ಕೊಡದೆ ಬಿಲ್ ಕ್ಲಿಯರ್ ಆಗುತ್ತಿಲ್ಲ ಎಂದು ಹೇಳಿದ್ದಾರೆ. ಸ್ವಾಮೀಜಿಯೊಬ್ಬರು ನಮ್ಮ ದುಡ್ಡಿಗೆ ನಾವೇ 30 ಪರ್ಸೆಂಟ್ ಕಮಿಷನ್ ಕೊಡಬೇಕೆ ಎಂದಿದ್ದರು. ಎಚ್.ವಿಶ್ವನಾಥ್ ಶೇ.20 ಕಮಿಷನ್ ಆರೋಪ ಮಾಡಿದ್ದರು. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ 23 ಸಾವಿರ ಕೋಟಿ ಅವ್ಯವಹಾರ ನಡೆದಿದೆ ಎಂದು ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ ಎಂದು ಡಿಕೆಶಿ ತಿಳಿಸಿದರು.
ಇದನ್ನೂ ಓದಿ | Karnataka Election 2023: ಶಿಕಾರಿಪುರ, ವರುಣ ಕ್ಷೇತ್ರದ ಜತೆ ಇನ್ನೊಂದು ಕ್ಷೇತ್ರ ಹುಡುಕುತ್ತಿದ್ದೇನೆ: ವಿಜಯೇಂದ್ರ
ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತದೆ. ಇದೆಲ್ಲವನ್ನೂ ತನಿಖೆ ಮಾಡಿಸುತ್ತೇವೆ. ಬಿಜೆಪಿಯ ಪಾಪದ ಪತ್ರ, ಪುರಾಣವನ್ನು ಜನರ ಮುಂದೆ ಇಡುತ್ತಿದ್ದೇವೆ. ಯಾವ ಕಚೇರಿಗೆ ಹೋಗಿ ಕಾಸು ಕಾಸು, ಲಂಚ ಲಂಚ ಎನ್ನುತ್ತಿದ್ದಾರೆ ಎಂದು ಆರೋಪಿಸಿದರು.
ಹನೂರು ಕ್ಷೇತ್ರದ ಶಾಸಕ ಆರ್.ನರೇಂದ್ರ ಮಾತನಾಡಿ, ಬಿಜೆಪಿ ದುರಾಡಳಿತದ ಬಗ್ಗೆ ಎಚ್ಚರಿಕೆ ಕೊಡುವ ಉದ್ದೇಶದಿಂದ ಪ್ರಜಾಧ್ವನಿ ಯಾತ್ರೆ ನಡೆಯುತ್ತಿದೆ. ಕ್ಷೇತ್ರಕ್ಕೆ ಕಳೆದ ಮೂರೂವರೆ ವರ್ಷದಿಂದ ಬಿಜೆಪಿ ಏನೂ ಕೊಡುಗೆ ಕೊಟ್ಟಿಲ್ಲ. ಸಿಎಂ ಬೊಮ್ಮಾಯಿ ಬಂದ ವೇಳೆ ಬಲವಂತವಾಗಿ ಜನರನ್ನು ಸೇರಿಸಿದ್ದರು. ಆದರೆ ಇಂದು ಶಾಸಕ, ಡಿಕೆಶಿ ಬೇಕು ಎಂದು ಸಾವಿರಾರು ಜನ ಬಂದಿದ್ದಾರೆ ಎಂದು ಹೇಳಿದರು.
ಡಿಕೆಶಿ ಜಲ ಸಂಪನ್ಮೂಲ ಸಚಿವರಿದ್ದಾಗ ನೀರಾವರಿಗೆ 132 ಕೋಟಿ ರೂಪಾಯಿ ಕೊಟ್ಟಿದ್ದರು. ಅದರಿಂದ 15 ಸಾವಿರ ಎಕರೆಗೆ ನೀರಾವರಿ ಸೌಲಭ್ಯ ಸಿಕ್ಕಿದೆ. ಸಿದ್ದರಾಮಯ್ಯ ಕಾಲದಲ್ಲಿ ಹನೂರು ತಾಲೂಕು ಆದ ನಂತರ ಜಮೀನಿಗೆ ಬಂಗಾರದ ಬೆಲೆ ಬಂದಿದೆ. ಆದರೆ, ಬಿಜೆಪಿಯವರು ಹನೂರು ಕ್ಷೇತ್ರಕ್ಕೆ ಏನೂ ಕೊಡದೆ ಮತಯಾಚನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ | Assembly Session: ಕಪ್ಪು ಪಟ್ಟಿಗೆ ಸೇರಿದ ಸಂಸ್ಥೆಯಿಂದ ಅಂಗನವಾಡಿಗೆ ಆಹಾರ ಪೂರೈಕೆ: ಟಿ.ಎ. ಶರವಣ ಆರೋಪದಿಂದ ಸದನದಲ್ಲಿ ಜಟಾಪಟಿ
ಗಿರಿಜನರು, ಸೋಲಿಗರಿಗೆ 32 ಸಾವಿರ ಗ್ಯಾಸ್ ಕನೆಕ್ಷನ್ ಕೊಡಿಸಿದ್ದೆ. ಆದರೆ, ಯಾರೂ ಅವುಗಳನ್ನು ಉಪಯೋಗಿಸಿಕೊಳ್ಳುತ್ತಿಲ್ಲ. ಏಕೆಂದರೆ ಗ್ಯಾಸ್ ಬೆಲೆ 1200 ರೂ.ಗಳಿಗೆ ಏರಿಕೆಯಾಗಿದ್ದು, ಯಾರೂ ಗ್ಯಾಸ್ ಖರೀದಿ ಮಾಡಲಾಗುತ್ತಿಲ್ಲ. ಸೌಧೆ ಬಳಸಿ ಅಡುಗೆ ಮಾಡುತ್ತೇವೆ ಎನ್ನುತ್ತಾರೆ. ರೈತರಿಗೆ ವಿದ್ಯುಚ್ಛಕ್ತಿ ಕೊಡದ ಸರ್ಕಾರ ನಿಮಗೆ ಬೇಕಾ? ಪಡಿತರ ವಿತರಣೆ ಮಾಡದಿದ್ದರೆ ಕೊರೊನಾ ವೇಳೆ ಜನರು ಹಸಿವಿನಿಂದ ಸಾಯಬೇಕಿತ್ತು. ಇಂತಹ ಪಡಿತರ ಕೊಡುವ ವ್ಯವಸ್ಥೆ ಮಾಡಿದ್ದು ಸಿದ್ದರಾಮಯ್ಯ ಸರ್ಕಾರ ಎಂದು ತಿಳಿಸಿದರು.
ಹನೂರು ಕ್ಷೇತ್ರ ಖರೀದಿಗಿದೆಯಾ ಏಂದು ಬೋರ್ಡ್ ಹಾಕಿದ್ದೀವಾ? ದುಡ್ಡಿನಿಂದ ಖರೀದಿ ಮಾಡುತ್ತೇವೆ ಎಂದು ಬಂದಿದ್ದಾರೆ. ನಾವು ಮಾರಾಟದ ವಸ್ತುಗಳಾ? ನಾವೂ ದುಡ್ಡು ಕೊಟ್ಟು ಜನ ಸೇರಿಸಿಲ್ಲ. ನೀವು ಕಾಸು ಕೊಡದೆ 500 ಜನ ಸೇರಿಸಿ ಸಾಕು. ಆಗ ನಿಮ್ಮ ಜನಪ್ರಿಯತೆ ಗೊತ್ತಾಗುತ್ತೆ. ಬೆಂಗಳೂರಿನಿಂದ ಹನೂರಿಗೆ ವಲಸೆ ಬಂದಿರುವ ಮುಖಂಡರಿಗೆ ಸವಾಲು ಹಾಕಿದರು.