Site icon Vistara News

ಸೂರ್ಯ ಹುಟ್ಟುತ್ತಾನೆ, ಹಾಗೆಯೇ ಮುಳುಗುತ್ತಾನೆ: ಡಿ.ಕೆ. ಶಿವಕುಮಾರ್‌ ಮಾತು

DK Shivakumar delhi

ನವದೆಹಲಿ: ನಮ್ಮ ನಾಯಕರಾದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಅವರಿಗೆ ಧೈರ್ಯ ತುಂಬಲು ನಾನು ಹಾಗೂ ಕಾಂಗ್ರೆಸ್‌ ಮುಖಂಡರು ದೆಹಲಿಗೆ ಬಂದಿದ್ದೇವೆ. ಎಐಸಿಸಿ ಕಚೇರಿಗೆ ಯಾರೂ ಹೋಗಬಾರದು ಎಂದು ಪೊಲೀಸರನ್ನು ಬಳಸಿಕೊಂಡು ನಿರ್ಬಂಧ ವಿಧಿಸಿರುವುದು ಹಾಗೂ ರಾಜಕೀಯ ಪ್ರೇರಿತ ಕೇಸ್‌ಗಳನ್ನು ಹಾಕಿ ವಿಚಾರಣೆ ನಡೆಸುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ಆಗಮಿಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.‌

ನವದೆಹಲಿಯ ಎಐಸಿಸಿ ಕಚೇರಿಯೆದುರು ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್‌, ನಮ್ಮ ಧ್ವನಿಯನ್ನು ಕುಗ್ಗಿಸುವ ಬಿಜೆಪಿಯವರ ಪ್ರಯತ್ನ ಸಫಲವಾಗುವುದಿಲ್ಲ. ಸೂರ್ಯ ಹುಟ್ಟುತ್ತಾನೆ, ಹಾಗೆಯೇ ಮುಳುಗುತ್ತಾನೆ. ಯಾರೂ ಶಾಶ್ವತವಾಗಿ ಅಧಿಕಾರದಲ್ಲಿ ಇರುವುದಿಲ್ಲ. ಇದನ್ನು ಬಿಜೆಪಿಯವರು ಅರ್ಥಮಾಡಿಕೊಳ್ಳಬೇಕು. ಏನೇ ಆಗಲಿ ನಮ್ಮ ನಾಯಕರ ಜತೆ ನಾವು ಇದ್ದೇವೆ ಎಂದು ಹೇಳಿದರು.

ಶಾಸಕರು, ಸಂಸದರು, ಎಂಎಲ್‌ಸಿಗಳು ಹಾಗೂ ಮುಖಂಡರನ್ನು ದೆಹಲಿಗೆ ಕರೆದಿರುವ ಉದ್ದೇಶವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್‌, ರಾಜ್ಯದ ಸಂಸದ ಡಿ.ಕೆ. ಸುರೇಶ್‌ ಹಾಗೂ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ ಮೇಲೆ ಯಾವ ರೀತಿ ದೌರ್ಜನ್ಯ ನಡೆಸಿದ್ದಾರೆ ಎಂಬುವುದನ್ನು ನೋಡಿದ್ದೇವೆ. ರಾಹುಲ್‌ ಗಾಂಧಿ ಅವರನ್ನು ಇ.ಡಿ. 40 ಗಂಟೆ ವಿಚಾರಣೆ ನಡೆಸಬೇಕಾದ ಅವಶ್ಯಕತೆ ಏನಿದೆ?. ನಮ್ಮ ನಾಯಕರು ಎಲ್ಲವನ್ನೂ ಎದರಿಸಲು ಬದ್ಧರಾಗಿದ್ದಾರೆ. ಜೂನ್ 23ರಂದು ಸೋನಿಯಾ ಗಾಂಧಿ ಅವರನ್ನು ವಿಚಾರಣೆಗೆ ಕರೆದಿದ್ದಾರೆ. ನಿನ್ನೆ ರಾತ್ರಿ ಅವರು ಆಸ್ಪತ್ರೆಯಿಂದ ಮನೆಗೆ ಬಂದಿದ್ದಾರೆ. ನಮ್ಮ ನಾಯಕರು ವಿಚಾರಣೆಗೆ ಯಾವುದೇ ರೀತಿಯಲ್ಲಿ ಹೆದರುವ ಪ್ರಶ್ನೆಯೇ ಇಲ್ಲ. ಆದರೆ ಈಗಿನ ಬೆಳವಣಿಗೆ ನೋಡಿದರೆ ಸಂವಿಧಾನ ಹಾಗೂ ಕಾನೂನಿಗೆ ಗೌರವ ನೀಡುವ ಕೆಲಸವಾಗುತ್ತಿಲ್ಲ, ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಇ.ಡಿ ವಿಚಾರಣೆಗೆ ವಿರೋಧ ಏಕೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಪ್ರಕರಣದಲ್ಲಿ ಸುದೀರ್ಘ ವಿಚಾರಣೆ ನಡೆಸುವ ಅಗತ್ಯವಿಲ್ಲ. ಇದರ ಬಗ್ಗೆ ನಮಗೆ ಎಲ್ಲ ಗೊತ್ತು. ನ್ಯಾಷನಲ್‌ ಹೆರಾಲ್ಡ್‌ ಕಾಂಗ್ರೆಸ್‌ ಅಡಿಯಲ್ಲೇ ಇದೆ. ಷೇರುಗಳು ಇದ್ದರೂ ಪತ್ರಿಕೆ ತಮ್ಮದು ಎಂದು ನಮ್ಮ ನಾಯಕರು ಹೇಳಿಕೊಂಡಿಲ್ಲ, ಯಾವುದೇ ಹಣ ದುರುಪಯೋಗವಾಗಿಲ್ಲ. ಈ ಹಿಂದೆ ಮುಚ್ಚಲಾಗಿದ್ದ ಪ್ರಕರಣವನ್ನು ಮತ್ತೆ ತೆರೆದಿರುವುದೇ ತಪ್ಪು. ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಏನಿದೆ? ಇದು ಇನ್‌ಕಮ್‌ ಟ್ಯಾಕ್ಸ್‌ ವಿಷಯ. ಕೇವಲ ಕಾಂಗ್ರೆಸ್‌ ಅವರನ್ನು ಯಾಕೆ ಟಾರ್ಗೆಟ್‌ ಮಾಡುತ್ತಿದ್ದೀರಾ? ಇದಕ್ಕೆಲ್ಲ ರಾಹುಲ್‌ ಗಾಂಧಿ ಹೆದರುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಬುಧವಾರ ಸಿದ್ದರಾಮಯ್ಯ ಭಾಗಿ

ರಾಹುಲ್‌ ಗಾಂಧಿಯವರ ವಿಚಾರಣೆಯನ್ನು ವಿರೋಧಿಸಿ ನವದೆಹಲಿಯ ಎಐಸಿಸಿ ಕಚೇರಿ ಎದುರು ನಡೆಯುತ್ತಿರುವ ಸರಣಿ ಪ್ರತಿಭಟನೆಯಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬುಧವಾರ ಭಾಗವಹಿಸಲಿದ್ದಾರೆ. ಮಂಗಳವಾರ ಸಂಜೆ ೬.೫೦ಕ್ಕೆ ಬೆಂಗಳೂರಿನಿಂದ ಹೊರಡಲಿದ್ದಾರೆ.

ಇದನ್ನೂ ಓದಿ | ಇ ಡಿ ವಿಚಾರಣೆ ವೇಳೆ ಮೋತಿಲಾಲ್‌ ವೋರಾ ಹೆಸರು ಹೇಳಿದ ರಾಹುಲ್‌ ಗಾಂಧಿ; ಆಧಾರ ರಹಿತವೆಂದ ಪುತ್ರ

Exit mobile version