ಬೆಂಗಳೂರು: ಬಿಜೆಪಿ ನಾಯಕರು ಹಾಗೂ ಅವರ ಆಪ್ತರ ಮನೆಗಳಲ್ಲಿ ಅಪಾರ ಹಣ ಸಿಕ್ಕಿದ್ದರೂ ಜಾರಿ ನಿರ್ದೇಶನಾಲಯ (ಇ.ಡಿ) ಏಕೆ ನಡೆಸುವುದಿಲ್ಲ? ಕಾಂಗ್ರೆಸ್ ನಾಯಕರಿಗೆ ಮಾತ್ರ ತನಿಖೆ ಹೆಸರಿನಲ್ಲಿ ಕಿರುಕುಳ ನೀಡುವುದು ಏಕೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ಇ.ಡಿ ವಿಚಾರಣೆ ನಡೆಸುತ್ತಿರುವ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರ ಮನೆಗಳಲ್ಲಿ ದೊಡ್ಡ ಪ್ರಮಾಣದ ಹಣ ಸಿಕ್ಕರೂ ಇ.ಡಿ ತನಿಖೆ ನಡೆಸದಿರಲು ಕಾರಣವಾದರೂ ಏನು? ಎಂದು ಕಿಡಿಕಾರಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಯಾವ ಅಕ್ರಮವೂ ನಡೆದಿಲ್ಲ, ಜವಾಹರಲಾಲ್ ನೆಹರೂ ಆರಂಭಿಸಿದ್ದ ಪತ್ರಿಕೆಯನ್ನು ಉಳಿಸಿಕೊಂಡು ಬರಲಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಟ್ರಸ್ಟಿಗಳಾದ ತಕ್ಷಣ ಪತ್ರಿಕೆಯ ಆಸ್ತಿಯನ್ನು ವರ್ಗಾವಣೆ ಮಾಡಿಕೊಳ್ಳುತ್ತಾರಾ? ಎಂದು ಪ್ರಶ್ನಿಸಿದರು.
ಪ್ರತಿಭಟನೆ ಮಾಡುವುದು ನಮ್ಮ ಹಕ್ಕು. ನನ್ನನ್ನು ಇ.ಡಿ.ಗೆ ಕರೆದುಕೊಂಡು ಹೋಗಿದ್ದಾಗ ಕಾರ್ಯಕರ್ತರು ನ್ಯಾಷನಲ್ ಕಾಲೇಜಿನಿಂದ ಫ್ರೀಡಂ ಪಾರ್ಕ್‌ವರೆಗೂ ರ‍್ಯಾಲಿ ಮಾಡಿದರು. ಯಾರಾದರೂ ಗಲಾಟೆ ಮಾಡಿದ್ದರಾ? ಅವರು ನೋವು, ದುಃಖ ದುಮ್ಮಾನ ಹೇಳಿಕೊಂಡರು ಎಂದ ಶಿವಕುಮಾರ್, ದೆಹಲಿ ಇ.ಡಿ. ಕಚೇರಿ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಲು ಹೋಗಿದ್ದರು. ಅವರನ್ನು ಏಕೆ ಪೊಲೀಸರು ವಶಕ್ಕೆ ಪಡೆದರು. ಪ್ರತಿಭಟನೆಗೆ ಹೋಗದಂತೆ ಕಾರ್ಯಕರ್ತರ ವಾಹನಗಳನ್ನು ತಡೆದಿದ್ದಾರೆ. ಬೆಳಗ್ಗೆ ಎಐಸಿಸಿ ಕಚೇರಿಗೆ ಪಕ್ಷದ ನಾಯಕರು ಹೋದರೆ ಬಂಧನ ಮಾಡಿದ್ದಾರೆ ಎಂದು ಕಿಡಿ ಕಾರಿದರು.
ನೋಟಿಸ್ ನೀಡಿದರೆ ಭಯ ಏಕೆ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹತ್ತು ಗಂಟೆ ವಿಚಾರಣೆ ಏಕೆ?
ಚುನಾವಣೆ ಅಫಿಡವಿಟ್‌ನಲ್ಲಿ ಕೊಟ್ಟಿಲ್ಲವೇ? ನಾನೇನು ಮಾಡಬಾರದು ಮಾಡಿಬಿಟ್ಟಿದ್ದೆ? ಹತ್ತು ದಿನ ನನ್ನನ್ನು ವಿಚಾರಣೆ ಮಾಡಬೇಕಾ? ನನಗೆ ಯಾವ ಯಾವ ರೀತಿ ಕಿರುಕುಳ ಕೊಟ್ಟಿದ್ದಾರೆ ಎಂದು ನಾನು ಇನ್ನೂ ಕೆಲ ವಿಚಾರ ಮಾತಾಡಿಲ್ಲ ಎಂದು ಹೇಳಿದರು.
ಅಶ್ವತ್ಥ ನಾರಾಯಣ ಮೋಸ್ಟ್ ಕರಪ್ಟೆಡ್ ಮಿನಿಸ್ಟರ್ ಆಫ್ ಕಂಟ್ರಿ
ಪ್ರತಿಭಟನೆ ಮಾಡಿದವರು ತಿಹಾರ್ ಜೈಲಿಗೆ ಹೋಗುತ್ತಾರೆ ಎಂಬ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರ ಹೇಳಿಕೆಗೆ ಸ್ಪಂದಿಸಿ, ಆತ ದೇಶದ ಮಹಾನ್ ಭ್ರಷ್ಟ ಶಿಕ್ಷಣ ಸಚಿವ, ವಿವಿ ಕುಲಪತಿಗಳ ನೇಮಕಕ್ಕೆ ಹಣ ಪಡೆದಿದ್ದಾರೆ. ಪಿಎಸ್‌ಐ ನೇಮಕಾತಿ ಅಕ್ರಮ ಬೆಳಕಿಗೆ ಬಂದ ಮೇಲೆ ಸುಮ್ಮನಾಗಿದ್ದಾರೆ, ಅಶ್ವತ್ಥ ನಾರಾಯಣ ಮೋಸ್ಟ್ ಕರಪ್ಟೆಡ್ ಮಿನಿಸ್ಟರ್ ಆಫ್ ಕಂಟ್ರಿ ಎಂದು ಕಿಡಿ ಕಾರಿದರು.
ಇದನ್ನೂ ಓದಿ | ಬಿಜೆಪಿ ಸರ್ಕಾರದ ಮೇಲೆ ಗರಂ ಆದ ಸಂಸದ ಡಿ.ಕೆ. ಸುರೇಶ್