Site icon Vistara News

Prajadwani Yatra: ಕಾಂಗ್ರೆಸ್‌ ಸರ್ಕಾರ ಬಂದರೆ 7ನೇ ವೇತನ ಆಯೋಗದ ವರದಿ ಜಾರಿ ಮಾಡುತ್ತೇವೆ: ಡಿ.ಕೆ.ಶಿವಕುಮಾರ್

DK Shivakumar says Will implement 7th Pay Commission report if Congress comes to power

#image_title

ಹಾಸನ: ವೇತನ ಮತ್ತು ಭತ್ಯೆ ಪರಿಷ್ಕರಣೆ ಸೇರಿ 7ನೇ ವೇತನ ಆಯೋಗದ ವರದಿ ಪಡೆದು ಶೀಘ್ರ ಅನುಷ್ಠಾನ ಮಾಡಲು ಒತ್ತಾಯಿಸಿ ಸರ್ಕಾರಿ ನೌಕರರು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ನೌಕರರ ನೋವು, ಸಂಕಷ್ಟಗಳನ್ನು ಅರಿತಿದ್ದು, ಕಾಂಗ್ರೆಸ್‌ ಸರ್ಕಾರ (Prajadwani Yatra) ಅಧಿಕಾರಕ್ಕೆ ಬಂದರೆ 7ನೇ ವೇತನ ಆಯೋಗದ ವರದಿ ಜಾರಿಗೆ ತರುವ ಕೆಲಸ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಭರವಸೆ ನೀಡಿದ್ದಾರೆ.

ಜಿಲ್ಲೆಯ ಆಲೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕ ಭ್ರಷ್ಟಾಚಾರದ ಕೇಂದ್ರ ಸ್ಥಳ, ರಾಜಧಾನಿಯಾಗಿದೆ. ಇಂತಹ ಸರ್ಕಾರವನ್ನು ತೆಗೆಯಲು ಜನರಿಂದ ಮಾತ್ರ ಸಾಧ್ಯ. ಒಂದು ಸ್ವಚ್ಛ ಆಡಳಿತವನ್ನು ಕೊಡಲು ಮುಂದಾಗಿದ್ದು, ಕಾಂಗ್ರೆಸ್‌ ಪಕ್ಷವನ್ನು ಜನರು ಬೆಂಬಲಿಸಬೇಕು ಎಂದು ಕೋರಿದರು.

ಜನರ ನೋವು, ಸಂಕಟ ಕೇಳಲು ಬಂದಿದ್ದೇವೆ. ಸಿದ್ದರಾಮಯ್ಯ ಉತ್ತರ ಕರ್ನಾಟಕದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ನಾನು ಹಳೇ ಮೈಸೂರು ಭಾಗದಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಈ ಭಾಗದ ಕಾಡಾನೆ ಹಾವಳಿ ಸಮಸ್ಯೆ ಬಗೆಹರಿದಿಲ್ಲ, ಎತ್ತಿನಹೊಳೆ ಯೋಜನೆಗೆ ಭೂಮಿ ನೀಡಿದವರಿಗೆ ಪರಿಹಾರ ಸಿಕ್ಕಿಲ್ಲ. ಡಬಲ್ ಎಂಜಿನ್ ಸರ್ಕಾರ ಇದೆ, ಆದರೆ ಅಗತ್ಯ ವಸ್ತುಗಳ ಬೆಲೆಗಳೆಲ್ಲ ಗಗನಕ್ಕೆ ಹೋಗಿವೆ. ನಿಮ್ಮ ಆದಾಯ ಡಬಲ್ ಮಾಡುತ್ತೇವೆ ಎಂದು ಹೇಳಿದ್ದರು. ಯಾರಿಗಾದರೂ ಆದಾಯ ಡಬಲ್ ಆಯ್ತಾ ಎಂದು ಕಿಡಿಕಾರಿದರು.

ಇದನ್ನೂ ಓದಿ | Congress Politics: ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆಗೆ ಮುಹೂರ್ತ ನಿಗದಿ; ಆಕಾಂಕ್ಷಿಗಳಲ್ಲಿ ಢವಢವ

ಸ್ವಿಸ್ ಬ್ಯಾಂಕ್‌ನಿಂದ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇವೆ ಎಂದಿದ್ದರು. ಯಾರ ಖಾತೆಗಾದರೂ ದುಡ್ಡು ಬಿದ್ದಿದೆಯಾ ಎಂದು ಪ್ರಶ್ನಿಸಿದ ಅವರು, ಡಬಲ್ ಎಂಜಿನ್ ಸರ್ಕಾರ ಇದ್ದರೂ ಜನರಿಗೆ ಒಳ್ಳೆಯದಾಗಿಲ್ಲ. ಇತ್ತೀಚೆಗೆ ಪ್ರಧಾನಮಂತ್ರಿ, ಗೃಹ ಸಚಿವರು ರಾಜ್ಯಕ್ಕೆ ಮೂರ್ನಾಲ್ಕು ಬಾರಿ ಬಂದಿದ್ದಾರೆ. ಕೋವಿಡ್, ಪ್ರವಾಹ ಬಂದಾಗ ಯಾರೂ ಬಂದು ಜನರ ಕಷ್ಟ-ಸುಖ ಕೇಳಲಿಲ್ಲ. ಕೊಡಗಿನಲ್ಲಿ ಮನೆಗಳು ಬಿದ್ದು ನೂರಾರು ಮಂದಿ ಸಂಕಷ್ಟ ಅನುಭವಿಸಿದರೂ ಯಾರೂ ನೆರವಾಗಲಿಲ್ಲ. ಎಲೆಕ್ಷನ್ ಟೈಂ ಆಗಿದ್ದಕ್ಕೆ ಪಾಪ ಬರುತ್ತಿದ್ದಾರೆ ಎಂದು ಟೀಕಿಸಿದರು.

ಸೋಮವಾರ ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದ್ದಾರೆ. ಆದರೆ, ಈ ಮೊದಲು ಯಡಿಯೂರಪ್ಪ ಅವರು ಯಾಕೆ ಕಣ್ಣೀರು ಹಾಕಿದರು ಎಂದ ಅವರು, ಪೊಲೀಸ್ ಸಬ್‌‌ ಇನ್ಸ್‌ಪೆಕ್ಟರ್ ಸೇರಿ ಯಾವುದೇ ಹುದ್ದೆ ನೇಮಕಾತಿಗೆ ಲಂಚ ಪಡೆಯುತ್ತಿದ್ದಾರೆ. ಪಿಎಸ್‌ಐ ಹಗರಣದಲ್ಲಿ ಎಡಿಜಿಪಿ ಸೇರಿ ಸುಮಾರು ನೂರು ಮಂದಿ ಜೈಲಿಗೆ ಹೋಗಿದ್ದಾರೆ. ಭ್ರಷ್ಟಾಚಾರ ಸಿಎಂ ಕಚೇರಿ, ಹೋಂ ಮಿನಿಸ್ಟರ್ ಕಚೇರಿಯಿಂದ ಹಿಡಿದು ಎಲ್ಲೆಡೆ ಇದೆ. ವಿಧಾನಸೌಧದಲ್ಲಿ ಲಂಚ ಪಡೆದವರು, ಸಚಿವರು ಇನ್ನೂ ಜೈಲಿಗೆ ಹೋಗಿಲ್ಲ. ಮುಂದಿನ‌ ದಿನಗಳಲ್ಲಿ ಅದರ ಬಗ್ಗೆ ವಿಚಾರಣೆ ನಡೆದು ಜೈಲಿಗೆ ಹೋಗಲಿದ್ದಾರೆ ಎಂದು ಹೇಳಿದರು.

ಸಂಸದ ಪ್ರತಾಪ್‌ ಸಿಂಹ ವಿಸಿ ನೇಮಕಕ್ಕೆ 40 ಲಕ್ಷ ರೂಪಾಯಿ ಲಂಚ ಕೊಡಬೇಕು ಎಂದಿದ್ದಾರೆ. ಇದರ ಬಗ್ಗೆ ಮುಖ್ಯಮಂತ್ರಿಗಳು, ಪ್ರಧಾನಮಂತ್ರಿ ಮಾತನಾಡುತ್ತಿಲ್ಲ ಏಕೆ? ಮಠಗಳ ಸ್ವಾಮಿಗಳು ಅನುದಾನದಲ್ಲಿ 30 ಪರ್ಸೆಂಟ್ ಲಂಚ ಕೊಡಬೇಕು ಎಂದಿದ್ದಾರೆ. ಎಂಎಲ್‌ಸಿ ಎಚ್.ವಿಶ್ವನಾಥ್ ಬಿಜೆಪಿ ಸರ್ಕಾರದಲ್ಲಿ ಲಂಚ ಪಡೆಯುತ್ತಾರೆ ಎಂದು ಹೇಳಿರುವುದಾಗಿ ಆರೋಪಿಸಿದರು.

ಸಮ್ಮಿಶ್ರ ಸರ್ಕಾರ ಬರುವ ಸ್ಥಿತಿ ತರಬೇಡಿ

ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ಬಿಜೆಪಿ ಕೇವಲ ಜಾಹೀರಾತಿಗೆ ಸೀಮಿತವಾಗಿದೆ. ಬೆಳಗ್ಗೆ ಎದ್ದರೆ ಪುಟಗಟ್ಟಲೇ ಜಾಹೀರಾತು ನೀಡುತ್ತಾರೆ. ಅದರಲ್ಲಿ ಅವರು ಮಾಡಿರುವ ಕಾರ್ಯಕ್ರಮಗಳೇ ಇರಲ್ಲ. ಜನತಾ ದಳದವರು ಸಮಯ ಬಂದಾಗ ಯಾರ ಜತೆ ಬೇಕಾದರೂ ಸರ್ಕಾರ ರಚಿಸುತ್ತಾರೆ. ಅವರು 125 ಸ್ಥಾನದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎನ್ನುತ್ತಾರೆ, ಬಂದರೆ ಸಂತೋಷ. ಆದರೆ, ಸಮ್ಮಿಶ್ರ ಸರ್ಕಾರ ಬರುವ ಸ್ಥಿತಿ ತರುವುದು ಬೇಡ ಎಂದು ಜನರಿಗೆ ಮನವಿ ಮಾಡಿದರು.

ಇದನ್ನೂ ಓದಿ | Beneficiary Meet: ಪ್ರತಿ ಜಿಲ್ಲೆಯಲ್ಲೂ ಮತದಾರರನ್ನು ಸೆಳೆಯಲು ಮುಂದಾದ ಬಿಜೆಪಿ: ಮಾರ್ಚ್‌ 4ರಿಂದ ಫಲಾನುಭವಿಗಳ ಸಮಾವೇಶ

ಮಾಜಿ ಸಚಿವ ಯು.ಟಿ.ಖಾದರ್ ಮಾತನಾಡಿ, ಜನರು ಈ ಚುನಾವಣೆಯಲ್ಲಿ ಆತ್ಮಾವಲೋಕನ‌ ಮಾಡಿಕೊಂಡು ಮತದಾನ ಮಾಡಬೇಕು. ಈ‌ ಚುನಾವಣೆ ನಿಮಗೆ, ನಿಮ್ಮ‌ ಮಕ್ಕಳಿಗೆ ಒಳ್ಳೆಯ, ನೆಮ್ಮದಿಯ ಬದುಕು ತಂದುಕೊಡುವ ಚುನಾವಣೆ. ದೇಶದಲ್ಲಿ ಹಲವು ಗಂಡಾಂತರಗಳು ನಡೆಯುತ್ತಿವೆ. ಬಿ.ಆರ್.ಅಂಬೇಡ್ಕರ್ ರಚನೆಯ ಸಂವಿಧಾನಕ್ಕೆ ವಿರುದ್ಧವಾಗಿ ಕೆಲವರು ನಡೆಯುತ್ತಿದ್ದಾರೆ. ಈ ರಾಜ್ಯದಲ್ಲಿ ಸ್ಥಿರವಾದ ಸರ್ಕಾರ ತರಲು ಜನರು ಕಾಂಗ್ರೆಸ್‌ಗೆ ಬೆಂಬಲಿಸಬೇಕು ಎಂದು ಕೋರಿದ್ದಾರೆ.

ಜನತಾದಳವರು ಅಲ್ಪಸಂಖ್ಯಾತರ ಪರ ಇದ್ದೇವೆ ಎನ್ನುತ್ತಾರೆ. ಎಲ್ಲಿ ಜನತಾದಳ ಪಕ್ಷ ಬಲವಾಗಿದೆ? ಅಲ್ಲಿ ಒಂದೇ ಒಂದು ಸೀಟ್ ಕೂಡ ಮುಸ್ಲಿಂರಿಗೆ ಕೊಟ್ಟಿಲ್ಲ. ಹಾಸನ, ಮಂಡ್ಯ, ತುಮಕೂರಿನಲ್ಲಿ ಮುಸ್ಲಿಂರಿಗೆ ಏಕೆ ಸೀಟ್ ಕೊಟ್ಟು ಗೆಲ್ಲಿಸಲಿಲ್ಲ ಎಂದು ಪ್ರಶ್ನಿಸಿದ ಅವರು, ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತರಬೇಕು ಎಂದು ಹೇಳಿದರು.

Exit mobile version