ನವ ದೆಹಲಿ: ನವ ದೆಹಲಿಯ ಸಫ್ದರ್ ಜಂಗ್ ಫ್ಲಾಟ್‌ನಲ್ಲಿ ಹಣ ಸಿಕ್ಕ ಪ್ರಕರಣ ಹಾಗೂ ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಪಿಸಿಸಿ ಅಧ್ಯಕ್ಷ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ (DK Shivakumar) ಅವರಿಗೆ ಬುಧವಾರ ಒಂದೇ ದಿನ ವಿಚಾರಣೆ ಇದ್ದು, ಫ್ಲಾಟ್‌ನಲ್ಲಿ ಹಣ ಸಿಕ್ಕ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಮುಂದೂಡಿದೆ.
ರೋಜ್ ಅವೆನ್ಯೂ ಕೋರ್ಟ್‌ನಲ್ಲಿ ಸಫ್ದರ್ ಜಂಗ್ ಫ್ಲಾಟ್‌ನಲ್ಲಿ ಹಣ ಸಿಕ್ಕ ಪ್ರಕರಣದ ವಿಚಾರಣೆಯು ಬುಧವಾರ ನಡೆದಿದ್ದು, ಇದರ ವಿಚಾರಣೆಯನ್ನು ಜನವರಿ 18ಕ್ಕೆ ಮುಂದೂಡಿದೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ.
ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣ
ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣವನ್ನು ಜಾರಿ ನಿರ್ದೇಶನಾಲಯವು ದಾಖಲಿಸಿತ್ತು. ಡಿ.ಕೆ. ಶಿವಕುಮಾರ್ ಅವರು, ಇ.ಡಿ. ಕ್ರಮವನ್ನು ದೆಹಲಿಯ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ನ್ಯಾಯಮೂರ್ತಿ ಉದಯ್ ಗುಪ್ತ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ. ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಮಾಡಲಾಗಿದೆ ಎಂದು ಸಿಬಿಐ ಕೂಡಾ ಪ್ರಕರಣವನ್ನು ದಾಖಲಿಸಿತ್ತು. ಇದನ್ನು ಡಿ.ಕೆ. ಶಿವಕುಮಾರ್ ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ವಿದೇಶ ಪ್ರವಾಸಕ್ಕೆ ಅನುಮತಿ ಕೋರಿದ ಡಿಕೆಶಿ
ಇದೇ ವೇಳೆ ತಾವು ವಿದೇಶಕ್ಕೆ ತೆರಳಬೇಕಿದ್ದು, ಇದಕ್ಕಾಗಿ ಅನುಮತಿ ನೀಡಬೇಕು ಎಂದು ನ್ಯಾಯಾಲಯಕ್ಕೆ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ. ಕಾರ್ಯನಿಮಿತ್ತ ದುಬೈಗೆ ತೆರಳಬೇಕಿರುವುದರಿಂದ ಕೋರ್ಟ್ ಅನುಮತಿ ನೀಡಬೇಕೆಂದು ಡಿಕೆಶಿ ಪರ ವಕೀಲರು ಕೋರಿದರು. ಇದರ ಅರ್ಜಿ ವಿಚಾರಣೆಯನ್ನು ನವೆಂಬರ್ 26ರಂದು ನಡೆಸುವುದಾಗಿ ಕೋರ್ಟ್ ಹೇಳಿದೆ.
ಇದನ್ನೂ ಓದಿ | ಜನಸಂಕಲ್ಪ ಯಾತ್ರೆ | ಟಿಕೆಟ್ ಆಕಾಂಕ್ಷಿಗಳಿಗೆ ಭಾಷಣದ ಪ್ರಾರಂಭದಲ್ಲೇ ಎಚ್ಚರಿಕೆ ಕೊಟ್ಟ ಸಿಎಂ ಬೊಮ್ಮಾಯಿ