ಕಾರವಾರ: ಎರಡು ದಿನಗಳ ಹಿಂದಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ರಣಹದ್ದು ಬಡಿದು ಅಪಾಯಕಾರಿ ಸನ್ನಿವೇಶ ನಿರ್ಮಾಣವಾಗಿತ್ತು. ಶಿವಕುಮಾರ್ ಅವರು ಅಪಾಯದಿಂದ ಪಾರಾಗಿದ್ದರು. ಇದೀಗ ಎರಡೇ ದಿನದ ಮಧ್ಯಂತರದಲ್ಲಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಸಮೀಪ ಮತ್ತೊಂದು ಅನಾಹುತ ಉಂಟಾಗಿದೆ. ಈ ಬಾರಿ ಅವರಿಗೇನೂ ತೊಂದರೆ ಆಗಿಲ್ಲ. ಬದಲಾಗಿ, ಹೆಲಿಕಾಪ್ಟರ್ ಸುತ್ತಲಿನ ಪ್ರದೇಶದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ.
ಏನಿದು ಘಟನೆ?
ಡಿ.ಕೆ. ಶಿವಕುಮಾರ್ ಅವರು ಗುರುವಾರ ಮಧ್ಯಾಹ್ನ ಚುನಾವಣಾ ಪ್ರಚಾರಕ್ಕಾಗಿ ಉತ್ತರ ಕನ್ನಡಕ್ಕೆ ಆಗಮಿಸಿದ್ದರು. ಕುಮಟಾ-ಅಂಕೋಲ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿರುವ ನಿವೇದಿತ್ ಆಳ್ವ ಅವರ ಪರವಾಗಿ ಅವರು ಪ್ರಚಾರ ನಡೆಸುವವರಿದ್ದರು. ಈ ನಡುವೆ, ಅವರ ಹೆಲಿಕಾಪ್ಟರ್ ಇಳಿದ ಹೊನ್ನಾವರ ರಾಮತೀರ್ಥ ಗುಡ್ಡದಲ್ಲಿ ಬೆಂಕಿ ಅನಾಹುತ ನಡೆಯಿತು
ಹೆಲಿಕಾಪ್ಟರ್ ಸಿಗ್ನಲ್‌ಗಾಗಿ ಹಾಕಿದ್ದ ಸ್ಮೋಕ್ ಕ್ಯಾಂಡಲ್‌ನಿಂದ ಕಿಡಿ ಹಾರಿ ಒಣಗಿದ್ದ ಹುಲ್ಲಿಗೆ ಬೆಂಕಿ ಹಿಡಿಯಿತು. ಹೆಲಿಕಾಪ್ಟರ್ ಲ್ಯಾಂಡ್ ಆಗಿದ್ದ ಸ್ವಲ್ಪ ದೂರದಲ್ಲೇ ಬೆಂಕಿ ಕಾಣಿಸಿಕೊಂಡಿತು. ಕೂಡಲೇ ಸ್ಥಳದಲ್ಲೇ ಇದ್ದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಿಯತ್ರಿಸಿದರು.
ಹೊನ್ನಾವರದ ಸೇಂಟ್ ಥಾಮಸ್ ಶಾಲಾ ಆವರಣದಲ್ಲಿ ನಡೆಯಲಿರುವ ಪ್ರಚಾರ ಸಭೆಗಾಗಿ ಶಿವಕುಮಾರ್ ಮೈಸೂರಿನಿಂದ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದರು.
ಎರಡು ದಿನಗಳ ಹಿಂದೆ ರಣಹದ್ದು ಬಡಿದಿತ್ತು
ಎರಡು ದಿನಗಳ ಹಿಂದೆ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನಿಂದ ಮುಳಬಾಗಿಲಿಗೆ ಹೋಗುತ್ತಿದ್ದ ಹೆಲಿಕಾಪ್ಟರ್‌ಗೆ ಮಾರ್ಗ ಮಧ್ಯೆ ರಣಹದ್ದೊಂದು ಬಡಿದು ವಿಂಡ್ ಶೀಲ್ಡ್ ಒಡೆದೇ ಹೋಗಿತ್ತು. ಪೈಲಟ್ ತಕ್ಷಣವೇ ಸಮಯಪ್ರಜ್ಞೆಯಿಂದ ಕೆಲಸ ನಿರ್ವಹಿಸಿ ಹೆಲಿಕಾಪ್ಟರನ್ನು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಇಳಿಸಿದ್ದರು. ಇದರಿಂದ ಸಂಭಾವ್ಯ ದೊಡ್ಡ ಅವಘಡವೊಂದು ತಪ್ಪಿತ್ತು. ಅದಾದ ಬಳಿಕ ಅವರು ತುಮಕೂರಿನ ನೊಣವಿನಕೆರೆಯ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿ ಪೂಜೆ ಮಾಡಿಸಿದ್ದರು.
ಇದನ್ನೂ ಓದಿ : Karnataka Election : ಕನಕಪುರ ಕೈಬಿಡ್ತಾ ಬಿಜೆಪಿ? ಡಿಕೆಶಿ ಬದಲು ವರುಣದಲ್ಲಿ ಸಿದ್ದುವೇ ಮೇನ್ ಟಾರ್ಗೆಟ್