Site icon Vistara News

DK Shivakumar : ಹೆಲಿಕಾಪ್ಟರ್‌ ದುರಂತದಲ್ಲಿ ಗ್ರೇಟ್‌ ಎಸ್ಕೇಪ್‌ ಬಳಿಕ ಅಜ್ಜಯ್ಯನ ಮೊರೆ ಹೋದ ಡಿಕೆಶಿ

DK Shivakumar the president of KPCC is only depending bajrang dal ban issue

ಬೆಂಗಳೂರು: ಬೆಂಗಳೂರಿನಿಂದ ಮುಳಬಾಗಿಲಿಗೆ ಹೋಗುವ ವೇಳೆ ಹೆಲಿಕಾಪ್ಟರ್‌ಗೆ ರಣಹದ್ದು ಡಿಕ್ಕಿ ಹೊಡೆದು ಸಂಭವಿಸಿದ ದುರಂತದಲ್ಲಿ ಗ್ರೇಟ್‌ ಎಸ್ಕೇಪ್‌ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಅವರು ಬುಧವಾರ ಬೆಳಗ್ಗೆಯೇ ತುಮಕೂರಿನ ಅಜ್ಜಯ್ಯನ ದರ್ಶನಕ್ಕೆ ತೆರಳಿದ್ದಾರೆ. ಶಿವಕುಮಾರ್‌ ಅವರು ಕಳೆದ ಕೆಲವು ವರ್ಷಗಳಿಂದ ತುಮಕೂರಿನ ತುರುವೇಕೆರೆಯ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿ ಅಜ್ಜಯ್ಯನ ದರ್ಶನ ಪಡೆದಿದ್ದಾರೆ.

ಡಿ.ಕೆ. ಶಿವಕುಮಾರ್‌ ಅವರು ಮಂಗಳವಾರ ಜಕ್ಕೂರಿನಿಂದ ಮುಳಬಾಗಿಲಿಗೆ ಹೆಲಿಕಾಪ್ಟರ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ರಣಹದ್ದು ಒಂದು ಹೆಲಿಕಾಪ್ಟರ್‌ನ ವಿಂಡ್‌ ಶೀಲ್ಡ್‌ಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿತು. ವಿಂಡ್‌ ಶೀಲ್ಡ್‌ ಸಂಪೂರ್ಣ ಒಡೆದು ಅಪಾಯದ ಸ್ಥಿತಿ ತಲುಪಿತು. ಕೂಡಲೇ ಎಚ್‌ಎಎಲ್‌ ಹೆಲಿಕಾಪ್ಟರನ್ನು ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ಈ ಮೂಲಕ ಭಾರಿ ಅಪಾಯದಿಂದ ಡಿ.ಕೆ. ಪಾರಾಗಿದ್ದರು.

ಡಿ.ಕೆ. ಶಿವಕುಮಾರ್‌ ಅವರು ಕೆಲವೇ ದಿನಗಳ ಹಿಂದೆ ಧರ್ಮಸ್ಥಳ, ಕಾಳಹಸ್ತಿ, ಶೃಂಗೇರಿ ಸೇರಿದಂತೆ ಹಲವು ಪುಣ್ಯಕ್ಷೇತ್ರಗಳ ದರ್ಶನ ಮಾಡಿ ಬಂದಿದ್ದರು. ಇದರ ಫಲವಾಗಿಯೇ ಅವರು ಅಪಾಯದಿಂದ ಪಾರಾದರು ಎಂದು ಹೇಳಲಾಗಿದೆ. ಈ ನಡುವೆ, ಮಂಗಳವಾರ ಮುಂಜಾನೆ ಬಿಡುಗಡೆ ಮಾಡಿದ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧದ ಪ್ರಸ್ತಾಪ ಮಂಡಿಸಿದ್ದರಿಂದ ವಾಯುಪುತ್ರನ ಶಾಪ ತಟ್ಟಿದೆ ಎಂದು ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಲೇವಡಿ ಮಾಡಿದ್ದರು.

ಇದೆಲ್ಲದರ ನಡುವೆ ಡಿ.ಕೆ. ಶಿವಕುಮಾರ್‌ ಅವರು ತಾವು ಬಹುವಾಗಿ ನಂಬುವ ನೊಣವಿನಕೆರೆ ಅಜ್ಜಯ್ಯನ ದರ್ಶನ ನಡೆಸಿದರು. ಕಾಡು ಸಿದ್ದೇಶ್ವರ ಸ್ವಾಮೀಜಿ ಆತ್ಮವು ಅಜ್ಜಯ್ಯನಲ್ಲಿ ಐಕ್ಯವಾಗಿದೆ ಎಂಬ ಪ್ರತೀತಿಯಿದ್ದು, ಶಿವಕುಮಾರ್‌ ಅವರು ಆಗಾಗ ಇಲ್ಲಿಗೆ ಹೋಗುತ್ತಾರೆ. ನೊಣವಿನಕೆರೆಗೆ ತೆರಳಲು ಆಗದಿದ್ದಾಗ ನಾಗರಭಾವಿಯಲ್ಲಿರುವ ಶಾಖಾಮಠಕ್ಕೆ ತೆರಳಿ ಕುಂಕುಮ ಪ್ರಸಾದ ಪಡೆದು ಹಣೆಗೆ ತಿಲಕ ಇಟ್ಟುಕೊಂಡು ಬರುತ್ತಿದ್ದರು.

ಇದೀಗ ದೊಡ್ಡದೊಂದು ಅಪಾಯದಿಂದ ಪಾರಾಗಿರುವುದರಿಂದ ಶ್ರೀರಕ್ಷೆಯನ್ನು ಪಡೆಯುವುದಕ್ಕಾಗಿ ಅವರು ಅಲ್ಲಿಗೆ ತೆರಳಿದ್ದಾರೆ. ಈ ಹಿಂದೆ ಇ.ಡಿ. ಸಂಕಷ್ಟದಲ್ಲಿ ಸಿಲುಕಿದಾಗಲೂ ಅಲ್ಲಿಗೆ ಅವರು ಭೇಟಿ ನೀಡಿದ್ದರು. ಆಗ ಅಲ್ಲಿನ ಕರಿವೃಷಭ ದೇಶಿಕೇಂದ್ರ ಶಿವಯೋಗೇಶ್ವರ ಸ್ವಾಮೀಜಿ ಮಾತನಾಡಿ, ಶಿವಕುಮಾರ್ ಶ್ರೀ ಮಠದ ಭಕ್ತ, ಇಲ್ಲಿನ ಮಗ, ಅವನಿಗೆ ಶ್ರೀಮಠದ ಪರಿಪೂರ್ಣವಾದ ಆಶೀರ್ವಾದ ಇದೆ. ಕಲ್ಲು ಕಲ್ಲಾಗಿಯೇ ಇರುತ್ತೆ ಹೊರತು ಕಟ್ಟಿಗೆ ಆಗಲ್ಲ ಎಂದಿದ್ದರು. ಅವನು ಆರೋಪ ಮುಕ್ತನಾಗಿ ಹೊರ ಬರುತ್ತಾನೆ ಎಂದಿದ್ದರು.

ಡಿ.ಕೆ. ಶಿವಕುಮಾರ್‌ ಅವರು ತುರುವೇಕೆರೆಯಿಂದ ನಂಜನಗೂಡಿಗೆ ಪ್ರಚಾರಕ್ಕೆ ತೆರಳಿದ್ದಾರೆ.

ಸಿದ್ದರಾಮಯ್ಯ ಪ್ರಚಾರ ರದ್ದು

ಈ ನಡುವೆ ಬಸವನಗುಡಿ ಕ್ಷೇತ್ರದಲ್ಲಿ ಕೈಗೊಳ್ಳಬೇಕಿದ್ದ ಚುನಾವಣಾ ಪ್ರಚಾರವನ್ನು ಸಿದ್ದರಾಮಯ್ಯ ರದ್ದು ಮಾಡಿದ್ದಾರೆ. ಮಳೆಯ ಕಾರಣದಿಂದ ಪ್ರಚಾರ ರದ್ದಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : dk shivakumar : ಹೆಲಿಕಾಪ್ಟರ್‌ ಅಪಘಾತ; ಡಿ ಕೆ ಶಿವಕುಮಾರ್‌ ಸ್ವಲ್ಪದರಲ್ಲಿಯೇ ಪಾರು

Exit mobile version