Site icon Vistara News

Brand Bengaluru: ಬ್ರ್ಯಾಂಡ್‌ ಬೆಂಗಳೂರಿಗಾಗಿ ಡಿಕೆಶಿಗೆ ಹೆಗಲು ಕೊಟ್ಟ ಪುತ್ರಿ ಐಶ್ವರ್ಯ

K Shivakumars daughter Aishwarya DKS Hegde

ಬೆಂಗಳೂರು: ʼಬ್ರ್ಯಾಂಡ್‌ ಬೆಂಗಳೂರುʼ (Brand Bengaluru) ಪರಿಕಲ್ಪನೆಯಡಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ರಾಜಧಾನಿಯ ಸಮಗ್ರ ಅಭಿವೃದ್ಧಿಯ ಕನಸು ಹೊತ್ತಿದ್ದಾರೆ. ಇದಕ್ಕಾಗಿ ಈಗಾಗಲೇ ನಾಗರಿಕರೂ ಸೇರಿದಂತೆ ತಜ್ಞರಿಂದ ಸಲಹೆಗಳನ್ನೂ ಪಡೆದುಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಡಿಕೆಶಿ ಅವರ ಮಗಳು ಕೂಡ ತಮ್ಮದೇ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ವಿದ್ಯಾರ್ಥಿಗಳ ಸಲಹೆ ಪಡೆಯಲು ವೇದಿಕೆ ಕಲ್ಪಿಸಿದ್ದಾರೆ.

ಬ್ರ್ಯಾಂಡ್ ಬೆಂಗಳೂರಿಗಾಗಿ ಸರ್ಕಾರವು, ವಿವಿಧ ಕ್ಷೇತ್ರಗಳ ತಜ್ಞರ ಸಲಹೆ ಪಡೆಯುತ್ತಿದೆ. ಸದ್ಯ ಡಿಸಿಎಂ ಡಿ.ಕೆ.ಶಿವಕುಮಾರ್ ಕನಸಿಗೆ ನೀರೆರೆಯಲು ಸಜ್ಜಾಗಿರೋ ಡಿಕೆಶಿ ಪುತ್ರಿ ಐಶ್ವರ್ಯ ಡಿಕೆಎಸ್‌ ಹೆಗ್ಡೆ ಅವರು ವಿದ್ಯಾರ್ಥಿಗಳ ಸಲಹೆಗಳನ್ನು ಪಡೆಯಲು ಅಂತರ ಶಾಲಾ ಐಡಿಯಾಥಾನ್ 23 ಸ್ಪರ್ಧೆ ಆಯೋಜಿಸಿದ್ದರು. ಸ್ಪರ್ಧೆಯಲ್ಲಿ ಭಾಗಿಯಾದ ವಿವಿಧ ಶಾಲೆಗಳ ಮಕ್ಕಳು ಬ್ರ್ಯಾಂಡ್ ಬೆಂಗಳೂರಿನ ನಿರ್ಮಾಣಕ್ಕೆ ತಮ್ಮ ಆಲೋಚನೆಗಳು, ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಸ್ವಚ್ಛತೆ, ನೀರಿನ ನಿರ್ವಹಣೆ, ಆಂಬ್ಯುಲೆನ್ಸ್ ಸೇವೆ, ಸಾರಿಗೆ ವ್ಯವಸ್ಥೆ, ಹೆಣ್ಣುಮಕ್ಕಳ ಋತುಸ್ರಾವ ಸಮಸ್ಯೆ ಸೇರಿ ಹಲವು ಸಮಸ್ಯೆಗಳ ನಿರ್ವಹಣೆಗೆ ಮಕ್ಕಳು ಸಲಹೆಗಳನ್ನು ನೀಡಿದರು.

ಐಡಿಯಾಥಾನ್ ಯುವ ನಾಯಕತ್ವ ಸಮ್ಮೇಳನ

ಐಡಿಯಾಥಾನ್‌ 23 ಸ್ಪರ್ಧೆಯ (IDEATHON 23) ಅಂತಿಮ ಸುತ್ತು ಆದ ಯುವ ನಾಯಕತ್ವ ಸಮ್ಮೇಳನ ನಗರದಲ್ಲಿ ಶನಿವಾರ (ಡಿ.13) ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇನ್ಫೋಸಿಸ್ ಫೌಂಡೇಶನ್‌ ಅಧ್ಯಕ್ಷೆ ಸುಧಾಮೂರ್ತಿ ಅವರು ,ಮಕ್ಕಳ ಜತೆ ತಾವೂ ಮಕ್ಕಳಾಗಿ ಐಡಿಯಾಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ 7 ಅತ್ಯುತ್ತಮ ಸಲಹೆಗಳನ್ನು ನೀಡಿದ ವಿದ್ಯಾರ್ಥಿಗಳ ತಂಡಗಳಿಗೆ ಬಹುಮಾನ ಕೂಡ ವಿತರಣೆ ಮಾಡಲಾಯಿತು.

ಇದನ್ನೂ ಓದಿ | Raja Marga Column: ವಿವೇಕಾನಂದರ ಮೇಲೆ ಪ್ರಭಾವ ಬೀರಿದ್ದು ಮೂವರು, ನಮಗೆ ಸಾರಿದ್ದು ನೂರಾರು!

ಇನ್ನು ಕಾರ್ಯಕ್ರಮಕ್ಕೆ ಆಗಮಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಐಶ್ವರ್ಯ ಆತ್ಮೀಯತೆಯಿಂದ ಬರಮಾಡಿಕೊಂಡರು. ಮಕ್ಕಳು ನೀಡಿದ ಐಡಿಯಾಗಳನ್ನು ಬ್ರ್ಯಾಂಡ್ ಬೆಂಗಳೂರಿನ ನಿರ್ಮಾಣದಲ್ಲಿ ಸೇರಿಸೋ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಡಿಸಿಎಂ ಭರವಸೆ ನೀಡಿದರು. ಜತೆಗೆ ಮಗಳ ಕಾರ್ಯ ಹಾಗೂ ಮಕ್ಕಳ ಐಡಿಯಾಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೆ ನಟ ರಮೇಶ್ ಅರವಿಂದ್, ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಸರ್ಕಾರದ ಅಪರ ಕಾರ್ಯದರ್ಶಿ ಶಾಲಿನಿ ರಜನೀಶ್ ಸಾಥ್ ನೀಡಿದರು. ಬ್ರ್ಯಾಂಡ್ ಬೆಂಗಳೂರಿನ ನಿರ್ಮಾಣದಲ್ಲಿ ವಿದ್ಯಾರ್ಥಿಗಳು ಏನು ಮಾಡಬಹುದು ಅನ್ನೋದಕ್ಕೆ ಒಂದು ವೇದಿಕೆ ಕಲ್ಪಿಸಿದ್ದೆ, ನಮಗೆ ಓದುವಾಗ ಅವಕಾಶ ಇರಲಿಲ್ಲ, ಈ ಮಕ್ಕಳ ಐಡಿಯಾ ಯಾರಿಗೂ ಕಡಿಮೆ ಇಲ್ಲ ಅಂತಾ ಕಾರ್ಯಕ್ರಮದ ಸಕ್ಸಸ್ ಬಗ್ಗೆ ಐಶ್ವರ್ಯ ಸಂತಸ ವ್ಯಕ್ತಪಡಿಸಿದರು.

ಒಟ್ಟಾರೆ ರಾಜ್ಯ ರಾಜಧಾನಿಯ ಅಭಿವೃದ್ದಿಗೆ ಹೈಟೆಕ್ ಟಚ್ ನೀಡಲು ಹೊರಟಿರೋ ಸರ್ಕಾರಕ್ಕೆ ಬ್ರ್ಯಾಂಡ್ ಬೆಂಗಳೂರು ಐಡಿಯಾಥಾನ್ ಮತ್ತಷ್ಟು ಬಲ ನೀಡಿದೆ. ಕಾರ್ಯಕ್ರಮದಲ್ಲಿ ಯುವನಾಯಕತ್ವದ ನಾಡಿಮಿಡಿತ ವ್ಯಕ್ತವಾಗಿದ್ದು, ಯುವಜನರ ಐಡಿಯಾಗಳು ಬ್ರ್ಯಾಂಡ್ ಬೆಂಗಳೂರಿನ ಹೆಜ್ಜೆಯನ್ನು ಮತ್ತಷ್ಟು ಗಟ್ಟಿಗೊಳಿಸಿವೆ.

ಐಡಿಯಾಥಾನ್ 23 ಪ್ರಶಸ್ತಿ ಗೆದ್ದ ನ್ಯಾಷನಲ್ ಹಿಲ್ ವ್ಯೂ, ಪ್ರೆಸಿಡೆನ್ಸಿ ಶಾಲೆ

ಬನಶಂಕರಿಯ ನ್ಯಾಷನಲ್ ಹಿಲ್ ವ್ಯೂ ಶಾಲೆ ಹಾಗೂ ಕಸ್ತೂರಿ ನಗರದ ಪ್ರೆಸಿಡೆನ್ಸಿ ಶಾಲೆಗಳು ಬ್ರ್ಯಾಂಡ್ ಬೆಂಗಳೂರು ಐಡಿಯಾಥಾನ್ ಸ್ಪರ್ಧೆಯ ವಿಜೇತರಾಗಿ ಹೊರಹೊಮ್ಮಿವೆ.

ಬೆಂಗಳೂರಿನಲ್ಲಿ ಶನಿವಾರ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ (IDEATHON 23) ಪ್ರಶಸ್ತಿ ಮಕ್ಕಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಖ್ಯಾತ ನಟ ರಮೇಶ್ ಅರವಿಂದ್ ಅವರು ಪ್ರಮಾಣ ಪತ್ರ ನೀಡಿದರು. ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಹಾರ್ವಡ್ ವಿಶ್ವವಿದ್ಯಾಲಯದಲ್ಲಿ ನಡೆಯುವ 40 ಗಂಟೆಗಳ ಅನ್ವೇಷಣೆ ಮತ್ತು ವ್ಯಾಪಾರೋದ್ಯಮ ಕುರಿತ ಕಾರ್ಯಕ್ರಮಕ್ಕೆ ಸ್ಕಾಲರ್ ಶಿಪ್ ಅನ್ನು ನೀಡಲಾಗುವುದು.

ಕಳೆದ ವರ್ಷ ನವೆಂಬರ್ 14ರಂದು ಆರಂಭವಾದ ಈ ಸ್ಪರ್ಧೆಯಲ್ಲಿ ಒಟ್ಟು 200 ಶಾಲೆಗಳು ಭಾಗವಹಿಸಿದ್ದು, ಎರಡನೇ ಸುತ್ತಿಗೆ 50 ಶಾಲೆಗಳನ್ನು ಆಯ್ಕೆ ಮಾಡಲಾಗಿದ್ದು, ನಂತರ ಮೂರನೇ ಸುತ್ತಿನಲ್ಲಿ 25 ಶಾಲೆಗಳನ್ನು ಆಯ್ಕೆ ಮಾಡಲಾಯಿತು. ಅಂತಿಮ ಸುತ್ತಿಗೆ ಪ್ರಮುಖ 7 ಶಾಲೆಗಳನ್ನು ಆಯ್ಕೆ ಮಾಡಲಾಗಿತ್ತು.

ಇಂದು ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಬನಶಂಕರಿಯ ಪ್ರೆಸಿಡೆನ್ಸಿ ಶಾಲೆ, ಎಸ್‌ಜೆಆ‌ರ್ ಕೆಂಗೇರಿ ಪಬ್ಲಿಕ್ ಶಾಲೆ, ಒಕ್ರಿಡ್ಜ್ ಇಂಟರ್‌ ನ್ಯಾಷನಲ್ ಶಾಲೆ, ಸೆಂಟ್ ಮಾರ್ಕ್ಸ್ ಕಾನ್ವೆಂಟ್, ಬನಶಂಕರಿಯ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆ, ಮಿತ್ರಾ ಅಕಾಡೆಮಿ, ಕಸ್ತೂರಿನಗರದ ಪ್ರೆಸಿಡೆನ್ಸಿ ಶಾಲೆ ಭಾಗವಹಿಸಿದ್ದವು.

ಇದನ್ನೂ ಓದಿ | DK Shivakumar: ಕೃತಕ ಬುದ್ಧಿಮತ್ತೆ ಮೂಲಕ ಸಂಚಾರಿ ನಿಯಮ ಉಲ್ಲಂಘನೆ ಮೇಲೆ ನಿಗಾ: ಡಿಕೆಶಿ

ಲೇಖಕಿ ಸುಧಾಮೂರ್ತಿ, ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಡಾ. ಅನೂಪ್ ನಾಯಕ್‌, ಜಿ. ಬಾಲಸುಬ್ರಮಣಿಯನ್, ರಮೇಶ್ ಜೂಡ್ ಥಾಮಸ್‌ ಅವರು ಅಂತಿಮ ಸುತ್ತಿನ ತೀರ್ಪುಗಾರರಾಗಿದ್ದರು.

Exit mobile version