Site icon Vistara News

ಡಿಕೆಶಿ ಸಹೋದರಿಯ ಪತಿ, ಕೆಪಿಸಿಸಿ ಕಾರ್ಯಕಾರಿಣಿ ಸಮಿತಿ ಸದಸ್ಯ ಸಿ.ಪಿ.ಶರತ್‌ ಚಂದ್ರ ಆಮ್‌ ಆದ್ಮಿ ಪಾರ್ಟಿಗೆ ಸೇರ್ಪಡೆ

ಸಿ.ಪಿ.ಶರತ್‌ ಚಂದ್ರ

#image_title

ಬೆಂಗಳೂರು: ಕೆಪಿಸಿಸಿ ಕಾರ್ಯಕಾರಿಣಿ ಸಮಿತಿ ಸದಸ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರ ಸಹೋದರಿಯ ಪತಿ ಸಿ.ಪಿ.ಶರತ್‌ ಚಂದ್ರ ಅವರು ಆಮ್‌ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗಿದ್ದಾರೆ. ಪಕ್ಷದ ಪ್ರಚಾರ ಹಾಗೂ ಜನಸಂಪರ್ಕ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹಾಗೂ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಭಾಸ್ಕರ್‌ ರಾವ್‌ ಅವರ ಸಮ್ಮುಖದಲ್ಲಿ ಸಿ.ಪಿ.ಶರತ್‌ ಚಂದ್ರ ಅವರು ಎಎಪಿಗೆ ಸೇರ್ಪಡೆಯಾಗಿದ್ದಾರೆ.

ನಗರದ ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು, “ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜನಾನುರಾಗಿ ನಾಯಕ ಸಿ.ಪಿ.ಶರತ್‌ ಚಂದ್ರ ಅವರು ಆಮ್‌ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗಿರುವುದು ಆ ಭಾಗದಲ್ಲಿನ ಪಕ್ಷದ ಸಂಘಟನೆಗೆ ಆನೆಬಲ ತಂದುಕೊಡಲಿದೆ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮುಂತಾದ ಸಾಂಪ್ರದಾಯಿಕ ಪಕ್ಷಗಳ ನಿಷ್ಕ್ರಿಯತೆ, ಭ್ರಷ್ಟಾಚಾರ ಹಾಗೂ ಜನವಿರೋಧಿ ನಿಲುವುಗಳಿಂದಾಗಿ ಆ ಪಕ್ಷಗಳ ಪ್ರಾಮಾಣಿಕ ನಾಯಕರು ಆಮ್‌ ಆದ್ಮಿ ಪಾರ್ಟಿ ಸೇರುತ್ತಿದ್ದಾರೆ” ಎಂದು ಹೇಳಿದರು.

ಸಿ.ಪಿ.ಶರತ್‌ ಚಂದ್ರರವರನ್ನು ಪರಿಚಯಿಸಿದ ಭಾಸ್ಕರ್‌ ರಾವ್, “ಕಾನೂನು ಪದವೀಧರರಾದ ಸಿ.ಪಿ.ಶರತ್‌ ಚಂದ್ರ ಅವರು ಉದ್ಯಮಿ ಹಾಗೂ ರೈತರು ಕೂಡ ಹೌದು. ವಿಜಯಾ ಬ್ಯಾಂಕ್‌ ಉದ್ಯೋಗಿಯಾಗಿದ್ದ ಸಂದರ್ಭದಲ್ಲಿ ಅಲ್ಲಿನ ಉದ್ಯೋಗಿಗಳ ಸಂಘದ ಉಪಾಧ್ಯಕ್ಷರಾಗಿ, ಬ್ಯಾಂಕ್‌ ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸಿದ್ದರು. 2013, 2014, 2019ರ ಚುನಾವಣೆಗಳ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್‌ ಪರ ಪ್ರಚಾರ ಮಾಡಿದ ಅನುಭವ ಹೊಂದಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ | ಸಿದ್ದರಾಮಯ್ಯ ಮಗನೂ ಬಿಜೆಪಿ ಸೇರಲಿದ್ದಾರೆ: ಕಾಂಗ್ರೆಸ್-ಜೆಡಿಎಸ್‌ ನಾಯಕರು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ನಳಿನ್‍ಕುಮಾರ್ ಕಟೀಲ್ ಮಾತು

“ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌, ನೋಟು ಅಮಾನ್ಯೀಕರಣ ವಿರುದ್ಧದ ಹೋರಾಟಗಳಲ್ಲಿ ಕೂಡ ಸಿ.ಪಿ.ಶರತ್‌ ಚಂದ್ರ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕೋವಿಡ್‌ ಸಮಯದಲ್ಲಿ ರೇಷನ್‌ ಕಿಟ್‌ ವಿತರಣೆ, ಔಷಧ ವಿತರಣೆ, ರಕ್ತದಾನ ಶಿಬಿರಗಳ ಆಯೋಜನೆ, ಆಸ್ಪತ್ರೆಗೆ ದಾಖಲಾಗಲು ನೆರವು, ಮೃತ ರೋಗಿಗಳ ಅಂತ್ಯಕ್ರಿಯೆಗೆ ಸಹಾಯ ಸೇರಿದಂತೆ ಹತ್ತುಹಲವು ರೀತಿಯ ಸೇವೆಯಲ್ಲಿ ಭಾಗಿಯಾಗಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. 2021-22ರ ಪ್ರವಾಹದ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಚನ್ನಪಟ್ಟಣದ ಜನರಿಗೆ ವಸತಿ, ರೇಷನ್‌ ಕಿಟ್‌, ಹಣಕಾಸು ನೆರವು ಮುಂತಾದ ಸಹಾಯ ಮಾಡಿದ್ದರು” ಎಂದು ತಿಳಿಸಿದರು.

ಸಿ.ಪಿ.ಶರತ್‌ ಚಂದ್ರ ಅವರು ಮಾತನಾಡಿ, “ಆಮ್‌ ಆದ್ಮಿ ಪಾರ್ಟಿಯು ದೆಹಲಿ ಹಾಗೂ ಪಂಜಾಬ್‌ನಲ್ಲಿ ನೀಡುತ್ತಿರುವ ಆಡಳಿತವು ಅತ್ಯಂತ ಜನಪರ ಹಾಗೂ ದಕ್ಷವಾಗಿದೆ. ದೆಹಲಿಯಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯಗಳಲ್ಲಿ ತಂದಿರುವ ಕ್ರಾಂತಿಕಾರಿ ಬದಲಾವಣೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಕರ್ನಾಟಕದಲ್ಲೂ ಪ್ರಾಮಾಣಿಕ, ದಕ್ಷ ಹಾಗೂ ಜನಪರ ಆಡಳಿತ ಬರಬೇಕೆಂಬ ಸದುದ್ದೇಶದಿಂದ ಆಮ್‌ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗುತ್ತಿದ್ದೇನೆ” ಎಂದು ಹೇಳಿದರು.

Exit mobile version