Site icon Vistara News

Prajadwani Yatra: ಡಿ.ಕೆ.ಶಿವಕುಮಾರ್ ಸಿಎಂ ಆಗಲು ಅವಕಾಶ ಮಾಡಿಕೊಡಿ: ಒಕ್ಕಲಿಗ ಸಮಾಜದ ಬೆಂಬಲ ಕೋರಿದ ಡಿ.ಕೆ.ಸುರೇಶ್

DK Suresh appeals to people to support DK Shivakumar to become CM

#image_title

ಹಾಸನ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು ಅವಕಾಶ ಮಾಡಿಕೊಡಿ ಎಂದು ಸಂಸದ ಹಾಗೂ ಡಿಕೆಶಿ ಸಹೋದರ ಡಿ.ಕೆ.ಸುರೇಶ್ ಮನವಿ ಮಾಡಿದ್ದಾರೆ. ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಬುಧವಾರ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ (Prajadwani Yatra) ಸಿಎಂ ಆಗಲು ಡಿಕೆಶಿಗೆ ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದ್ದು, ವಿಶೇಷವಾಗಿ ಒಕ್ಕಲಿಗ ಸಮಾಜದ ಆಶೀರ್ವಾದ ಇರಬೇಕು ಕೋರಿದ್ದಾರೆ.

ಹಾಸನ ಜಿಲ್ಲೆ ಜೆಡಿಎಸ್‌ನ ಭದ್ರಕೋಟೆ ಎಂಬ ಭಾವನೆ ಇದೆ. ನಾವು ಮತ್ತೆ ಈ ಜಿಲ್ಲೆಯಲ್ಲಿ ಶ್ರೀಕಂಠಯ್ಯ, ಪುಟ್ಟಸ್ಬಾಮಿಗೌಡರ ಕಾಲವನ್ನು ಪುನರಾವರ್ತನೆಯಾಗುವುದನ್ನು ಕಾಣುತ್ತಿದ್ದೇವೆ. ಜೆಡಿಎಸ್ ಶಾಸಕರು ಬಹಳಷ್ಟು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಅವರಿಗೆ ಅವರ ಪಕ್ಷಕ್ಕಿಂತ ನಮ್ಮ‌ ಪಕ್ಷದ ಅಭ್ಯರ್ಥಿಗಳ ಬಗ್ಗೆ ಚಿಂತೆ ಎಂದು ಕಿಡಿಕಾರಿದರು.

ದೇವೇಗೌಡರನ್ನು ಪ್ರಧಾನಮಂತ್ರಿ ಮಾಡಿದ್ದೀರಿ, ಹಾಸನದಲ್ಲಿ ಸೋತಾಗ ರಾಮನಗರದಲ್ಲಿ ನಮ್ಮ ಸಮಾಜದವರು ಅಂತ ಅಲ್ಲಿಯ ಜನ ಅವಕಾಶ ಮಾಡಿಕೊಟ್ಟಿದ್ದಾರೆ. ಕುಮಾರಸ್ವಾಮಿ ಅವರನ್ನು ಎರಡು ಬಾರಿ ಮುಖ್ಯಮಂತ್ರಿ ಮಾಡಿದ್ದೀರಿ ಎಂದ ಅವರು, ಕಳೆದ ಬಾರಿ ನಾವೇ ಅವರನ್ನು ಮುಖ್ಯಮಂತ್ರಿ ಮಾಡಿದ್ದು, ಇವತ್ತು ನಿಮಗೆ ಮತ್ತೊಂದು ಅವಕಾಶ ಬಂದಿದೆ. ಅದೇ ಸಮಾಜದ ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ಮಾಡಿಕೊಡಿ ಎಂದು ಹೇಳಿದ್ದಾರೆ.

ಇದನ್ನೂ ಓದಿ | Pulse of Karnataka: ಹಳೆ ಮೈಸೂರು: ವಿಸ್ತಾರ-ಅಖಾಡಾ ಸಮೀಕ್ಷೆ: ಮೂವರು ಸಿಎಂ ಅಭ್ಯರ್ಥಿಗಳ ತವರು ಜನರ ಮನದಲ್ಲೇನಿದೆ?

ರೈತನ ಮಗನಿಗೆ ಸಿಎಂ ಆಗಲು ಅವಕಾಶ ಕೊಡಿ: ಡಿಕೆಶಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿ ಜನತಾ ದಳ ಅಧಿಕಾರಕ್ಕೆ ಬರಲ್ಲ, ಹೀಗಾಗಿ ವೋಟ್ ವೇಸ್ಟ್ ಮಾಡಿಕೊಳ್ಳಬಾರದು ಎಂದು ಜನರೇ ತೀರ್ಮಾನ ಮಾಡಿದ್ದಾರೆ. ಹಾಗಾಗಿ ಜೆಡಿಎಸ್‌ಗೆ ಮತ ನೀಡಿ ನೀವು ನಿಮ್ಮ ವೋಟ್ ವೇಸ್ಟ್ ಮಾಡಬೇಡಿ. ನಮ್ಮ ಪಕ್ಷಕ್ಕೆ ಮತ ನೀಡಿ ರೈತನ ಮಗನಿಗೆ ಸಿಎಂ ಆಗಲು ಅವಕಾಶ ಕೊಡಿ ಎಂದು ಮನವಿ ಮಾಡಿದರು.

ಹಾಸನ ಜಿಲ್ಲೆಯಲ್ಲಿ ಎರಡು ಸಾವಿರ ಗುತ್ತಿಗೆದಾರರು ಇದ್ದರಂತೆ. ಈಗ ಅವರೆಲ್ಲಾ ಯಾರೋ ಇಬ್ಬರ ಕೈ ಕೆಳಗೆ ಮೇಸ್ತ್ರಿಗಳಾಗಿದ್ದಾರಂತೆ. ಇದಕ್ಕೆ ಕಾರಣ ಯಾರು? ಇದನ್ನು ಬದಲಾವಣೆ ಮಾಡುವ ಅವಕಾಶ ನಿಮ್ಮ ಕೈಯಲ್ಲಿದೆ. ಹೋರಾಟ ಮಾಡುವವನಿಗೆ ಭಯ ಇರುವುದಿಲ್ಲ. ಹಾಗಾಗಿ ಎಲ್ಲರೂ ಒಂದಾಗಿ ಹೋರಾಟ ಮಾಡಿ ಎಂದು ಕರೆ ನೀಡಿದರು.

ನಾವು ಎಂಬತ್ತು ಜನ ಬೆಂಬಲ ಕೊಟ್ಟಿದ್ದಕ್ಕೆ ಕುಮಾರಣ್ಣ ಸಿಎಂ ಆದರು. ಆದರೆ ನಾವು ಬೆಂಬಲ ಕೊಟ್ಟು ಸರ್ಕಾರ ಬಂದರೂ ನಮ್ಮನ್ನು ಜಿಲ್ಲೆಯಲ್ಲಿ ಹತ್ತಿರ ಸೇರಿಸಲಿಲ್ಲ ಎಂದು ಗೊತ್ತಾಯಿತು. ಹೊಳೆನರಸೀಪುರದಲ್ಲಿ ಜನರೆ ಬದಲಾವಣೆ ಬಯಸಿದ್ದಾರೆ. ಈ ಸರ್ಕಾರ ನುಡಿದಂತೆ ನಡೆಯಲಿಲ್ಲ, ಬಡವರ ಪರವಾಗಿ ಆಡಳಿತ ಮಾಡಲಿಲ್ಲ. ಈ ಸರ್ಕಾರ ಬರಲು ಕಾರಣ ಯಾರು ಎಂದು ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.

ಎಚ್‌ಡಿಕೆ ನಾವು ಕೊಟ್ಟ ಬೆಂಬಲವನ್ನು ಉಳಿಸಿಕೊಳ್ಳಲಿಲ್ಲ. ನಾವು ಒಂದು ಚೂರು ಕೂಡ ವಂಚನೆ ಮಾಡಲಿಲ್ಲ. ಆದರೆ, ಅವರೇ ಸರಿಯಾಗಿ ಆಡಳಿತ ಮಾಡಲಿಲ್ಲ ಎಂದ ಅವರು, ದಂಡನಾಯಕ ಆದವನು ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕಿತ್ತು.. ಆದರೆ ಅವರು ಹಾಗೆ ಮಾಡದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಈಗ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಆಗಿದೆ. ಇದಕ್ಕೆ ಯಾರು ಕಾರಣ ಎಂದು ಯೋಚನೆ ಮಾಡಬೇಕು ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ | BJP Rathayatre: ಆದಿವಾಸಿ, ಶೋಷಿತರ ಪರ ಮೋದಿ ಸರ್ಕಾರ ಕೆಲಸ; ಇಲ್ಲಿಯ ಚಿತ್ರಣವನ್ನೇ ಬದಲಿಸಲು ಬಂದಿದ್ದೇನೆ: ಜೆ.ಪಿ. ನಡ್ಡಾ

ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳೇ ಜೈಲು ಸೇರಿದ್ದಾರೆ. ಇಂತಹ ಸರ್ಕಾರ ಬೇಕೇ? ಯೋಚನೆ ಮಾಡಿ ಎಂದ ಅವರು, ಯಾವುದೇ ಕಾರಣಕ್ಕೂ ಜೆಡಿಎಸ್ ಸರ್ಕಾರ ರಚನೆಯಾಗಲು ಸಾಧ್ಯವಿಲ್ಲ, ಈ ಬಿಜೆಪಿ ಸರ್ಕಾರದ ದುರಾಳಿತ ಕೊನೆಯಾಗಬೇಕಿದೆ. ಜನರ ಪರವಾಗಿ ಕೆಲಸ ಮಾಡಿದ್ದು, ಮಾಡುವುದು ಕಾಂಗ್ರೆಸ್ ಸರ್ಕಾರ ಮಾತ್ರ. ಬಿಜೆಪಿ ಯಾವತ್ತೂ ಜನರ ಬದುಕಿನ ಬದಲಾವಣೆ ಮಾಡುವ ಯೋಜನೆ ಮಾಡಿಲ್ಲ. ಹಾಗಾಗಿ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಕೋರಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಮಾಜಿ ಸಚಿವ ಎಚ್.ಎಂ.ರೇವಣ್ಣ ಸೇರಿ ಹಲವು ನಾಯಕರು ಭಾಗಿಯಾಗಿದ್ದರು.

Exit mobile version