ನವದೆಹಲಿ: ಅಕ್ರಮ ಅಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ದೆಹಲಿಯ ವಿದ್ಯುತ್ ಲೇನ್ನಲ್ಲಿರುವ ಕಚೇರಿಗೆ ಆಗಮಿಸಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ನಡುವೆ ಶಿವಕುಮಾರ್ ಅವರಿಗೆ ಆರೋಗ್ಯ ಸಮಸ್ಯೆ ಕಾಡಿದೆ.
ಭಾರತ್ ಜೋಡೋ ಯಾತ್ರೆಗೆ ಸಂಬಂಧಿಸಿ ಸಾಲು ಸಾಲು ಸಭೆಗಳನ್ನು ನಡೆಸಿದ ಬಳಿಕ ಭಾನುವಾರ ಸಂಜೆ ಅವರು ದಿಲ್ಲಿಗೆ ಆಗಮಿಸಿದ್ದರು. ಬೆಳಗ್ಗೆ ಎದ್ದು ಇ.ಡಿ ಕಚೇರಿಗೆ ತೆರಳಿದ್ದಾರೆ. ಈ ವೇಳೆ ಅವರಿಗೆ ಅನಾರೋಗ್ಯ ಕಾಡಿದ್ದು, ವೈದ್ಯರ ನೆರವು ಕೋರಿದ್ದಾರೆ. ಅಧಿಕಾರಿಗಳು ಅವರಿಗೆ ವೈದ್ಯರ ಸೇವೆಯನ್ನು ಒದಗಿಸಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ ಶಿವಕುಮಾರ್ ಅವರ ಸಂಬಂಧಿ, ಕುಣಿಗಲ್ ಶಾಸಕ ಡಾ. ರಂಗನಾಥ್ ಕೂಡಾ ಜತೆಯಲ್ಲಿದ್ದಾರೆ.
ಶಿವಕುಮಾರ್ ಅವರು ಈ ಹಿಂದೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಇ.ಡಿ. ವಿಚಾರಣೆ ಎದುರಿಸಿದ್ದರು. ಜತೆಗೆ ಕೆಲವು ದಿನ ತಿಹಾರ್ ಜೈಲಿನಲ್ಲೂ ಇರಬೇಕಾಗಿ ಬಂದಿತ್ತು. ಅದರಲ್ಲಿ ಅವರು ಜಾಮೀನು ಪಡೆದಿದ್ದಾರೆ. ಆದರೆ, ಈಗ ವಿಚಾರಣೆ ನಡೆಯುತ್ತಿರುವುದು ಅಕ್ರಮ ಸಂಪತ್ತು ಸಂಗ್ರಹದ ಮತ್ತೊಂದು ಪ್ರಕರಣ. ಹಣ ವರ್ಗಾವಣೆ ಪ್ರಕರಣದಂತೆಯೇ ಮೊದಲು ಸಿಬಿಐ ತನಿಖೆ ನಡೆಸಿದ ಬಳಿಕ ಇ.ಡಿ.ಗೆ ವರ್ಗಾವಣೆಯಾಗಿದೆ. ಈ ಪ್ರಕರಣದ ಇ.ಡಿ. ವಿಚಾರಣೆ ಈಗಷ್ಟೇ ಅರಂಭವಾಗಿದ್ದು ಮುಂದೆ ಯಾವ ಹಾದಿಯಲ್ಲಿ ಸಾಗಲಿದೆ ಎಂದು ಕಾದು ನೋಡಬೇಕಾಗಿದೆ.
ಭಾರತ್ ಜೋಡೊ ಹೊತ್ತಲ್ಲೇ ಸಮನ್ಸ್
‘ಭಾರತ್ ಜೋಡೊ ಯಾತ್ರೆ’ ತಯಾರಿಯಲ್ಲಿರುವ ಡಿಕೆಶಿ ಸಾಲು ಸಾಲು ಸಭೆಗಳನ್ನು ಇಟ್ಟುಕೊಂಡಿದ್ದಾರೆ. ಜತೆಗೆ ಮುಂದಿನ ವಿಧಾನಸಭಾ ಚುನಾವಣೆಗೂ ದೊಡ್ಡ ಮಟ್ಟದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಈ ಹೊತ್ತಿನಲ್ಲಿ ಅವರಿಗೆ ಇ.ಡಿ. ಸಮನ್ಸ್ ನೀಡಿದೆ. ಇದು ರಾಜಕೀಯ ದ್ವೇಷದ ಕೃತ್ಯ ಎಂದು ಡಿ.ಕೆ.ಶಿ ಮತ್ತು ಕಾಂಗ್ರೆಸ್‌ನಲ್ಲಿರುವ ಅವರ ಅಭಿಮಾನಿಗಳು ಆಪಾದಿಸಿದ್ದಾರೆ.
ಸಹೋದರ ಡಿ.ಕೆ. ಸುರೇಶ್ ಕೂಡಾ ದಿಲ್ಲಿಯಲ್ಲಿ
ಎರಡು ವರ್ಷದ ಹಿಂದೆ ಸಂಪೂರ್ಣ ಆಸ್ತಿ ವಿವರ ನೀಡಲಾಗಿದೆ. ಡಿಕೆಶಿ ಕುಟುಂಬದ ಎಲ್ಲ ಸದಸ್ಯರ ಮಾಹಿತಿ ನೀಡಲಾಗಿದೆ. ಇದು ರಾಜಕೀಯ ಪ್ರಚೋದನೆಯಿಂದ ದಾಖಲಿಸಿದ ದೂರು. ಮತ್ತೊಮ್ಮೆ ದಾಖಲೆ ಕೇಳಿದ್ದಾರೆ, ನೀಡಲಿದ್ದೇವೆ. ಕೇಂದ್ರದಿಂದ ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆಯಾಗುತ್ತಿದೆ. ಕಾಂಗ್ರೆಸ್ ಕಟ್ಟಿಹಾಕಲು ಪ್ರಯತ್ನ ಆಗ್ತಿದೆ, ಅದು ಸಾಧ್ಯವಾಗಲ್ಲ. ಅರೆಸ್ಟ್ ಮಾಡಲಿ, ಜೈಲಿಗೆ ಹಾಕಲಿ, ನಾವು ಹೆದರಲ್ಲʼʼ ಎಂದು ದಿಲ್ಲಿಯಲ್ಲಿರುವ ಸಂಸದ ಡಿ.ಕೆ. ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | ಡಿ.ಕೆ. ಶಿವಕುಮಾರ್‌ಗೆ ED ಸಂಕಷ್ಟ | ವಾರದಲ್ಲಿ ಹಾಜರಾಗಲು ಸಮನ್ಸ್: ಖಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ