ಬೆಂಗಳೂರು: ನಗರದ ಬಸವನಗುಡಿ ಕ್ಷೇತ್ರ ತನ್ನದೇ ಆದ ಪರಂಪರೆ ಹೊಂದಿರುವ ಐತಿಹಾಸಿಕ ಪ್ರಸಿದ್ಧಿ ಕ್ಷೇತ್ರವಾಗಿತ್ತು. ಆದರೆ, ಇದೀಗ ಬ್ಯಾಂಕ್ ಹಗರಣಗಳಿಂದ ಸುದ್ದಿ ಆಗುತ್ತಿರುವುದು ಬೇಸರದ ಸಂಗತಿಯಾಗಿದೆ. ಜುಲೈ 24ರಂದು “ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್” ನ ಹಗರಣ ಬೆಳಕಿಗೆ ಬಂದಿದೆ. ಈ ಮೂಲಕ ಬಸವನಗುಡಿಯ ಸಹಕಾರಿ ಬ್ಯಾಂಕ್ ಹಗರಣಗಳ ಸರಮಾಲೆಯಲ್ಲಿ ಮತ್ತೊಂದು ಸೇರ್ಪಡೆಯಾದಂತಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಠೇವಣಿದಾರರಿಗೆ ನ್ಯಾಯ ಒದಗಿಸಬೇಕು ಎಂದು ಗುರು ರಾಘವೇಂದ್ರ ಬ್ಯಾಂಕ್ ಠೇವಣಿದಾರರು ಮತ್ತು ಷೇರುದಾರರ ಹಿತರಕ್ಷಣಾ ವೇದಿಕೆಯ ಮುಖ್ಯ ಪೋಷಕರಾದ ಡಾ.ಶಂಕರ್ ಗುಹಾ ದ್ವಾರಕನಾಥ್ ಮನವಿ ಮಾಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್‌ನ ಹೊಸ ಆಡಳಿತ ಮಂಡಳಿ ಕಾರ್ಯನಿರ್ವಹಿಸಲು ಪ್ರಾರಂಭಿಸಿ ಕೆಲವೇ ವರ್ಷಗಳಾಗಿದೆ. ಈ ಹಗರಣದ ಕುರಿತು ಹಳೆಯ ಆಡಳಿತ ಮಂಡಳಿಯವರು ಉತ್ತರವನ್ನು ನೀಡಬೇಕಾಗಿದೆ. ಬಹಳಷ್ಟು ಇತಿಹಾಸ ಹೊಂದಿದ್ದ ನ್ಯಾಷನಲ್ ಬ್ಯಾಂಕ್ ಅನ್ನು ಗ್ರಾಹಕರು ನಂಬಿ, ಕಷ್ಟಪಟ್ಟು ಬೆವರು ಸುರಿಸಿ ದುಡಿದ ಹಣವನ್ನು ಠೇವಣಿ ಮಾಡಿದ್ದರು. ಆದರೆ, ಇಂತಹ ಬ್ಯಾಂಕುಗಳೂ ಹೀಗೆ ಹಗರಣಕ್ಕೆ ಒಳಪಡುತ್ತಿರುವುದು ಅತ್ಯಂತ ಆತಂಕಕಾರಿ ಘಟನೆಯಾಗಿದೆ. ಠೇವಣಿದಾರರ ಹಿತ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Karnataka Politics : ಸರ್ಕಾರದಲ್ಲಿ ಅನುದಾನ ಎಲ್ಲಿದೆ? ಕಾಂಗ್ರೆಸ್ ಶಾಸಕರಿಗೆ ಡಿಕೆಶಿ ತಿರುಗೇಟು!
ಸರ್ಕಾರ ಈ ಕೂಡಲೇ ಸೂಕ್ತ ಕ್ರಮ ಕೈಗೊಂಡು, ವಿಶೇಷ ತಂಡವನ್ನು ರಚನೆ ಮಾಡಬೇಕು. ದೈನಂದಿನ ವ್ಯವಹಾರಗಳ ಮೇಲೆ ನಿಗಾ ಇರಿಸಿಬೇಕು. ಬಸವನಗುಡಿ ಭಾಗದಲ್ಲಿ ಇನ್ನೆರಡು ಸಹಕಾರಿ ಬ್ಯಾಂಕುಗಳು ಕೂಡ ಇದೇ ರೀತಿ ಹಗರಣದ ಹಾದಿಯನ್ನು ಹಿಡಿಯುವ ಮುನ್ಸೂಚನೆ ಕಾಣುತ್ತಿದೆ. ಸರ್ಕಾರವು ಆ ಬ್ಯಾಂಕುಗಳ ಕುರಿತು ಮಾಹಿತಿಯನ್ನು ಪಡೆದು ಅಲ್ಲಿಯ ಠೇವಣಿದಾರರ ಹಿತ ದೃಷ್ಟಿಯಿಂದ ಬ್ಯಾಂಕ್‌ನ ಪ್ರತಿದಿನದ ವ್ಯವಹಾರವನ್ನು ಗಮನಿಸಿ ಕ್ರಮ ಕೈಗೊಳ್ಳಬೇಕು ಎಂದು ಡಾ.ಶಂಕರ್ ಗುಹಾ ಅವರು ರಾಜ್ಯ ಸರ್ಕಾರವನ್ನು ಕೋರಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಬಸವನಗುಡಿಯ ಗುರುರಾಘವೇಂದ್ರ ಬ್ಯಾಂಕ್ ಹಗರಣ ಬೆಳಕಿಗೆ ಬಂದಾಗಿನಿಂದ ಠೇವಣಿದಾರರ ಪರವಾಗಿ ಹೋರಾಡುತ್ತಿರುವ ಸಂದರ್ಭದಲ್ಲಿ ಅವರಿಗಾದ ನೋವು, ಸಂಕಟ, ತೊಂದರೆಗಳನ್ನು ಹತ್ತಿರದಿಂದ ನೋಡಲಾಗಿತ್ತು. ಆ ಹಿನ್ನೆಲೆಯಲ್ಲಿ ಠೇವಣಿದಾರರ ಹಿತ ದೃಷ್ಟಿಯಿಂದ ಈ ಹಗರಣವೂ ಮತ್ತೊಂದು ಗುರುರಾಘವೇಂದ್ರ ಬ್ಯಾಂಕ್ ಹಗರಣದ ರೀತಿಯಲ್ಲಿ ಆಗದಿರಲಿ ಎಂಬ ಕಾರಣಕ್ಕೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಿ, ನೊಂದ ಠೇವಣಿದಾರರಿಗೆ ನ್ಯಾಯ ಸಿಗಲಿ ಎಂಬ ಆಶಯದಿಂದ ಸರ್ಕಾರದ ಬಳಿ ಈ ಮನವಿಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.