ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (BBMP) ವಿಭಜಿಸುವ ಯತ್ನವನ್ನು ರಾಜ್ಯ ಸರ್ಕಾರ ನಿಲ್ಲಿಸಿ, ವಲಯಗಳಿಗೆ ಹೆಚ್ಚಿನ ಶಕ್ತಿಯನ್ನು ತುಂಬಿ, ಸುಗಮ ಆಡಳಿತಕ್ಕೆ ಒತ್ತು ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಾಲಿಕೆ ವಿಭಜನೆಯು ನಿಶ್ಚಿತವಾಗಿ ಕನ್ನಡಿಗರ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಈ ಹಿಂದೆಯೂ ಸಹ ಪಾಲಿಕೆ ವಿಭಜನೆಯ ಮಾತುಗಳು ಕೇಳಿಬಂದಾಗ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿತ್ತು. ಆಡಳಿತ ಸುಧಾರಣೆಯ ನಿಟ್ಟಿನಲ್ಲಿ ಸರ್ಕಾರದ ಕಾಳಜಿಯನ್ನು ನಾವು ಪ್ರಶ್ನಿಸುತ್ತಿಲ್ಲ. ಆದರೆ ಇದು ಕನ್ನಡಿಗರ ಪಾಲಿಗೆ ಸಮಸ್ಯಾತ್ಮಕವಾಗುವ ಹಿನ್ನೆಲೆಯಲ್ಲಿ ನಮ್ಮ ತಾತ್ವಿಕ ವಿರೋಧವಿದೆ. ಈ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯನ್ನು ವಿಭಜಿಸುವ ಯತ್ನವನ್ನು ಸರ್ಕಾರ ನಿಲ್ಲಿಸಿ, ವಲಯಗಳಿಗೆ ಹೆಚ್ಚಿನ ಶಕ್ತಿಯನ್ನು ತುಂಬಿ ಸುಗಮ ಆಡಳಿತಕ್ಕೆ ಒತ್ತು ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಜೂ.15ರಂದು ʼನಾರಿ ಸಮ್ಮಾನ್ʼ ಪ್ರಶಸ್ತಿ ಪ್ರದಾನ
ಬೆಂಗಳೂರು ಮಹಾನಗರ ಇತ್ತೀಚಿನ ದಿನಗಳಲ್ಲಿ ವಲಸಿಗರ ಸಂತೆಯಾಗಿ ಹೋಗಿದೆ. ಪ್ರತಿನಿತ್ಯ ಬೇರೆ ಬೇರೆ ರಾಜ್ಯಗಳಿಂದ ಜನರು ಗಂಟುಮೂಟೆ ಕಟ್ಟಿಕೊಂಡು ಬಂದು ಬೆಂಗಳೂರಿನಲ್ಲಿ ನೆಲೆಸುತ್ತಿದ್ದಾರೆ. ಬೆಂಗಳೂರಿನ ಭೌಗೋಳಿಕ, ಸಾಮಾಜಿಕ, ಸಾಂಸ್ಕೃತಿಕ ಚಹರೆಯನ್ನೇ ಈ ವಲಸಿಗರು ಬದಲಾಯಿಸುತ್ತಿದ್ದಾರೆ. ಬೆಂಗಳೂರಿನ ಮೂಲನಿವಾಸಿಗಳಾದ ಕನ್ನಡಿಗರೇ ಅತಂತ್ರ ಸ್ಥಿತಿಯಲ್ಲಿ ಬದುಕುವಂತ ಸಂದರ್ಭವನ್ನು ಈ ವಲಸಿಗರು ಸೃಷ್ಟಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದು ನಗರದ ಸ್ವಾಸ್ಥ್ಯ, ಸಾಮರಸ್ಯಕ್ಕೆ ಧಕ್ಕೆ ತಂದು ಸಂಘರ್ಷವನ್ನು ನಿರ್ಮಿಸಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಇಂಥ ಸಂದರ್ಭದಲ್ಲಿ ಬೆಂಗಳೂರನ್ನು ವಿಭಜಿಸಿ ಐದು ಪಾಲಿಕೆಗಳನ್ನಾಗಿ ಮಾಡಿದರೆ ವಲಸಿಗರು ಹೆಚ್ಚು ಇರುವ ಪಾಲಿಕೆಗಳನ್ನು ಇದೇ ಜನರು ನಿಯಂತ್ರಣಕ್ಕೆ ತಂದುಕೊಂಡರೆ ಕನ್ನಡಿಗರು ಎಲ್ಲಿಗೆ ಹೋಗಬೇಕು? ಬೆಳಗಾವಿ ಮಹಾನಗರಪಾಲಿಕೆಯ ಇತಿಹಾಸ ಸರ್ಕಾರಕ್ಕೆ ಗೊತ್ತಿಲ್ಲದೇ ಏನಿಲ್ಲ. ಬೆಂಗಳೂರಿನಲ್ಲೂ ಇಂಥ ಪಾಲಿಕೆಗಳು ಬೇಕೇ? ಎಂದು ಅವರು ಪ್ರಶ್ನಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತಕ್ಕೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಎಂಟು ವಲಯಗಳನ್ನು ರಚಿಸಿ, ವಿಕೇಂದ್ರೀಕರಣದ ಹೆಜ್ಜೆ ಇಟ್ಟಿದೆ. ಎಂಟೂ ವಲಯಗಳಿಗೆ ಐಎಎಸ್ ಅಧಿಕಾರಿಗಳನ್ನೇ ವಲಯ ಆಯುಕ್ತರನ್ನಾಗಿ ನೇಮಿಸಲಾಗಿದೆ. ಅಲ್ಲದೆ ಜಂಟಿ ಆಯುಕ್ತರನ್ನೂ ನೇಮಿಸಲಾಗಿದೆ. ಸರ್ಕಾರ ಮೊದಲು ಮಾಡಬೇಕಿರುವ ಕೆಲಸ ಈ ವಲಯಗಳಿಗೆ ಹೆಚ್ಚಿನ ಆರ್ಥಿಕ ಶಕ್ತಿಯನ್ನು ತುಂಬಿ, ಮೂಲಸೌಕರ್ಯಗಳನ್ನು ಹೆಚ್ಚಿಸಿ, ಹೆಚ್ಚಿನ ಸ್ವಾಯತ್ತತೆಯನ್ನು ಒದಗಿಸುವುದು. ಹೀಗಾದಾಗ ಮಾತ್ರ ವಿಕೇಂದ್ರೀಕರಣದ ಉದ್ದೇಶ ಈಡೇರುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Bengaluru News: ಬೆಂಕಿ ನಂದಿಸುವ ‘ವಿಶಿಷ್ಟ ಡ್ರೋನ್’; ಎಂಜಿನಿಯರಿಂಗ್ ವಿದ್ಯಾರ್ಥಿಗಳ ಆವಿಷ್ಕಾರ!
ಬೃಹತ್ ಬೆಂಗಳೂರು ಮಹಾನಗರಪಾಲಿಕೆಯನ್ನು ವಿಭಜಿಸುವ ಯತ್ನವನ್ನು ಸರ್ಕಾರ ನಿಲ್ಲಿಸಿ, ವಲಯಗಳಿಗೆ ಹೆಚ್ಚಿನ ಶಕ್ತಿಯನ್ನು ತುಂಬಿ ಸುಗಮ ಆಡಳಿತಕ್ಕೆ ಒತ್ತು ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.