ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಉಪಯೋಜನೆಗೆ ಮೀಸಲಾದ ಅನುದಾನದ ಪೈಕಿ ಒಟ್ಟು 11 ಸಾವಿರ ಕೋಟಿ ರೂಪಾಯಿಗಳನ್ನು ಐದು ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್ ಸರ್ಕಾರ ಬಳಸಿಕೊಂಡಿದೆ. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಎಸ್‌ಸಿ- ಎಸ್‌ಟಿ, ಟಿಎಸ್‌ಪಿ ರಾಜ್ಯ ಅಭಿವೃದ್ಧಿ ಪರಿಷತ್ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿಯನ್ನು ಸಮಾಜ ಕಲ್ಯಾಣ ಸಚಿವರು ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳ ವ್ಯಾಪ್ತಿಗೆ ಬರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ಈ ಅನುದಾನ ಬಳಕೆಯಾಗಲಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಮೇಲ್ನೋಟಕ್ಕೇ ಈ ಸಮರ್ಥನೆ ಸಮಂಜಸವೆನ್ನಿಸುವುದಿಲ್ಲ. ಗ್ಯಾರಂಟಿ ಯೋಜನೆಗಳು ಎಸ್‌ಸಿ- ಎಸ್‌ಟಿ ಸಮುದಾಯಗಳಿಗೆ ಮಾತ್ರ ಮೀಸಲಲ್ಲ. ಎಲ್ಲರೂ ಇದರಲ್ಲಿ ಫಲಾನುಭವಿಗಳಾಗಿದ್ದಾರೆ. ಹೀಗಾಗಿ ಇದು ಎಲ್ಲರಿಗೂ ಹಂಚಿಹೋಗುತ್ತದೆ. ಆದರೆ ಎಸ್‌ಸಿ- ಎಸ್‌ಟಿ ಸಮುದಾಯಗಳಿಗೆ ಮೀಸಲಾಗಿದ್ದುದು ಹಂಚಿಹೋಗುತ್ತದೆ. ದಲಿತರ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ಈ ಸರ್ಕಾರ ಬೇರೆ ಕಡೆ ಬಳಸುತ್ತಿದೆ ಎಂದು ವಿಪಕ್ಷ ನಾಯಕರು ಆರೋಪಿಸಿದ್ದಾರೆ. ಎಸ್‌ಸಿ- ಎಸ್‌ಟಿ ಜನಾಂಗಕ್ಕೆ ಅನುದಾನ ಕೊಟ್ಟಿದ್ದೇನೆ ಎನ್ನುವ ಮುಖ್ಯಮಂತ್ರಿಗಳು ಆ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲು ಒಪ್ಪಿಗೆ ನೀಡಿರುವುದು ಸಲ್ಲದು. ಪರಿಶಿಷ್ಟ ಜಾತಿ ಬುಡಕಟ್ಟುಗಳ ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯಕ್ಕೆ ಮೀಸಲಿಡಬೇಕಾಗಿರುವ ಹಣವಿದು. ಇದು ಸಂವಿಧಾನದ ಆಶಯವಾಗಿದೆ ಎಂಬ ವಿಪಕ್ಷ ನಾಯಕರ ಆರೋಪದಲ್ಲಿ ಹುರುಳಿದೆ.
ಇಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಒಂದು ಮಾತನ್ನೂ ಸ್ಮರಿಸಿಕೊಳ್ಳಬಹುದು. ʼಗ್ಯಾರಂಟಿ ಯೋಜನೆಗಳಿಗೆ ₹ 40 ಸಾವಿರ ಕೋಟಿ ಇಡಬೇಕು. ಗ್ಯಾರಂಟಿ ಜಾರಿ ಬಗ್ಗೆ ನಾವು ಕೊಟ್ಟ ಮಾತು ಉಳಿಸಿಕೊಳ್ಳಬೇಕಿದೆ. ಹೀಗಾಗಿ ಅಭಿವೃದ್ಧಿ ಕೆಲಸಗಳಿಗೆ ಹಣ ಕೊಡಲು ಕಷ್ಟವಾಗುತ್ತದೆ; ಎಂದು ಡಿಸಿಎಂ ಹೇಳಿದ್ದಾರೆ. ಗ್ಯಾರಂಟಿಗಳಿಗೆ ಕೊಡಬೇಕಿರುವುದರಿಂದ ಶಾಸಕರ ಅಭಿವೃದ್ಧಿ ಅನುದಾನ ಕೂಡ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಸರ್ಕಾರ ಒಪ್ಪಿಕೊಂಡಿದೆ. ಹೀಗಾಗಿ ಶಾಸಕರಿಗೂ ತಮ್ಮ ಕ್ಷೇತ್ರದಲ್ಲಿ ಮುಖ ತೋರಿಸಲು ಸಾಧ್ಯವಾಗುತ್ತಿಲ್ಲ. ಈ ವರ್ಷ ಅಭಿವೃದ್ಧಿ ಯೋಜನೆಗಳಿಗೆ ಹಣ ಕೇಳಬೇಡಿ ಎಂದು ನೇರವಾಗಿಯೇ ಶಾಸಕರಿಗೆ ಹೇಳಲಾಗಿದೆ. ಮುಂದಿನ ವರ್ಷವೂ ಇದೇ ಸ್ಥಿತಿ ಮುಂದುವರಿಯುವುದಿಲ್ಲ ಎಂಬ ಖಾತ್ರಿ ಇದೆಯೇ? ಹಾಗಾದರೆ ಜನ ಏನು ಮಾಡಬೇಕು? ಶಕ್ತಿ ಯೋಜನೆಯೊಂದರಲ್ಲಿಯೇ ಕೆಎಸ್‌ಆರ್‌ಟಿಸಿಗೆ ಜೂನ್ ತಿಂಗಳಲ್ಲಿ 248 ಕೋಟಿ ರೂ.ಗಳನ್ನು ಸರ್ಕಾರ ಮರುಪಾವತಿ ಮಾಡಬೇಕಿದೆ. ಇನ್ನೂ ಮಾಡಿಲ್ಲ.
ಇದರ ಜತೆಗೆ ಸರ್ಕಾರ ಬೆಲೆ ಏರಿಕೆ ಬರೆಯನ್ನೂ ಎಳೆದಿದೆ. ಬಸ್ ದರ ಹಾಗೂ ನಂದಿನಿ ಹಾಲಿನ ಉತ್ಪನ್ನಗಳ ದರ ಏರಿಸಲಾಗಿದೆ. ತರಕಾರಿ ಬೆಲೆ ತಾನಾಗಿಯೇ ಹೆಚ್ಚಿದೆ. ಶಾಲಾ ಕಾಲೇಜು ವಾಹನಗಳ ದರ, ಮೋಟಾರ್ ತೆರಿಗೆ ಹೆಚ್ಚಾಗಿದೆ. ಕಟ್ಟಡಕ್ಕೆ ಜಲ್ಲಿ ದರ, ಹೋಟೆಲ್ ಆಹಾರ ದರವೂ ಏರಿಕೆಯಾಗಿದೆ. ಸರ್ಕಾರ 25 ರೀತಿಯ ಬೆಲೆ ಏರಿಕೆ ಮಾಡಿದೆ ಎಂದು ವಿಪಕ್ಷ ಆರೋಪಿಸಿದೆ. ಗ್ಯಾರಂಟಿಗಳಿಗೆ ಹಣ ಒಟ್ಟು ಮಾಡುವುದಕ್ಕಾಗಿ ಹಲವು ರೀತಿಗಳಲ್ಲಿ ದರ ಏರಿಕೆ ಮೂಲಕ ಸರ್ಕಾರ ಯತ್ನಿಸುತ್ತಿರುವುದಂತೂ ನಿಜ. ಅಂದರೆ ಯಾರು ಉಚಿತಗಳ ಭಾಗ್ಯವನ್ನು ಅನುಭವಿಸುತ್ತಿದ್ದಾರೋ, ಅವರೇ ಇನ್ನೊಂದು ಕಡೆಯಲ್ಲಿ ತೆರಿಗೆಗಳ ಮೂಲಕ ಹಣವನ್ನು ವೆಚ್ಚ ಮಾಡುತ್ತಿದ್ದಾರೆ. ಇದು ಒಂದು ಕಡೆ ಉಚಿತಗಳನ್ನು ಕೊಟ್ಟಂತೆ ಮಾಡಿ ಇನ್ನೊಂದು ಕಡೆಯಿಂದ ಕಿತ್ತುಕೊಂಡಂತೆಯೇ ಆಗುತ್ತಿದೆ. ಈ ಬೆಲೆ ಏರಿಕೆಯಿಂದ ಸುಮಾರು 75 ಸಾವಿರ ಕೋಟಿ ರೂ. ಸರ್ಕಾರಕ್ಕೆ ಆದಾಯ ಬರುತ್ತಿದೆ; ಗ್ಯಾರಂಟಿಗೆ 50 ಸಾವಿರ ಕೋಟಿ ವೆಚ್ಚ ಮಾಡಲು ಜನರಿಗೆ 75 ಸಾವಿರ ಕೋಟಿ ರೂ. ಬರೆ ಹಾಕಲಾಗಿದೆ ಎಂಬ ಆರೋಪದಲ್ಲಿ ತುಸು ಉತ್ಪ್ರೇಕ್ಷೆ ಇರಬಹುದಾದರೂ, ಆದರೆ ಪೂರ್ತಿ ಸುಳ್ಳಲ್ಲ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಕರ್ನಾಟಕದ ಜೈಲುಗಳಾಗುತ್ತಿವೆ ಉಗ್ರರ ತರಬೇತಿ ಕೇಂದ್ರ
ಗ್ಯಾರಂಟಿಗಳ ಘೋಷಣೆಗೆ ಮುನ್ನ ಕಾಂಗ್ರೆಸ್ ಹತ್ತು ಬಾರಿ ಯೋಚಿಸಬೇಕಿತ್ತು. ಖಜಾನೆಯ ಸ್ಥಿತಿಗತಿ ಏನು, ಅಧಿಕಾರಕ್ಕೆ ಬಂದರೆ ಈ ಉಚಿತಗಳನ್ನು ಜಾರಿ ಮಾಡಲು ಸಾಧ್ಯವೇ, ತೆರಿಗೆ ಮತ್ತು ಬೆಲೆಯೇರಿಕೆ ಹೊರತುಪಡಿಸಿ, ಸಾಮಾನ್ಯ ಜನರ ಜೇಬಿಗೆ ಕೈ ಹಾಕುವುದು ಹೊರತುಪಡಿಸಿ ಬೇರೆ ಯಾವ ವಿಧಾನಗಳಿಂದ ಹಣವನ್ನು ಸಂಗ್ರಹಿಸಬಹುದು, ಇವೆಲ್ಲವನ್ನೂ ಆಳವಾಗಿ ಚಿಂತಿಸಿ ಮುಂದುವರಿದಿದ್ದರೆ ಇದಕ್ಕೊಂದು ಅರ್ಥವಿರುತ್ತಿತ್ತು. ಸದ್ಯ ಪರಿಶಿಷ್ಟ ಜಾತಿ- ಬುಡಕಟ್ಟುಗಳ ಜನರ ಕಲ್ಯಾಣಕ್ಕಾಗಿ ಮೀಸಲಾದ ಹಣವನ್ನು ಅದರ ನೈಜ ಉದ್ದೇಶಕ್ಕಾಗಿಯೇ ಬಳಸಬೇಕು. ಇಲ್ಲವಾದರೆ ಪರಿಶಿಷ್ಟರ ಕಲ್ಯಾಣದ ಆಶಯವೇ ನಿರರ್ಥಕವಾಗಲಿದೆ.