ಬಾಗಲಕೋಟೆ: ದೇಶದ ಸಂಸ್ಕೃತಿ ವಿಚಾರದಲ್ಲಿ ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಬಲಿರಾಮ ಹೆಡ್ಗೇವಾರ್ ಭಾಷಣದ ಅಂಶಗಳನ್ನು ಪಠ್ಯದಲ್ಲಿ ಸೇರಿಸಿದ್ದಾರೆ. ಇದರ ಬದಲಿಗೆ ಪಠ್ಯದಲ್ಲಿ ಮಹಮ್ಮದ್ ಅಲಿ ಜಿನ್ನಾ ಹೆಸರು ಸೇರಿಸಬೇಕಿತ್ತಾ ಅಥವಾ ದೇಗುಲ ಧ್ವಂಸ ಮಾಡಿದ ಔರಂಗಜೇಬನ ಹೆಸರು ಸೇರಿಸಬೇಕಿತ್ತಾ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಎಂದು ಪ್ರಶ್ನಿಸಿದ್ದಾರೆ.
“ಪಠ್ಯದಲ್ಲಿ ಮೈಸೂರು ಹುಲಿ ಟಿಪ್ಪು ಸುಲ್ತಾನ್, ಅಲೆಗ್ಸಾಂಡರ್ ದಿ ಗ್ರೇಟ್ ಇವುಗಳನ್ನು ನಮ್ಮ ಮಕ್ಕಳು ಓದುತ್ತಿದ್ದರು. ಯಾರು ನಮ್ಮ ದೇಶ, ಸಂಸ್ಕೃತಿಯನ್ನು ಹಾಳು ಮಾಡಿದರೋ ಅಂಥವರ ವೈಭವೀಕರಣ ಪಠ್ಯದಲ್ಲಿ ಇತ್ತು,ʼʼ ಎಂದಿರುವ ಈಶ್ವರಪ್ಪ, ಭಗತ್ ಸಿಂಗ್ ಹಾಗೂ ನಾರಾಯಣ ಗುರುಗಳ ಪಠ್ಯವನ್ನು ಕಿತ್ತು ಹಾಕಲಾಗಿದೆ ಎಂಬ ಆರೋಪ ಸುಳ್ಳು ಎಂದು ಕಿಡಿಕಾರಿದ್ದಾರೆ.
ʻʻ1925ರಲ್ಲಿ ಹಿಂದೂ ಸಮಾಜ ಒಂದು ಮಾಡುವ ಪ್ರಯತ್ನವನ್ನು ಹೆಡ್ಗೇವಾರ್ ಮಾಡಿದ್ದರು, ಅವರ ವಿಚಾರಧಾರೆ ಹರಡದೇ ಇದ್ದಿದ್ದರೆ ಈ ದೇಶ ತುಂಡು ತುಂಡಾಗಿ ಹೋಗುತ್ತಿತ್ತು. ಹಿಂದುತ್ವ ಇಷ್ಟು ಜಾಗೃತವಾಗಿರುವಾಗಲೇ ರಾಷ್ಟ್ರದ್ರೋಹಿಗಳು, ಭಯೋತ್ಪಾದಕರು ಆಟ ಆಡುತ್ತಿದ್ದಾರೆ. ಟಿಪ್ಪು ಸುಲ್ತಾನ್ ಬಗ್ಗೆ ಹೇಳಿದರೆ ವಿಚಾರವಾದಿಗಳಿಗೆ ಅದೇ ಆನಂದ, ಯಾರು ಈ ದೇಶವನ್ನು ಹಾಳು ಮಾಡಿದರೋ ಅವರದೇ ಪಠ್ಯ ಇರಬೇಕೆನ್ನುವ ಆಸೆ ಅವರದ್ದಾಗಿದೆ,ʼʼ ಎಂದು ಅಸಮಾಧಾನ ಹೊರಹಾಕಿದರು.
ʻʻಪಠ್ಯ ಪುಸ್ತಕ ರಚನಾ ಸಮಿತಿ ರಾಷ್ಟ್ರಭಕ್ತಿಯನ್ನು ಮಕ್ಕಳಿಗೆ ಹೇಳಿಕೊಡಲು ತೀರ್ಮಾನ ಮಾಡಿದೆ. ಹಾಗಾಗಿ ರಾಷ್ಟ್ರೀಯ ಮಹಾನ್ ಪುರುಷರ ವಿಚಾರವನ್ನು ಮುಂದುವರಿಸಲಾಗುತ್ತಿದೆ ತಪ್ಪೇನು,ʼʼ ಎಂದ ಅವರು, ʻʻಸಂವಿಧಾನ ಬದ್ಧವಾಗಿ ನಡೆಯುತ್ತಿರೋದನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಇದನ್ನು ಸಿದ್ದರಾಮಯ್ಯ, ಡಿಕೆಶಿ ವಿರೋಧ ಮಾಡಲ್ಲ ಅಂತ ನಾವೇನು ಅಂದುಕೊಂಡಿರಲಿಲ್ಲ ,ʼʼ ಎಂದರು.
ಇದನ್ನೂ ಓದಿ| ʼವಿವಾದದ ಚಕ್ರತೀರ್ಥʼದಲ್ಲಿ ಪಠ್ಯಪುಸ್ತಕ : ಹೊಸ ಪಠ್ಯವನ್ನು ತಡೆಹಿಡಿಯಲು ಹಂಪನಾ ಆಗ್ರಹ
ಮಂಗಳೂರು ಸಮೀಪದ ಮಳಲಿ ಮಸೀದಿ-ಮಂದಿರ ವಿವಾದಕ್ಕೆ ಸಂಬಂಧಿಸಿ ನಡೆದ ತಾಂಬೂಲ ಪ್ರಶ್ನೆ ವಿಚಾರವನ್ನು ಪ್ರಸ್ತಾಪಿಸಿ, ರಾಜ್ಯದ ಜನರ ಮೇಲೆ ಮೂಢನಂಬಿಕೆ ಹೇರುತ್ತಿದ್ದಾರೆಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಯನ್ನು ಆಕ್ಷೇಪಿಸಿದರು, ʻʻದೇವೇಗೌಡರ ವಂಶ ನನಗೂ ಆದರ್ಶ, ದೇವರು, ಧರ್ಮ ವಿಷಯದಲ್ಲಿ ಆ ವಂಶ ಎಲ್ಲರಿಗೂ ಮಾದರಿ. ಆದರೆ ರಾಜಕಾರಣಕ್ಕಾಗಿ ಕುಮಾರಸ್ವಾಮಿ ಏನೋ ಒಂದು ಹೇಳಿದ್ರೆ ಅವರು ಹಾಗೂ ದೇವೇಗೌಡರ ಬಗ್ಗೆ ನಾನು ಟೀಕೆ ಮಾಡಲ್ಲ. ಮಳಲಿ ಮಸೀದಿ ನವೀಕರಣ ಮಾಡುವಾಗ ದೇಗುಲ ಅವಶೇಷ ಸಿಕ್ಕಿದ್ದು, ಅದರ ಬಗ್ಗೆ ಚರ್ಚೆ ನಡೆಯುತ್ತಿದೆ. ಕುಮಾರಸ್ವಾಮಿ ಅವರ ಮನೆಯಲ್ಲಿನ ದೇವಸ್ಥಾನ ಪುಡಿ ಮಾಡಿದ್ರೆ ಸುಮ್ಮನಿರುತ್ತಿದ್ದರಾ?, ಕಾಶಿ, ಮಥುರಾ ಬಗ್ಗೆ ಮೊದಲು ಸರಿಯಾಗಿ ತಿಳಿದುಕೊಳ್ಳಲಿ. ರಾಮ ಮಂದಿರ ಬಗ್ಗೆ ಟೀಕೆ ಮಾಡಿದರೂ, ಇವತ್ತಲ್ಲ ನಾಳೆ ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತದೆ,ʼʼ ಎಂದು ತಿಳಿಸಿದರು.
ಅವರಲ್ಲೂ ದೈವಭಕ್ತಿ ಇದೆ
ಕುಮಾರಸ್ವಾಮಿ, ಡಿಕೆಶಿ, ಸಿದ್ದರಾಮಯ್ಯ, ದೇವೇಗೌಡ ಅವರಲ್ಲೂ ದೈವಭಕ್ತಿ ಇದೆ. ಅವರು ರಾಮ ಮಂದಿರಕ್ಕೆ ಹೋಗಿ ದರ್ಶನ ಮಾಡೋ ಕಾಲ ದೂರವಿಲ್ಲ. ಮೊನ್ನೆ ಡಿಕೆಶಿ ದಂಪತಿ ಸಮೇತ ಯಾವುದೋ ದೇಗುಲಕ್ಕೆ ಹೋಗಿದ್ದದ್ದು ಸಂತೋಷ. ಮುಸ್ಲಿಂ ಓಟ್ ಬೇಕು ಅಂಥ ಟೀಕೆ ಮಾಡಲಿ, ಆದ್ರೆ ತಾನೊಬ್ಬ ಹಿಂದೂ ಅನ್ನೋ ಮನೋಭಾವನೆ ಇದೆಯಲ್ಲ, ಅಷ್ಟು ಸಾಕು ಎಂದರು.
ಶ್ರದ್ಧಾ ಕೇಂದ್ರಗಳಿಗೆ ಗೌರವ ಸಿಗ್ತಿದೆ
ʻʻಕಾಶಿ, ಮಥುರಾ ಸೇರಿ ದೇಶದಲ್ಲಿ 36 ದೇವಸ್ಥಾನಗಳು ಧ್ವಂಸ ಆಗಿರುವ ವಿಷಯ ಬೆಳಕಿಗೆ ಬಂದಿದೆ. ಕಾಶಿ, ಮಥುರಾ ಮಸೀದಿಗಳು ಕೂಡ ನಮ್ಮ ವಶವಾಗುತ್ತವೆ. ಕಾಶಿ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಇದ್ದದ್ದು ಬಹಿರಂಗವಾಗಿದೆ. ಮಸೀದಿಯಲ್ಲಿ ಯಾರಾದರೂ ಈಶ್ವರ, ಗಣಪತಿ, ಗೌರಿ ಇಟ್ಟುಕೊಳ್ಳುತ್ತಾರಾ,ʼʼ ಎಂದ ಅವರು, ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ನಮ್ಮ ಶ್ರದ್ಧಾ ಕೇಂದ್ರಗಳಿಗೆ ಗೌರವ ಸಿಗ್ತಿದೆ, ನಮ್ಮ ಸಂಸ್ಕೃತಿ ಉಳಿಯುತ್ತಿದೆ ಎಂದು ಹೇಳಿದರು.
ಹೈಕಮಾಂಡ್ ತೀರ್ಮಾನಕ್ಕೆ ವಿಜಯೇಂದ್ರ ಬದ್ಧ
ಬಿ.ವೈ.ವಿಜಯೇಂದ್ರಗೆ ಎಂಎಲ್‌ಸಿ ಟಿಕೆಟ್ ತಪ್ಪಿದ ವಿಚಾರದ ಬಗ್ಗೆ ವರದಿಗಾಗರು ಪ್ರಶ್ನೆ ಕೇಳುತ್ತಲೇ ಗರಂ ಆದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ , ಯಾಕೆ ಅದೊಂದನ್ನೇ ಕೇಳುತ್ತೀರಿ, ಹಲವು ಜನರು ಟಿಕೆಟ್ ತಪ್ಪಿದವರು ಇದ್ದಾರೆ. ಯಡಿಯೂರಪ್ಪ, ವಿಜಯೇಂದ್ರ ಕೇಂದ್ರ ನಾಯಕರ ತೀರ್ಮಾನಕ್ಕೆ ಬದ್ಧ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. 20-30 ವರ್ಷಗಳಿಂದ ಹಲವರು ಪಕ್ಷಕ್ಕಾಗಿ ಶ್ರಮಿಸುತ್ತಿದ್ದಾರೆ, ಅವರೆಲ್ಲಾ ಸುಮ್ಮನಿದ್ದಾರೆ. ನಿಮಗೂ ರಾಜಕೀಯ ಮಾಡುವ ಚಟ ಎಂದು ಮಾಧ್ಯಮದವರ ಬಗ್ಗೆ ಹಾಸ್ಯ ಮಿಶ್ರಿತವಾಗಿ ಹೇಳಿದರು.
ಕಳಂಕ ಇಲ್ಲದೆ ಹೊರ ಬರುತ್ತೇನೆ
ʻʻನಾನು ಚಾಮುಂಡಿ ದೇವಸ್ಥಾನ, ಮನೆ ದೇವರು ಚೌಡೇಶ್ವರಿ ದೇಗುಲಕ್ಕೆ ಹೋಗಿ ದರ್ಶನ ಪಡೆದಿದ್ದೇನೆ. ಏನಾದರೂ ತಪ್ಪು ಮಾಡಿದ್ದರೆ ಚೌಡೇಶ್ವರಿ ನನಗೆ ಶಿಕ್ಷೆ ಕೊಡಲಿ. ನಾ ತಪ್ಪು ಮಾಡಿಲ್ಲ ಅಂದ್ರೆ ಶಿಕ್ಷೆಯಿಂದ ಹೊರಬರುವೆ, ಇನ್ನೊಂದು ವಾರ ಹದಿನೈದು ದಿನದಲ್ಲಿ ಇದಕ್ಕೊಂದು ರೂಪ ಬರುತ್ತೆ ಅಂತ ಅನ್ಕೊಂಡಿದ್ದೇನೆ. ಸಚಿವ ಸಂಪುಟ ಸೇರಿಸಿಕೊಳ್ಳೋದು ಬಿಡೋದು ಕೇಂದ್ರ ನಾಯಕರ ತೀರ್ಮಾನ, ಅದಕ್ಕೆ ನಾನು ಬದ್ಧ. ದೇವರ ಮೇಲೆ ನನಗೆ ನಂಬಿಕೆ ಇದೆ. ನಾನು ಯಾವುದೇ ಕಳಂಕ ಇಲ್ಲದೆ ಹೊರ ಬರುತ್ತೇನೆʼʼ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ| ಪಠ್ಯಪುಸ್ತಕ ಕುರಿತು ಪ್ರಶ್ನಿಸಲು ಸಿದ್ದರಾಮಯ್ಯ ಅವರಿಗೆ ನೈತಿಕತೆ ಇಲ್ಲ: ಸಚಿವ ನಾಗೇಶ್