Site icon Vistara News

Dog Love : ಓಡೋಡಿ ಬಂದು ಮೇಕೆ ಮರಿಗೆ ಹಾಲುಣಿಸುವ ಶ್ವಾನ! ಮಾತೃತ್ವಕ್ಕೆ ಮಾರುಹೋದ ಜನ

A dog feeding a goat People who are attracted to motherhood

ದೊಡ್ಡಬಳ್ಳಾಪುರ: ಆ ತಾಯಿ ಶ್ವಾನವು 15ದಿನಗಳ ಹಿಂದಷ್ಟೇ ಮೂರು ಮರಿಗಳಿಗೆ ಜನ್ಮ ನೀಡಿತ್ತು. ಆದರೆ ದುರಾದೃಷ್ಟವಶಾತ್ ಅದರಲ್ಲಿ ಒಂದು ನಾಯಿ ಮರಿ ಅಸುನೀಗಿತ್ತು. ಉಳಿದೆರಡು ನಾಯಿಮರಿಗಳು ತಾಯಿಯಿಂದ ಬೇರ್ಪಟಿತ್ತು. ಕರುಳಿನ ಬಳ್ಳಿಗಳನ್ನು ಕಳೆದುಕೊಂಡ ದುಃಖದಲ್ಲಿ ತಾಯಿ ಶ್ವಾನವಿತ್ತು. ಇದರ ನೋವು ಅರಿತೋ ಏನೋ ವಾರದ ಹಿಂದಷ್ಟೇ ಜನಿಸಿದ ಮೇಕೆ ಮರಿಯೊಂದು ಶ್ವಾನದದೊಂದಿಗೆ ಆತ್ಮೀಯತೆಯನ್ನು ಬೆಳೆಸಿಕೊಂಡಿದೆ. ಎಷ್ಟರ ಮಟ್ಟಿಗೆ ಎಂದರೆ ತನ್ನ ಕಂಡು ಓಡೋಡಿ ಬರುವ ಮೇಕೆ ಮರಿಗೆ ಶ್ವಾನವು ಹಾಲುಣಿಸುತ್ತಿದೆ. ಈ ಅಪರೂಪರದ ಮಾತೃತ್ವಕ್ಕೆ ಜನರು (Dog Love) ಮಾರುಹೋಗಿದ್ದಾರೆ.

ದೊಡ್ಡಬಳ್ಳಾಪುರದ‌ ರಘುನಾಥಪುರದಲ್ಲಿ ಈ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಗ್ರಾಮದ ಕೃಷ್ಣಪ್ರಸಾದ್ ಎಂಬುವವರ‌ ಮನೆಯ ಶ್ವಾನವು ಮೇಕೆ ಮರಿಗೆ ಹಾಲುಣಿಸುತ್ತಿದೆ. ಮೇಕೆ ಮರಿಯು ಜನ್ಮ ನೀಡಿದ ತಾಯಿಗಿಂತ ನಾಯಿ ಜತೆಗೆ ಹೆಚ್ಚು ಒಡನಾಟವನ್ನು ಹೊಂದಿದೆ. ಶ್ವಾನದ ಮೊಲೆಹಾಲು ಕುಡಿಯುವ ಮೇಕೆ ಮರಿಯನ್ನು ನೋಡುವುದೇ ಜನರಿಗೆ ಆಶ್ಚರ್ಯದ ಸಂಗತಿಯಾಗಿದೆ. ಕಳೆದ ಒಂದು ವಾರದಿಂದ ಮೇಕೆಮರಿ ಮತ್ತು ಶ್ವಾನದ ವಾತ್ಸಲ್ಯವು ಮುಂದುವರಿದಿದೆ.

ಅಂದಹಾಗೇ ಕೃಷ್ಣಪ್ರಸಾದ್ ಅವರು ಕಾಶ್ಮೀರದಿಂದ 30ಕ್ಕೂ ಹೆಚ್ಚು ಗಿಡ್ಡ ಮೇಕೆಗಳನ್ನು ತಂದು ಸಾಕುತ್ತಿದ್ದಾರೆ. ಈ ಮೇಕೆಗಳ ಕಾವಲಿಗೆಂದು ಈ ಶ್ವಾನವನ್ನು ಕೃಷ್ಣಪ್ರಸಾದ್‌ ಸಾಕಿದ್ದು, ಕಳೆದ ಎರಡು ವರ್ಷಗಳಿಂದಲ್ಲೂ ಮೇಕೆಗಳನ್ನು ಶ್ವಾನ ಕಾಯುತ್ತಿದೆ. ಹೀಗಿದ್ದಾಗ ವಾರದ ಹಿಂದಷ್ಟೇ ಮೇಕೆಯೊಂದು ಮರಿಗೆ ಜನ್ಮ ನೀಡಿತ್ತು. ಇತ್ತ ಶ್ವಾನವು ಹದಿನೈದು ದಿನಗಳ ಹಿಂದೆ ಮೂರು ಮರಿಗೆ ಜನ್ಮ ನೀಡಿತ್ತು. ಕಾರಣಾಂತರಗಳಿಂದ ಒಂದು ಶ್ವಾನ ಸತ್ತು, ಎರಡು ಮರಿ ಮಾತ್ರ ಉಳಿದುಕೊಂಡಿದ್ದವು. ಎರಡೂ ನಾಯಿ ಮರಿಗಳು ಮುದ್ದಾಗಿದ್ದ ಕಾರಣಕ್ಕೆ ಯಾರೊ ಸಾಕಲು ತೆಗೆದುಕೊಂಡು ಹೋಗಿದ್ದರು.

ಇದನ್ನೂ ಓದಿ: Video Viral : ಕರುವಿನೊಂದಿಗೆ ಶ್ವಾನಕ್ಕೂ ಹಾಲುಣಿಸುವ ಪುಣ್ಯಕೋಟಿ! ಕೋಟಿ ನಮನವೆಂದ ನೆಟ್ಟಿಗರು

ಶ್ವಾನಕ್ಕೆ ತನ್ನ ಮರಿಗಳಿಲ್ಲ ಎಂಬ ಕೊರಗು ಒಂದು ಕಡೆಯಾದರೆ ಹಾಲುಣಿಸದೆ ಪರದಾಡುತ್ತಿತ್ತು. ಹೀಗಿದ್ದಾಗ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ ಮೇಕೆಮರಿಯು ಶ್ವಾನದೊಂದಿಗೆ ಆತ್ಮೀಯತೆಯನ್ನು ಬೆಳೆಸಿಕೊಂಡಿದೆ. ಮಾತ್ರವಲ್ಲ ಕರುಳಿನ ಸಂಬಂಧವಿಲ್ಲದ ಮೇಕೆ‌‌ ಮರಿಗೆ ಶ್ವಾನವು ಹಾಲುಣಿಸುತ್ತಿದೆ. ಶ್ವಾನದ ಈ ಅಪರೂಪದ ತಾಯಿ ವಾತ್ಸಲ್ಯಕ್ಕೆ ಜನರು ಅಚ್ಚರಿಗೊಂಡು ಸಂತಸವನ್ನು ಪಡುತ್ತಿದ್ದಾರೆ. ಸದ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ರಘುನಾಥಪುರ ಸೇರಿ ಸುತ್ತಮುತ್ತಲ್ಲ ಜನರಿಗೆ ಈ ತಾಯಿ-ಮಗುವಿನ ಪ್ರೀತಿಯನ್ನು ಕಣ್ತುಂಬಿಕೊಳ್ಳುವುದೇ ಕಾಯಕವಾಗಿದೆ.

ನಿಯತ್ತಿನ ನಾಯಿ

ಇನ್ನು ಈ ತಾಯಿ ಶ್ವಾನವೂ ಬಹಳ ನಿಯತ್ತನ್ನು ಹೊಂದಿದೆ. ದೊಡ್ಡಿಯಲ್ಲಿರುವ ಮೇಕೆಗಳ ಕಾವಲು ಕಾಯುತ್ತದೆ. ಯಾರೇ ಅಪರಿಚಿತರು ಬಂದರೂ ಮೇಕೆಗಳನ್ನು ಮುಟ್ಟಲು ಬಿಡುವುದಿಲ್ಲ. ಅವುಗಳಿಗೆ ಬಾಡಿಗಾರ್ಡ್‌ನಂತೆ ಈ ನಾಯಿ ನಿಂತುಕೊಂಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version