ಬೆಂಗಳೂರು: ಕಣ್ಣು ಕಾಣದ ಕುರುಡು ಶ್ವಾನವು ಅದೊಂದು ದಿನ ಮಾಲೀಕರ ಕಣ್ತಪ್ಪಿಸಿ ಮನೆಯಿಂದ ಹೊರ ಹೋಗಿತ್ತು. ಮನೆ ದಾರಿ ಕಾಣದೆ ಗಲ್ಲಿ ಗಲ್ಲಿಯಲ್ಲಿ ಸುತ್ತುತ್ತಾ ಇತ್ತು. ಇತ್ತ ಪ್ರೀತಿಯ (Dog Love) ಶ್ವಾನಕ್ಕಾಗಿ ಹುಡುಕಾಡಿದರೂ ಸಿಕ್ಕಿರಲಿಲ್ಲ. ಮುದ್ದು ಮಗನ ಕಾಣೆಯಾದ ಸುದ್ದಿ ಕೇಳಿ ಆ ಪೋಷಕರು ವಾರಗಳ ಕಾಲ ಕಣ್ಣೀರು ಹಾಕಿದ್ದರು. ಇವರ ಪ್ರೀತಿಗೆ ಸೋತ ಪೊಲೀಸರು (Bengaluru City Police) ತಮ್ಮ ನಿರಂತರ ಪ್ರಯತ್ನದಿಂದ ಮೂಕ ಜೀವಿಯನ್ನು ಮತ್ತೆ ಪೋಷಕರ ಮಡಿಲು ಸೇರಿಸಿದ್ದಾರೆ.
ಶಿಕ್ಷಣ ತಜ್ಞೆ ರಮ್ಯಾ ಹಾಗೂ ಉದ್ಯಮಿ ಲೋಕೇಶ್ ಚೌದ್ರಿ ಅವರು ಹಸ್ಕಿ ಶ್ವಾನವೊಂದನ್ನು ಸಾಕಿದ್ದರು. ಮನೆಯ ಸದಸ್ಯನಂತಿದ್ದ ಪ್ರೀತಿಯ ಶ್ವಾನಕ್ಕೆ ಮಾಲೀಕರು ರಾಲ್ಫ್ ಎಂದು ಹೆಸರಿಟ್ಟಿದ್ದರು. ಹಸ್ಕಿ ಜಾತಿಯ ಈ ಶ್ವಾನ ರಮ್ಯ ಕುಟುಂಬದ ಮನೆ ಮಗನೇ ಆಗಿತ್ತು. ವಯೋಸಹಜ ಕಾಯಿಲೆಯಿಂದ ರಾಲ್ಫ್‌ಗೆ ಕಣ್ಣು ಕಾಣಿಸುತ್ತಿರಲಿಲ್ಲ. ಹೀಗಾಗಿ 14 ವರ್ಷದ ರಾಲ್ಫ್‌ನನ್ನು ಮಾಲೀಕರು ಮತ್ತಷ್ಟು ಜೋಪಾನವಾಗಿ ನೋಡಿಕೊಳ್ಳುತ್ತಿದ್ದರು.
ಹೀಗಿದ್ದಾಗ ಕಳೆದ ಮಂಗಳವಾರ ರಾಲ್ಫ್ ಇನ್ಫ್ಯಾಂಟ್ರಿ ರಸ್ತೆಯ ಮನೆಯಿಂದ ಕಾಣೆಯಾಗಿತ್ತು. ರಾಲ್ಫ್‌ಗಾಗಿ ಮಾಲೀಕರು ಹುಡುಕಾಡಿದ ಜಾಗವಿಲ್ಲ. ಸಿಕ್ಕ ಸಿಕ್ಕ ಮನೆ ಬಳಿ ಹೋಗಿ ಸಿಸಿ ಟಿವಿಯನ್ನು ತೋರಿಸುವಂತೆ ಅಂಗಲಾಚಿದ್ದರು. ಒಂದಷ್ಟು ಫೋಟೆಜ್‌ನಲ್ಲಿ ಶ್ವಾನವನ್ನು ತೆಗೆದುಕೊಂಡು ಹೋಗುತ್ತಿದ್ದನ್ನು ಕಂಡು ಬಂದಿತ್ತು.
ಇದನ್ನೂ ಓದಿ: Elephant attack : ಚಿಕಿತ್ಸೆಗೆ ಹೋದಾಗ ಅಟ್ಟಾಡಿಸಿದ ಗಾಯಾಳು ಕಾಡಾನೆ; ಅರಣ್ಯ ಸಿಬ್ಬಂದಿ ಸಾವು!
75 ಸಿಸಿಟಿವಿ ಪರಿಶೀಲಿಸಿದ ಪೊಲೀಸರು
ಕಣ್ಣು ಕಾಣದ ಶ್ವಾನಕ್ಕೆ ಯಾರಾದರೂ ಏನಾದರೂ ಮಾಡಿಬಿಟ್ಟರೆ, ಹಸಿವಿನಿಂದ ಒದ್ದಾಡುತ್ತಿರಬಹುದಾ? ಅಥವಾ ಬೀದಿನಾಯಿಗಳು ದಾಳಿ ಮಾಡಿಬಿಟ್ಟರೆ ಎಂದೆಲ್ಲ ಯೋಚಿಸಿ ಕಣ್ಣೀರು ಹಾಕುತ್ತಿದ್ದರು. ಶ್ವಾನಕ್ಕಾಗಿ ಹುಡುಕಾಡಿ ಸುಸ್ತಾದ ರಮ್ಯ ಕುಟುಂಬಸ್ಥರು ಕಡೆಗೆ ಪೊಲೀಸರ ನೆರವು ಪಡೆಯಲು ಮುಂದಾದರು. ಕಮರ್ಷಿಯಲ್ ಸ್ಟ್ರೀಟ್ ಪೊಲೀಸರಿಗೆ ದೂರು ಕೊಟ್ಟಿದ್ದರು.
ಶ್ವಾನ ಮಾಲೀಕರ ಪ್ರೀತಿಗೆ ಮರುಗಿದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಇನ್ಫ್ಯಾಂಟ್ರಿ ರಸ್ತೆ ಸೇರಿ ಸುಮಾರು 75 ಸಿಸಿಟಿವಿ ಚೆಕ್ ಮಾಡಿದ್ದರು. ಈ ವೇಳೆ ಆಟೊವೊಂದನ್ನು ಪತ್ತೆ ಮಾಡಿದ್ದರು. ಆಟೋ ನಂಬರ್ ಮೂಲಕ ಚಾಲಕನ ಪತ್ತೆ ಹಚ್ಚಿದ್ದರು. ರಸ್ತೆ ಬದಿಯಲ್ಲಿದ್ದ ಹಸ್ಕಿ ನೋಡಿ ಆಟೋ ಚಾಲಕ ಶ್ವಾನವನ್ನು ತೆಗೆದುಕೊಂಡು ಹೋಗಿದ್ದ. ಶ್ವಾನಕ್ಕೆ ವಯಸ್ಸಾಗಿದೆ, ಕಣ್ಣು ಕಾಣಲ್ಲ ಎಂದು ತಿಳಿದಾಗ ಬ್ರೀಡಿಂಗ್ ಮಾಡುವವರಿಗೆ ಮಾರಾಟ ಮಾಡಿದ್ದ.
ಆಟೋ ಚಾಲಕ ಕಾವಲ್ ಭೈರಸಂದ್ರದ ನಿವಾಸಿಗೆ ಮಾರಾಟ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ. ರಾಲ್ಫ್ ಇದ್ದ ಮನೆ ಹುಡುಕುತ್ತಾ ಹೊರಟ ಪೊಲೀಸರು ಕಾವಲ್ ಬೈರಸಂದ್ರದ ಗಲ್ಲಿ ಗಲ್ಲಿಯಲ್ಲಿ ಹುಡುಕಾಡಿ ಶ್ವಾನ ಪತ್ತೆ ಹಚ್ಚಿ, ಪೋಷಕರ ಮಡಿಲು ಸೇರಿಸಿದ್ದಾರೆ. ಪೊಲೀಸರ ಈ ಕಾರ್ಯ ವೈಖರಿ ಹಾಗೂ ಮಾತೃ ಹೃದಯಕ್ಕೆ ಶ್ವಾನದ ಪೋಷಕರು ಧನ್ಯವಾದ ಅರ್ಪಿಸಿದ್ದಾರೆ. ಇತ್ತ ಮಾಲೀಕರ ಧ್ವನಿಯನ್ನು ಕೇಳಿದ್ದೆ ತಡ ಮನೆಯೊಳಗೆ ಇದ್ದ ರಾಲ್ಫ್ ಓಡೋಡಿ ಬಂದಿತ್ತು. ಶ್ವಾನ ಕಂಡೊಡನೆ ಭಾವುಕರಾಗಿ ರಮ್ಯ ರಾಲ್ಫ್‌ನನ್ನು ತಬ್ಬಿಕೊಂಡು ಮುದ್ದಾಡಿದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ