ಬೆಂಗಳೂರು: ಕೌಟುಂಬಿಕ ದೌರ್ಜನ್ಯಕ್ಕೆ (Domestic violence) ಒಳಗಾದ ಮಹಿಳೆ ಕೌಟುಂಬಿಕ ದೌರ್ಜನ್ಯ ಕಾಯಿದೆ ಮತ್ತು ವಿಚ್ಛೇದನಾ ಕಾಯಿದೆ ಎರಡರಡಿಯೂ ಜೀವನಾಂಶ ಪಡೆಯಲು ಅರ್ಹತೆ ಹೊಂದಿರುತ್ತಾರೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಹಿಳೆಯೊಬ್ಬರು ಮೊದಲು ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆಯಡಿ ೨೦,೦೦೦ ರೂ. ಮಾಸಾಶನ ಪಡೆದಿದ್ದರೆ, ಬಳಿಕ ವಿಚ್ಛೇದನದ ವೇಳೆ ತಿಂಗಳಿಗೆ ೩೦,೦೦೦ ರೂ. ಜೀವನಾಂಶಕ್ಕೆ ಆದೇಶಿಸಲಾಗಿತ್ತು. ಈಗಾಗಲೇ ಒಂದು ಕಾಯಿದೆಯಡಿ ಪರಿಹಾರ ನೀಡುತ್ತಿರುವುದರಿಂದ ಮತ್ತೊಂದು ಕಾಯಿದೆಯಡಿ ಪರಿಹಾರ ನೀಡಲಾಗದು ಎಂಬ ಪ್ರತಿವಾದಿಗಳ ವಾದವನ್ನು ಕೋರ್ಟ್ ಒಪ್ಪಿಲ್ಲ.
ಏನಿದು ಪ್ರಕರಣ?
ಹಿಂದೂ ವಿವಾಹ ಕಾಯಿದೆ ಸೆಕ್ಷನ್ 24ರ ಅಡಿ ಕೌಟುಂಬಿಕ ನ್ಯಾಯಾಲಯವು ಮಧ್ಯಂತರ ಜೀವನಾಂಶದ ಭಾಗವಾಗಿ 30 ಸಾವಿರ ರೂಪಾಯಿ ನೀಡಲು ಆದೇಶಿಸಿದ್ದನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ. ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯಿದೆ ಸೆಕ್ಷನ್ 125ರ ಅಡಿ ಪತ್ನಿಗೆ ಈಗಾಗಲೇ 20 ಸಾವಿರ ರೂಪಾಯಿ ಜೀವನಾಂಶ ನೀಡಲಾಗುತ್ತಿದೆ ಎಂದು ಪತಿಯು ವಾದಿಸಿದ್ದರು. ಇದನ್ನು ಪೀಠ ಪುರಸ್ಕರಿಸಿಲ್ಲ.
“ಸಿಆರ್‌ಪಿಸಿ ಸೆಕ್ಷನ್ 125ರ ಜೊತೆಗೆ ಹೆಚ್ಚುವರಿಯಾಗಿ ಕೌಟುಂಬಿಕ ದೌರ್ಜನ್ಯ ನಿಷೇಧ ಕಾಯಿದೆಯ ಸೆಕ್ಷನ್ 20(1)(ಡಿ)ರ ಅಡಿ ಜೀವನಾಂಶ ನೀಡಬಹುದಾಗಿದೆ ಎಂದು ರಜ್ನೀಶ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಕೌಟುಂಬಿಕ ದೌರ್ಜನ್ಯ ನಿಷೇಧ ಕಾಯಿದೆ ಮತ್ತು ಸಿಆರ್‌ಪಿಸಿ ಸೆಕ್ಷನ್ 125 ಅಥವಾ ಹಿಂದೂ ವಿವಾಹ ಕಾಯಿದೆ ಅಥವಾ ಹಿಂದೂ ದತ್ತು ಮತ್ತು ನಿರ್ವಹಣಾ ಕಾಯಿದೆ ಅಡಿ ಜೀವನಾಂಶ ಕೋರಲು ಯಾವುದೇ ನಿರ್ಬಂಧವಿಲ್ಲ” ಎಂದು ಪೀಠವು ಆದೇಶಿಸಿದೆ.
ವಿಚ್ಚೇದನ ಪ್ರಕ್ರಿಯೆ ಆರಂಭಿಸಿದ ಬಳಿಕ ಕಿರುಕುಳ ನೀಡುವ ಉದ್ದೇಶದಿಂದ ಪತ್ನಿಯು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವಾದವನ್ನು ಒಪ್ಪಲು ನಿರಾಕರಿಸಿರುವ ಪೀಠವು ವಿಚಾರಣೆಯ ಹಂತದಲ್ಲಿ ಇದು ಸಾಕ್ಷ್ಯ ವಿಚಾರವಾಗಿದೆ ಎಂದಿದೆ.
“ಅರ್ಜಿದಾರರು ಕೆಲಸ ಮಾಡುತ್ತಿರುವುದು ಆಕ್ಷೇಪಾರ್ಹ ಆದೇಶದಲ್ಲಿ ಉಲ್ಲೇಖವಾಗಿದ್ದು, ಹೀಗಾಗಿ ಪತ್ನಿಗೆ ಮಧ್ಯಂತರ ಪರಿಹಾರ ನೀಡುವ ಮೂಲಕ ಅವರನ್ನು ನಿರ್ವಹಣೆ ಮಾಡುವುದು ಅಗತ್ಯವಾಗಿದೆ” ಎಂದು ಅಂಜು ಗರ್ಗ್ ಮತ್ತು ಇತರರು ವರ್ಸಸ್ ದೀಪಕ್ ಕುಮಾರ್ ಗರ್ಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ನ್ಯಾಯಾಲಯ ಉಲ್ಲೇಖಿಸಿದೆ.
ಆರಂಭದಿಂದ ಏನೇನಾಯಿತು?
ಅವರಿಬ್ಬರ ವಿವಾಹ 2018ರ ಡಿಸೆಂಬರ್‌ನಲ್ಲಿ ಮದುವೆಯಾಗಿತ್ತು. ಆದರೆ, ತನಗೆ ಹಿಂಸೆ ನೀಡಲಾಗುತ್ತಿದೆ ಎಂದು ಮಹಿಳೆ 2020ರ ಡಿಸೆಂಬರ್‌ನಲ್ಲಿ ಪ್ರಕರಣ ದಾಖಲಿಸಿದ್ದರು. 2021ರ ಫೆಬ್ರವರಿಯಲ್ಲಿ ಕೌಟುಂಬಿಕ ದೌರ್ಜನ್ಯ ಕಾಯಿದೆ ಸೆಕ್ಷನ್ 12ರ ಅಡಿ ಜೀವನಾಂಶ ಕೋರಿ ಮೂಡಬಿದರೆಯ ಅಧೀನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿ ನ್ಯಾಯಾಲಯವು ಪ್ರತಿ ತಿಂಗಳು 20 ಸಾವಿರ ರೂಪಾಯಿ ಪಾವತಿಸುವಂತೆ ಆದೇಶಿಸಿತ್ತು. ತಮ್ಮನ್ನು ಆಲಿಸದೇ ಜೀವನಾಂಶ ನಿಗದಿಪಡಿಸಲಾಗಿದೆ ಎಂದು ಆಕ್ಷೇಪಿಸಿ ಅರ್ಜಿದಾರ ಮಂಗಳೂರು ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆ ನ್ಯಾಯಾಲಯವು ಅರ್ಜಿ ವಜಾ ಮಾಡಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. 2022ರ ಫೆಬ್ರವರಿ 1ರಂದು ಹೈಕೋರ್ಟ್ ಎಲ್ಲಾ ಪ್ರಕ್ರಿಯೆಗೆ ತಡೆ ನೀಡಿತ್ತು.
ಈ ಮಧ್ಯೆ, ಅರ್ಜಿದಾರ ಹಿಂದೂ ವಿವಾಹ ಕಾಯಿದೆ ಸೆಕ್ಷನ್ 13(1)(ಐ-ಎ)ಅಡಿ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ಮುಂದೆ ಹಾಜರಾಗಿದ್ದ ಪತ್ನಿಯು ಶಾಶ್ವತ ಜೀವನಾಂಶ ಕೋರಿದ್ದರು. ಹಿಂದೂ ವಿವಾಹ ಕಾಯಿದೆ ಸೆಕ್ಷನ್ 24ರ ಅಡಿ ಅರ್ಜಿಯನ್ನು ಮಾನ್ಯ ಮಾಡಿದ್ದ ಅಧೀನ ನ್ಯಾಯಾಲಯವು ಮಾಸಿಕ 30,000 ರೂಪಾಯಿ ಜೀವನಾಂಶ ನೀಡುವ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಹಾಲಿ ಅರ್ಜಿಯ ಮೂಲಕ ಹೈಕೋರ್ಟ್ ಕದ ತಟ್ಟಿದ್ದರು. ಈಗ ಹೈಕೋರ್ಟ್ ಮಹಿಳೆಯ ವಾದವನ್ನು ಎತ್ತಿಹಿಡಿದಿದೆ.
ಇದನ್ನೂ ಓದಿ | Adoption act | ಗರ್ಭದಲ್ಲಿರುವಾಗಲೇ ಮಗು ದತ್ತು ಕೊಡುವಂತಿಲ್ಲ, ಇಸ್ಲಾಂನಲ್ಲಿ ದತ್ತು ಸ್ವೀಕಾರಕ್ಕೆ ಮಾನ್ಯತೆ ಇಲ್ಲ!