ಶಿರಸಿ: ರಾಜ್ಯ ವಿಧಾನಸಭಾ ಚುನಾವಣೆ(Karnataka Election 2023) ಹಿನ್ನೆಲೆಯಲ್ಲಿ ಜನರು ಹಬ್ಬದಂತೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ತಾವೂ ಮತ ಹಾಕಿ, ಬೇರೆಯವರಿಗೂ ಮತದಾನ ಮಾಡಿ ಎಂದು ಸ್ವಯಂಪ್ರೇರಿತರಾಗಿ ಹೇಳುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಬುಧವಾರ (ಮೇ 10) ಮತದಾನ ಪ್ರಕ್ರಿಯೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಮಠಾಧೀಶರಾದಿಯಾಗಿ ಯುವಕರು, ವಯೋವೃದ್ಧರೆಲ್ಲರೂ ಮತ ಚಲಾವಣೆ ಮಾಡುತ್ತಿದ್ದಾರೆ. ಇದೀಗ ಜೀವಜಲ ಕಾರ್ಯಪಡೆ ಅಧ್ಯಕ್ಷ, ವಿಸ್ತಾರ ನ್ಯೂಸ್ ನಿರ್ದೇಶಕರಾದ ಶ್ರೀನಿವಾಸ್ ಹೆಬ್ಬಾರ್ ಅವರು ತಮ್ಮ ಕುಟುಂಬಸ್ಥರೊಂದಿಗೆ ಆಗಮಿಸಿ ಶಿರಸಿಯಲ್ಲಿ ಮತದಾನ ಮಾಡಿದ್ದಾರೆ.
ಶಿರಸಿಯ ಯಲ್ಲಾಪುರ ನಾಖೆ ಬಳಿಯ ಸರ್ಕಾರಿ ಶಾಲೆಗೆ ಪತ್ನಿ ಹಾಗೂ ಪುತ್ರಿಯೊಂದಿಗೆ ಆಗಮಿಸಿದ ಶ್ರೀನಿವಾಸ್ ಹೆಬ್ಬಾರ್ ಅವರು, ಹಕ್ಕು ಚಲಾವಣೆ ಮಾಡಿದರು. ಅಲ್ಲದೆ, ಎಲ್ಲರೂ ತಪ್ಪದೇ ಮತದಾನ ಮಾಡುವ ಮೂಲಕ ನಮ್ಮ ಸಾಂವಿಧಾನಿಕ ಹಕ್ಕನ್ನು ಚಲಾವಣೆ ಮಾಡಬೇಕು. ಆ ಮೂಲಕ ಸೂಕ್ತ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಕರೆ ಕೊಟ್ಟಿದ್ದಾರೆ.
ಆಮಿಷಗಳಿಗೆ ಒಳಗಾಗಬೇಡಿ
ಮತದಾನ ಪ್ರತಿಯೊಬ್ಬರ ಹಕ್ಕು. ಯಾರೂ ಸಹ ಆಮಿಷಗಳಿಗೆ ಒಳಗಾಗಬಾರದು. ಸಂವಿಧಾನ ನಮಗೆ ಒಂದು ಉತ್ತಮ ವೇದಿಕೆಯನ್ನು ನೀಡಿದೆ. ಅಲ್ಲದೆ, ನಮ್ಮನ್ನು ಆಳುವವರು ಯಾರಾಗಬೇಕು ಎಂದು ನಿರ್ಧಾರ ಮಾಡುವವರೂ ನಾವಾಗಿದ್ದೇವೆ. ಮತ ಚಲಾವಣೆಯ ಹಕ್ಕು ನಮ್ಮಲಿಯೇ ಇದೆ. ಹಾಗಾಗಿ ಯಾರೂ ಸಹ ಆಸೆ- ಆಮಿಷಗಳಿಗೆ ಒಳಗಾಗದೆ ತಮ್ಮ ಹಕ್ಕನ್ನು ಚಲಾವಣೆ ಮಾಡುವ ಮೂಲಕ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಶ್ರೀನಿವಾಸ ಹೆಬ್ಬಾರ್ ಅವರು ಮನವಿ ಮಾಡಿದ್ದಾರೆ.
ಮತ ಚಲಾಯಿಸಿದ ಸೋಂದಾ ಸ್ವರ್ಣವಲ್ಲೀ ಶ್ರೀ
ಶಿರಸಿ ವಿಧಾನಸಭಾ ಕ್ಷೇತ್ರದ ಸೋಂದಾದ ಖಾಸಾಪಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದ ಸ್ವರ್ಣವಲ್ಲೀ ಸೋಂದಾ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, “ಪ್ರತಿಯೊಬ್ಬ ಮತದಾರರು ಕೂಡ ಮತದಾನದಲ್ಲಿ ಪಾಲ್ಗೊಳ್ಳಬೇಕು. ಮತದಾನ ಮಾಡುವುದು ದೇವರ ಕೆಲಸವಿದ್ದಂತೆ. ಬೇರೆ ರಾಜ್ಯದಲ್ಲಿ ಶೇ.50ರಷ್ಟು ಮತದಾನವಾಗುತ್ತದೆ ಎಂದು ಕೇಳಿದ್ದೇವೆ. ಆದರೆ, ರಾಜ್ಯದಲ್ಲಿ ಅಷ್ಟು ಕಡಿಮೆ ಮತದಾನವಾಗುವುದಿಲ್ಲ. ಈ ಭಾರಿ ಹೆಚ್ಚು ಮತದಾನವಾಗುವ ನಿರೀಕ್ಷೆ ಇದೆ” ಎಂದು ಹೇಳಿದರು.
ಇದನ್ನೂ ಓದಿ: Karnataka Election 2023: ಪಕ್ಷದ ಬಾವುಟದೊಂದಿಗೆ ಮತಗಟ್ಟೆಗೆ ಬಂದ ಬಿಜೆಪಿ ಅಭ್ಯರ್ಥಿ, ಕಾಂಗ್ರೆಸ್ ಮುಖಂಡರ ಆಕ್ಷೇಪ
ರಾಜ್ಯಭಾರ ನಡೆಸುವುದು ಕೂಡ ದೇವರ ಕೆಲಸ. ಪ್ರಜಾಪ್ರಭುತ್ವದಲ್ಲಿ ಸೂಕ್ತ ವ್ಯಕ್ತಿಯ ಆಯ್ಕೆ ಹಾಗೂ ಸರ್ಕಾರವನ್ನು ರಚನೆ ಮಾಡುವ ಅಧಿಕಾರವು ಮತದಾರರ ಕೈಯಲ್ಲಿದೆ. ಎಲ್ಲರಿಗೂ ಒಪ್ಪುವ ಸರ್ಕಾರ ಬರಬೇಕಾದರೆ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಹೇಳಿದರು.