ಶಿವಮೊಗ್ಗ: ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು, ಸರ್ಕಾರಿ ಶಾಲೆ ಜಾಗ ಮಾರಬಾರದು. ಮಂತ್ರಿಯವರೇ, ಅದೆಲ್ಲ ನಿಮ್ಮ ಕೈಯಲ್ಲಿದೆ ಎಂದು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಸಹೋದರ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಸುಜಾತ ತಿಲಕ್ ಕುಮಾರ್ ಮನವಿ ಮಾಡಿದ್ದಾರೆ.
ಸಚಿವರಾದ ಬಳಿಕ ಸ್ವಕ್ಷೇತ್ರ ಸೊರಬಕ್ಕೆ ಪ್ರಥಮ ಬಾರಿಗೆ ಮಧು ಬಂಗಾರಪ್ಪ ಭಾನುವಾರ ಆಗಮಿಸಿದ್ದರು. ಅವರಿಗೆ ಕಾರ್ಯಕರ್ತರಿಂದ ಭರ್ಜರಿ ಸ್ವಾಗತ ದೊರಕಿತು. ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಮಧು ಬಂಗಾರಪ್ಪ ರೋಡ್ ಶೋ ನಡೆಸಿ, ಚುನಾವಣೆಯಲ್ಲಿ ಗೆಲ್ಲಿಸಿದ್ದಕ್ಕೆ ಕ್ಷೇತ್ರದ ಜನತೆಗೆ ಧನ್ಯವಾದ ತಿಳಿಸಿದರು. ನಂತರ ತಾಲೂಕು ಕಚೇರಿ ಆವರಣದಲ್ಲಿ ಕಾಂಗ್ರೆಸ್ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಪತ್ನಿ ಅನಿತಾ, ಪುತ್ರ ಸೂರ್ಯ, ಸಹೋದರಿಯರಾದ ಗೀತಾ ಶಿವರಾಜ್ ಕುಮಾರ್, ಸುಜಾತಾ ತಿಲಕ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.
ಈ ವೇಳೆ ಮಧು ಬಂಗಾರಪ್ಪ ಸಹೋದರಿ ತಿಲಕ್ ಕುಮಾರ್ ಮಾತನಾಡಿದ್ದು, ನನ್ನ ಸಹೋದರ ಶಾಸಕರಾಗಿ ಸಚಿವರಾಗಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗಬೇಕು. ಆದು ಒಂದೆರಡು ದಿನದಲ್ಲಿ ಆಗುವ ಕೆಲಸ ಸಮಯ ಬೇಕು, ಅವರೀಗ ಸಚಿವರಾಗಿ ಜನರ ಕೆಲಸ ಮಾಡಬೇಕು. ಕ್ಷೇತ್ರದ ಜನರೂ ಅವರಿಂದ ಕೆಲಸ ಮಾಡಿಸಿಕೊಳ್ಳಲಿ ಎಂದು ಹೇಳುತ್ತಾ, ಯಾವುದೇ ಕಾರಣಕ್ಕೆ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು. ಶಾಲೆಗಳ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಧು ಬಂಗಾರಪ್ಪ ಅವರನ್ನು ಕೋರಿದರು.
ಇದನ್ನೂ ಓದಿ | Cow slaughter: ಗೋಹತ್ಯೆ ಹೇಳಿಕೆ ನೀಡಿದ್ದು ಖಾತೆ ಬದಲಾವಣೆಗಾಗಿ: ಸಚಿವ ಕೆ. ವೆಂಕಟೇಶ್ ಕುರಿತು ಮಾಜಿ ಸಿಎಂ ಹೇಳಿದ್ದೇನು?
ಗೀತಾ ಶಿವರಾಜ್ ಕುಮಾರ್ ಮಾತನಾಡಿ, ನನ್ನ ಸಹೋದರ ಮಧು ಬಂಗಾರಪ್ಪ ಮಂತ್ರಿಯಾಗಿದ್ದಾರೆ. ಅವರ ಜವಾಬ್ದಾರಿ ಹೆಚ್ಚಾಗಿದೆ. ನಾನೂ ಅವರ ಜತೆ ನಿಂತು ಕೆಲಸ ಮಾಡುತ್ತೇನೆ. ಮಧು ಗೆದ್ದ ಬಳಿಕ ಹಾಡು ಹೇಳಿ, ಡಾನ್ಸ್ ಮಾಡುವುದಾಗಿ ಶಿವರಾಜ್ ಕುಮಾರ್ ಹೇಳಿದ್ದರು. ಹೀಗಾಗಿ ಸೊರಬದಲ್ಲಿ ಮ್ಯೂಸಿಕಲ್ ನೈಟ್ ನಡೆಸಿಕೊಡುತ್ತೇನೆ ಎಂದು ತಿಳಿಸಿರುವುದಾಗಿ ಹೇಳಿದರು. ನನ್ನ ಸಹೋದರ ಮಧು ಸಚಿವನಾಗಿ ಒಳ್ಳೆ ಕೆಲಸ ಮಾಡುತ್ತಾರೆ. ತಂದೆ ಸ್ಥಾನದಲ್ಲಿ ನೀವೆಲ್ಲ ಇದ್ದೀರಿ, ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಇದು ನನಗೆ ಕೊಡುವ ಅಭಿನಂದನೆಯಲ್ಲ, ನಿಮಗೆ ಕೊಡುವ ಅಭಿನಂದನೆ. ನಾನು ಶಾಸಕ, ಸಚಿವನಾಗಬೇಕು ಎಂಬುವುದು ತಂದೆ- ತಾಯಿ ಕನಸಾಗಿತ್ತು. ಅವರಿಂದು ಇಲ್ಲ, ಆದರೆ ಅವರ ಸ್ಥಾನದಲ್ಲಿದ್ದು ನೀವು ಕನಸು ನನಸು ಮಾಡಿದ್ದೀರಿ. ದೇವರನ್ನು ನಾನು ನೋಡಿಲ್ಲ, ತಂದೆ ತಾಯಿ ಕಳೆದುಕೊಂಡೆ. ನನಗೆ ತಂದೆ-ತಾಯಿ ಸ್ಥಾನ ತುಂಬಿದ್ದು ನೀವು. 6 ತಿಂಗಳ ಹಿಂದೆ ಚುನಾವಣೆ ಪ್ರಚಾರ ಆರಂಭಿಸಿದೆವು. ಎಲ್ಲ ಪಕ್ಷಗಳ ಮುಖಂಡರು ಇಂದು ಒಂದಾಗಿದ್ದಾರೆ ಎಂದು ಭಾವುಕರಾದರು.
ನನ್ನ ಹೆಂಡತಿ ನಿಮ್ಮ ಮನೆ ಬಾಗಿಲಿಗೆ ಬಂದರು. ನನ್ನ ತಂದೆ ಯಾವತ್ತೂ ಮನೆಯ ಹೆಣ್ಣು ಮಕ್ಕಳನ್ನು ರಾಜಕೀಯಕ್ಕೆ ಕಳುಹಿಸರಿರಲಿಲ್ಲ. ಸುಜಾತಕ್ಕ, ಗೀತಕ್ಜ ಎಲ್ಲರೂ ಪ್ರಚಾರ ಮಾಡಿದರು ಎಂದು ಸ್ಮರಿಸಿದ ಅವರು, ಗ್ಯಾರಂಟಿ ಯೋಜನೆ ಕೊಟ್ಟಿರುವುದು ಶೋಕಿಗಲ್ಲ. ಜಿಎಸ್ಟಿ, ಗ್ಯಾಸ್, ಬೆಲೆ ಏರಿಕೆ ಎಂದು ಹೇಳಿಕೊಂಡೇ ನಾವು ಗೆದ್ದಿರುವುದು. ಅದಕ್ಕೆ ಪರಿಹಾರಾರ್ಥವೇ ಈ ಗ್ಯಾರಂಟಿ ಕಾರ್ಡ್. ರಾಜ್ಯಮಟ್ಟದಲ್ಲಿ ಆದಾಯ ಬರುವುದರಿಂದ ಗ್ಯಾರಂಟಿ ಯೋಜನೆ ಯಶಸ್ವಿ ಆಗುತ್ತದೆ ಎಂದು ಹೇಳಿದರು.
ಸೊರಬ ಭಾಗದಲ್ಲಿ ಬಗರಹುಕುಂ ಬಹು ದೊಡ್ಡ ಸಮಸ್ಯೆಯಾಗಿದೆ. ಅರಣ್ಯ ಭೂಮಿಯಲ್ಲಿ ಸಾಗುವಳಿ, ಮನೆ ಕಟ್ಟಿಕೊಂಡವರ ರಕ್ಷಣೆ ಆಗಬೇಕಿದೆ. ಕೇಂದ್ರದ ಸಹಕಾರ ಪಡೆದು ಆ ಕೆಲಸ ಮಾಡುತ್ತೇವೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅದ್ಭುತ ಕೆಲಸ ಮಾಡಿದ್ದರು. ಬೇರೆ ಸರ್ಕಾರ ಬಂದ ನಂತರ ಅದೆಲ್ಲ ಹಾಳಾಗಿತ್ತು. ಈಗ ಅಧಿಕಾರಿ ವರ್ಗದ ಜತೆ ಮಾತಾಡಿದ್ದೇವೆ. ಅರಣ್ಯ ಸಚಿವರಿಗೆ ವಿನಂತಿ ಮಾಡಿದ್ದೇವೆ. ಇಲ್ಲಿನ ಸಮಸ್ಯೆ ತ್ವರಿತವಾಗಿ ಇತ್ಯರ್ಥ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ | bamul: ಹೇಳ್ದೇ ಕೇಳ್ದೇ ನಿರ್ಧಾರ ಮಾಡಿದ್ರೆ ಸರಿ ಇರೋಲ್ಲ: ಹಾಲಿನ ಸಬ್ಸಿಡಿ ಇಳಿಸಿದ ಬಮುಲ್‌ಗೆ ಸಿದ್ದರಾಮಯ್ಯ ವಾರ್ನಿಂಗ್
ಏತ ನೀರಾವರಿ ಯೋಜನೆ ಉದ್ಘಾಟನೆ ಆಗಿಲ್ಲ, ಉದ್ಘಾಟನೆ ಆಗಿದ್ದರೆ ಈ ಬೇಸಿಗೆಗೆ ನೀರಿನ ಸಮಸ್ಯೆ ಆಗುತ್ತಿರಲಿಲ್ಲ. ಕೆರೆಕಟ್ಟೆಗಳು ಬತ್ತಿ ಹೋಗಿವೆ. ಸಂಜೆ ಅಧಿಕಾರಿಗಳ ಪರಿಶೀಲನಾ ಸಭೆ ಇಟ್ಟು ಕೊಂಡಿದ್ದೇನೆ. ಅದರ ಬಗ್ಗೆ ಚರ್ಚೆ ಮಾಡುತ್ತೇ ಎಂದು ತಿಳಿಸಿದರು.