Site icon Vistara News

Karnataka Bandh: ಬರಿದಾಗುತ್ತಿರುವ ಕಾವೇರಿಗಾಗಿ ಹೋರಾಟ ಮಾಡಬೇಡಿ ಅಂದ್ರು ಸದ್ಗುರು ಜಗ್ಗಿ ವಾಸುದೇವ!

sadguru Jaggi Vasudev

ಬೆಂಗಳೂರು, ಕರ್ನಾಟಕ: ತಮಿಳುನಾಡಿಗೆ (Tamil Nadu) ಕಾವೇರಿ ನೀರು ಹರಿಸುವುದನ್ನು (Cauvery Water) ವಿರೋಧಿಸಿ ಕರ್ನಾಟಕದ ರೈತರು, ಕನ್ನಡಿಗರು ಬಂದ್ (Karnataka Bandh) ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದರೆ, ಇಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ (Sadguru Jaggi Vasudev) ಅವರು, ”ಬರಿದಾಗುತ್ತಿರುವ ನೀರಿನ ವಿಚಾರದಲ್ಲಿ ಹೋರಾಟ ಮಾಡ ಬೇಡಿ,” ಎಂದು ಕರೆ ನೀಡಿದ್ದಾರೆ. ಈ ಹಿಂದೆ ಸದ್ಗುರು ಜಗ್ಗಿ ವಾಸುದೇವ ಅವರು ‘ಕಾವೇರಿ ಕಾಲಿಂಗ್’ (Cauvery Calling) ಚಳವಳಿ ನಡೆಸಿದ್ದರು. ”ಬರಿದಾಗುತ್ತಿರುವ ನೀರಿನ ವಿಚಾರದಲ್ಲಿ ಹೋರಾಟ ಮಾಡುವ ಬದಲು ಕಾವೇರಿ ನದಿಯನ್ನು ಬಲಪಡಿಸಿ, ಬಲಪಡಿಸಬೇಕು. ಕಾವೇರಿ ಮಾತೆ (Mother Cauvery) ನಾವು ಯಾವ ರಾಜ್ಯಕ್ಕೆ ಸೇರಿದವರು ಎಂದು ತಿಳಿದಿಲ್ಲ. ಆದರೆ ಬೇಸಿಗೆಯ ತಿಂಗಳುಗಳಲ್ಲಿ ಅವಳು ಬಸವಳಿಯುತ್ತಿದ್ದಾಳೆ,” ಎಂದು ಜಗ್ಗಿ ವಾಸುದೇವ ಅವರು ಹೇಳಿದ್ದಾರೆ.

ದೊಡ್ಡ ಪ್ರಮಾಣದಲ್ಲಿ ಮರಗಳ ಆಧಾರಿತ ಕೃಷಿಯನ್ನು ಜಾರಿಗೆ ತರುವುದು ಮತ್ತು 83,000 ಚದರ ಕಿಲೋಮೀಟರ್ ಕಾವೇರಿ ಜಲಾನಯನ ಪ್ರದೇಶದಲ್ಲಿ ಗಿಡ ಮರಗಳನ್ನು ಬೆಳೆಸುವುದೊಂದೇ ಕಾವೇರಿ ವರ್ಷಪೂರ್ತಿ ಸಮೃದ್ಧವಾಗಿ ಹರಿಯುವಂತೆ ಮಾಡುವ ಮಾರ್ಗವಾಗಿದೆ ಎಂದು ಸದ್ಗುರು ಜಗ್ಗಿ ವಾಸುದೇವ ಎಕ್ಸ್‌ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಈ ಪೋಸ್ಟ್ ಅನ್ನು ಜಗ್ಗಿ ವಾಸುದೇವ ಅವರು ತಮಿಳು ನಾಡು ಸಿಎಂ ಎಂ ಕೆ ಸ್ಟಾಲಿನ್ ಮತ್ತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಬರಿದಾಗಿರುವ ನೀರಿನ ವಿರುದ್ಧ ಹೋರಾಡುವ ಬದಲು ತಾಯಿ ಕಾವೇರಿಯನ್ನು ಬಲಪಡಿಸೋಣ ಮತ್ತು ನೀರು ಹೆಚ್ಚಿಸೋಣ. ಬುದ್ಧಿವಂತಿಕೆ ಮೇಲುಗೈ ಸಾಧಿಸಲಿ ಎಂದು ಸದ್ಗುರು ಜಗ್ಗಿ ವಾಸುದೇವ ಅವರು ಹೇಳಿದ್ದಾರೆ.

Karnataka Bandh : ಕಾವೇರಿ ಬಂದ್‌ ಕರೆಗೆ ಕರುನಾಡು ಸ್ತಬ್ಧ

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ (Cauvery Water Dispute) ವಿರುದ್ಧ ಕನ್ನಡ ಪರ ಸಂಘಟನೆಗಳು (Kannada Organizations) ನೀಡಿದ್ದ ಸೆ. 29ರ ಕರ್ನಾಟಕ ಬಂದ್‌ (Karnataka Bandh) ಕರೆಗೆ ರಾಜ್ಯಾದ್ಯಂತ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ರಾಜ್ಯದ ಬಹುತೇಕ ಭಾಗದ ಚಟುವಟಿಕೆಗಳು ಶುಕ್ರವಾರ ಸ್ತಬ್ಧವಾಗಿದ್ದವು. ಈ ನಡುವೆ ಶುಕ್ರವಾರದ ಬಂದ್‌ ಯಶಸ್ಸಿನಿಂದ ಉತ್ತೇಜಿತರಾಗಿರುವ ಕನ್ನಡ ಚಳುವಳಿ ವಾಟಾಳ್‌ ಪಕ್ಷದ ನಾಯಕ ವಾಟಾಳ್‌ ನಾಗರಾಜ್‌ (Vatal Nagaraj) ಅವರು ಅಕ್ಟೋಬರ್‌ 5ರಂದು ಕೆಆರ್‌ಎಸ್‌ ಅಣೆಕಟ್ಟಿಗೆ ಮುತ್ತಿಗೆ (KRS Chalo on October 5) ಹಾಕುವುದಾಗಿ ಘೋಷಿಸಿದ್ದಾರೆ.

ಶುಕ್ರವಾರ ಮುಂಜಾನೆಯಿಂದ ರಾಜ್ಯಾದ್ಯಂತ ಜನರು ಬಂದ್‌ಗೆ ಬೆಂಬಲ ಸೂಚಿಸಿದ್ದರು. ಹೆಚ್ಚಿನ ಜಿಲ್ಲೆಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ತೆರೆಯದೆ ತಮ್ಮ ಬೆಂಬಲವನ್ನು ಘೋಷಿಸಿದರು. ಈ ನಡುವೆ, ಕನ್ನಡ ಹೋರಾಟಗಾರರು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ದಾಖಲಿಸಿದರು. ಯಾವುದೇ ಬಲವಂತಕ್ಕೆ ಅವಕಾಶವಿಲ್ಲದಂತೆ ಜನರು ತಮ್ಮ ಬೆಂಬಲವನ್ನು ನೀಡಿದರು. ರಾಜ್ಯದ ಯಾವುದೇ ಭಾಗದಲ್ಲಿ ಬಲವಂತದಿಂದ ಮುಚ್ಚಿಸಿದ ಉದಾಹರಣೆ ಕಂಡುಬರಲಿಲ್ಲ.

ರಾಜ್ಯಾದ್ಯಂತ ಹೋಟೆಲ್‌ಗಳು, ಅಂಗಡಿಗಳು, ಮಾಲ್‌, ಥಿಯೇಟರ್‌ಗಳು ಮುಚ್ಚಿದ್ದರೆ ಹೆಚ್ಚಿನ ಊರುಗಳಲ್ಲಿ ವಾಹನ ಸಂಚಾರ ಸ್ತಬ್ಧವಾಗಿತ್ತು. ಹಲವಾರು ಜಿಲ್ಲೆಗಳಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಜನರು ಮೊದಲೇ ಬಂದ್‌ಗೆ ನಿರ್ಧಾರ ಮಾಡಿದ್ದರಿಂದ ಎಲ್ಲೂ ಸಮಸ್ಯೆಯಾಗಲಿಲ್ಲ.

ಈ ಸುದ್ದಿಯನ್ನೂ ಓದಿ: Namma Metro : ಕರ್ನಾಟಕ ಬಂದ್‌ ಬಿಸಿ ನಡುವೆ ಈ 8 ನಿಲ್ದಾಣಗಳಲ್ಲಿ ಮೆಟ್ರೋ ರೈಲು ಓಡಾಟವಿಲ್ಲ!

ಪೂರ್ಣ ಬಂದ್‌ ನಡೆದ ಜಿಲ್ಲೆಗಳು: ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಹಾಸನ, ರಾಮನಗರ, ಚಾಮರಾಜ ನಗರ, ಚಿತ್ರದುರ್ಗ, ತುಮಕೂರು, ವಿಜಯ ನಗರ ಜಿಲ್ಲೆಗಳಲ್ಲಿ ಬಹುತೇಕ ಪೂರ್ಣ ಬಂದ್‌ ಆಚರಿಸಲಾಗಿದೆ.

ಭಾಗಶಃ ಬಂದ್‌ ನಡೆದ ಜಿಲ್ಲೆಗಳು: ಕಲಬುರಗಿ, ಶಿವಮೊಗ್ಗ, ಯಾದಗಿರಿ, ಗದಗ. ಹುಬ್ಬಳ್ಳಿ, ಚಿಕ್ಕೋಡಿ, ದಾವಣಗೆರೆ, ಬಾಗಲಕೋಟೆ, ಚಿಕ್ಕಮಗಳೂರು, ಬೀದರ್‌, ವಿಜಯಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಪೂರ್ಣ ಬಂದ್‌ ಆಗದೆ ಇದ್ದರೂ ದೊಡ್ಡಮಟ್ಟದಲ್ಲಿ ಪ್ರತಿಭಟನೆಗಳು ನಡೆದವು, ಜನರೂ ಬೆಂಬಲ ನೀಡಿದರು.

ಹೆಚ್ಚು ಸ್ಪಂದನೆ ಇಲ್ಲದ ಜಿಲ್ಲೆಗಳು: ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಬಂದ್‌ಗೆ ಹೆಚ್ಚಿನ ಸ್ಪಂದನೆ ದೊರೆಯಲಿಲ್ಲ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version