Site icon Vistara News

Shivamogga Airport : ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಬೇಡ: ಬಿಎಸ್‌ವೈ ಪುನರುಚ್ಚಾರ

Shivamogga airport

#image_title

ಬೆಂಗಳೂರು/ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ (Shivamogga Airport) ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಹೆಸರು ಇಡಬೇಕು ಎಂಬ ರಾಜ್ಯ ಸರ್ಕಾರದ ಶಿಫಾರಸಿನ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಇದರ ನಡುವೆಯೇ ಏರ್‌ಪೋರ್ಟ್‌ಗೆ ನನ್ನ ಹೆಸರು ಇಡುವುದು ಬೇಡ ಎಂಬ ಮನವಿಯನ್ನು ಬಿ.ಎಸ್‌. ಯಡಿಯೂರಪ್ಪ ಅವರು ಪುನರುಚ್ಚರಿಸಿದ್ದಾರೆ.

ಗುರುವಾರ ಸಿಂಧನೂರಿನಲ್ಲಿ ಮಾತನಾಡಿದ ಬಿ.ಎಸ್‌. ಯಡಿಯೂರಪ್ಪ ಅವರು, ʻʻನಾನು ನನ್ನ ಹೆಸರು ಇಡುವುದು ಬೇಡ ಬೇಡ ಅಂತ ಹೇಳಿದ್ದೇನೆ, ಯಾರದೂ ಹೆಸರು ಇಡುವುದು ಸರಿಯಲ್ಲ. ಈ ಮಾತನ್ನು ಸಿಎಂ ಅವರಿಗೆ ಹೇಳಿದ್ದೇನೆ. ಇದರ ಮೇಲೆ ಕೇಂದ್ರದವರು ತೀರ್ಮಾನ ಮಾಡುತ್ತಾರೆʼʼ ಎಂದು ಹೇಳಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆ ಯಡಿಯೂರಪ್ಪ ಅವರ ಜನುಮ ದಿನವಾದ ಫೆಬ್ರವರಿ ೨೭ರಂದೇ ನಡೆಯಲಿದೆ. ನಿಲ್ದಾಣ ನಿರ್ಮಾಣದ ಹಿಂದೆ ಚಾಲಕ ಶಕ್ತಿಯಾಗಿ ನಿಂತ ಮತ್ತು ರಾಜ್ಯ ಕಂಡ ಧೀಮಂತ ರಾಜಕಾರಣಿ ಎಂಬ ನೆಲೆಯಲ್ಲಿ ಅವರ ಹೆಸರು ಇಡಬೇಕು ಎಂದು ರಾಜ್ಯ ಸರ್ಕಾರ ಈಗಾಗಲೇ ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ಶಿಫಾರಸು ಮಾಡಿದೆ. ಈ ವಿಚಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಸ್ಪಷ್ಟಪಡಿಸಿದ್ದಾರೆ.

ವಿಮಾನ ನಿಲ್ದಾಣಕ್ಕೆ ಬಿಎಸ್‌ವೈ ಅವರ ಹೆಸರಿಡುವ ವಿಚಾರದಲ್ಲಿ ರಾಜಕೀಯ ಪಕ್ಷಗಳು ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು, ಯಾರ ಹೆಸರು ಬೇಕಾದರೂ ಇಡಲಿ, ಮೊದಲು ಭೂಮಿ ಬಿಟ್ಟು ಕೊಟ್ಟವರಿಗೆ ಸರಿಯಾದ ಪರಿಹಾರ ಕೊಡಲಿ, ನಮ್ಮ ಬೇಡಿಕೆ ಅಷ್ಟೇ ಎಂದಿದ್ದರು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಈ ಹಿಂದೆಯೇ ಬೇಡ ಅಂದಿದ್ದರು ಬಿಎಸ್‌ವೈ
ನಿಜವೆಂದರೆ, ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರಿಡುವ ಮೊದಲ ಪ್ರಸ್ತಾಪ ಕೇಳಿಬಂದಾಗಲೇ ಬಿ.ಎಸ್‌ ವೈ ಬೇಡ ಎಂದಿದ್ದರು. ೨೦೨೨ರ ಏಪ್ರಿಲ್‌ ೨೦ರಂದು ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿ ಪರಿಶೀಲನೆಗೆ ಹೋಗಿದ್ದ ಸಿಎಂ ಬೊಮ್ಮಾಯಿ ಅವರು ಅಂದೇ ಯಡಿಯೂರಪ್ಪ ಅವರ ಹೆಸರನ್ನು ಶಿಫಾರಸು ಮಾಡುವುದಾಗಿ ಹೇಳಿದ್ದರು ಮತ್ತು ತುರ್ತಾಗಿ ಹೆಸರನ್ನು ಕಳುಹಿಸಿದ್ದರು. ಅದಾಗಿ ನಾಲ್ಕೇ ದಿನದಲ್ಲಿ ಬಿಎಸ್‌ವೈ ಅವರು ಏಪ್ರಿಲ್‌ ೨೪ರಂದು ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ತಮ್ಮ ಹೆಸರು ಬೇಡ, ಬೇರೆ ಸಾಧಕರ ಹೆಸರಿಡಿ ಎಂದು ಮನವಿ ಮಾಡಿಕೊಂಡಿದ್ದರು. ಮತ್ತು ಪತ್ರವನ್ನು ಟ್ವೀಟ್‌ ಕೂಡಾ ಮಾಡಿದ್ದರು.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರಿಡುವ ಮುಖ್ಯಮಂತ್ರಿ ಬೊಮ್ಮಾಯಿ ಅವರ ನಿರ್ಧಾರ ನನ್ನ ಹೃದಯವನ್ನು ತಟ್ಟಿದೆ. ಇದೇ ವೇಳೆ, ವಿಮಾನ ನಿಲ್ದಾಣಕ್ಕೆ ಕರ್ನಾಟಕಕ್ಕೆ ಮರೆಯಲಾಗದ ಕೊಡುಗೆ ನೀಡಿದ ಯಾವುದಾದರೂ ಶ್ರೇಷ್ಠ ವ್ಯಕ್ತಿಗಳ ಹೆಸರನ್ನು ಇಡುವಂತೆ ನಾನು ಸರ್ಕಾರವನ್ನು ವಿನಮ್ರವಾಗಿ ಕೋರುತ್ತೇನೆ ಎಂದಿದ್ದರು.

ಇದನ್ನೂ ಓದಿ : Shivamogga News: ಶಿವಮೊಗ್ಗ ಏರ್‌ಪೋರ್ಟ್‌ಗೆ ಯಾರ ಹೆಸರಾದರೂ ಇಡಲಿ, ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಲಿ: ಡಿಕೆಶಿ

Exit mobile version