Site icon Vistara News

Shivamogga attack | ಇಬ್ಬರು ಯುವಕರ ಜಗಳಕ್ಕೆ ಕೋಮು ಬಣ್ಣ ಕಟ್ಟಬೇಡಿ: ಸಾಗರದ ಮುಸ್ಲಿಂ ನಾಯಕರ ಮನವಿ

muslim leaders

ಸಾಗರ: ʻʻಸಾಗರ ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾದ ಊರು. ಇಬ್ಬರು ಯುವಕರ ನಡುವಿನ ಜಗಳಕ್ಕೆ (Shivamogga attack) ಕೋಮುಬಣ್ಣ ಕಟ್ಟಿ ಊರಿನಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನ ಮಾಡಬಾರದುʼʼ ಎಂದು ಅಂಜುಮನ್ ಎ ಸಾಗರ ಸಮಿತಿ ಅಧ್ಯಕ್ಷ ಸೈಯದ್ ಇಕ್ಬಾಲ್ ಮನವಿ ಮಾಡಿದ್ದಾರೆ.

ಸಾಗರದಲ್ಲಿ ಬಜರಂಗ ದಳ ಸಹ ಸಂಚಾಲಕ ಸುನಿಲ್‌ ಮೇಲೆ ಸಮೀರ್‌ ಎಂಬಾತ ಹಲ್ಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಇದೊಂದು ವೈಯಕ್ತಿಕ ಜಗಳದಿಂದ ಹುಟ್ಟಿಕೊಂಡಿರುವ ವೈಷಮ್ಯ ಎಂದು ಎಸ್‌ಪಿ ಮಿಥುನ್‌ ಕುಮಾರ್‌ ವಿವರಣೆ ನೀಡಿದ್ದರು. ಆ ಬಳಿಕ ಮುಸ್ಲಿಂ ಮುಖಂಡರು ಸುದ್ದಿಗೋಷ್ಠಿ ನಡೆಸಿ ಇಂಥ ಪ್ರಕರಣಗಳಿಗೆ ಕೋಮು ಬಣ್ಣ ಕಟ್ಟದಂತೆ ಮನವಿ ಮಾಡಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೈಯದ್‌ ಇಕ್ಬಾಲ್‌ ಅವರು, ಸಮೀರ್ ಮಾಡಿರುವ ಕೃತ್ಯವನ್ನು ನಮ್ಮ ಸಮಿತಿ ಖಂಡಿಸುತ್ತದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆ ಕೊಡಿ. ಕಾನೂನುಬಾಹಿರ ಕೃತ್ಯ ನಡೆಸುವವರ ಪರವಾಗಿ ಮುಸ್ಲಿಂ ಸಮಾಜ ಮತ್ತು ನಮ್ಮ ಸಮಿತಿ ನಿಲ್ಲುವುದಿಲ್ಲʼʼ ಎಂದು ಹೇಳಿದರು.

ʻʻಹಿಜಾಬ್ ವಿಷಯಕ್ಕೆ ಸಂಬಂಧಪಟ್ಟಂತೆ ಸುನೀಲ್ ಎಂಬಾತ ಸಮೀರ್ ಸಹೋದರಿಗೆ ಕಿರುಕುಳ ನೀಡುತ್ತಿದ್ದ. ಹಿಜಾಬ್ ತೆಗೆದು ಹಾಕು ಎಂದು ಒತ್ತಡ ಹೇರಿದ್ದಾನೆ. ಇದರಿಂದ ಭಯಭೀತಳಾದ ಸಬಾ ಶೇಖ್ ವಿಷಯವನ್ನು ತನ್ನ ಅಣ್ಣ ಸಮೀರ್‌ಗೆ ಹೇಳಿದ್ದಾಳೆ. ಸಮೀರ್ ನಮ್ಮ ಸಹೋದರಿಯನ್ನು ಚುಡಾಯಿಸಬೇಡ. ಅವಳು ವಿದ್ಯಾಭ್ಯಾಸ ನಡೆಸಲು ಅವಕಾಶ ಕೊಡು ಎಂದು ಹೇಳಲು ಹೋಗಿದ್ದಾನೆ. ಈ ಸಂದರ್ಭದಲ್ಲಿ ಸಣ್ಣಪುಟ್ಟ ಘಟನೆ ನಡೆದಿರಬಹುದುʼʼ ಎಂದು ಸೈಯದ್‌ ಇಕ್ಬಾಲ್‌ ಹೇಳಿದ್ದಾರೆ.

ʻʻಸಮೀರ್ ಕೈನಲ್ಲಿ ರಾಡ್ ಇತ್ತೋ, ಕಟ್ಟಿಗೆ ಇತ್ತೋ, ತಲ್ವಾರ್ ಇತ್ತೋ ಎನ್ನುವುದು ಸಿಸಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಕಾಣುತ್ತಿಲ್ಲ. ಅದೇನೆ ಇದ್ದರೂ ಸಂಘ ಪರಿವಾರ ನೀಡಿದ ಬಂದ್ ಕರೆಗೆ ತೊಂದರೆ ಕೊಡದಂತೆ ನಾವು ಸಮಾಜಕ್ಕೆ ಕರೆ ನೀಡಿದ್ದೇವೆ. ನಾವು ಶಾಂತಿಗೆ ಒತ್ತು ನೀಡುತ್ತಿದ್ದೇವೆ. ಪೊಲೀಸ್ ಇಲಾಖೆ ಘಟನೆ ಕುರಿತು ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಿ ಸಾರ್ವಜನಿಕರಿಗೆ ತಿಳಿಸಬೇಕು. ಪ್ರಕರಣದಲ್ಲಿ ಅಮಾಯಕರನ್ನು ವಶಕ್ಕೆ ಪಡೆಯಬಾರದುʼʼ ಎಂದು ಮನವಿ ಮಾಡಿದರು.

ಸಮಿತಿಯ ಮಹ್ಮದ್ ಖಾಸಿಂ, ನೂರುದ್ದೀನ್, ಖಾಲಿದ್, ಸೈಯದ್ ಜಲೀಲ್, ಮಹ್ಮದ್ ಇಕ್ಬಾಲ್, ಅನಿಸ್, ಖಲಂದರ್, ರಫೀಕ್, ರಿಯಾಜ್, ಅಕ್ಬರಾಲಿ ಖಾನ್, ಸಫಿ ಅಹ್ಮದ್, ಶಬ್ಬೀರ್ ಇನ್ನಿತರರು ಹಾಜರಿದ್ದರು.

ಇದನ್ನೂ ಓದಿ | Shivamogga attack | ಸುನಿಲ್‌ ಕೊಲೆ ಯತ್ನಕ್ಕೆ ಟ್ವಿಸ್ಟ್‌: ಸಮೀರ್‌ನ ಸೋದರಿಯನ್ನು ಚುಡಾಯಿಸಿದ್ದೇ ಕಾರಣ ಎಂದ ಎಸ್‌ಪಿ

Exit mobile version