Site icon Vistara News

Karnataka Politics: ಪೆನ್‌ಡ್ರೈವ್ ವಾದ-ವಿವಾದ; ಎಚ್‌ಡಿಕೆಯನ್ನು ಲಘುವಾಗಿ ಪರಿಗಣಿಸಬೇಡಿ ಎಂದ ಎಚ್‌.ಡಿ. ದೇವೇಗೌಡ

HD Devegowda in pressmeet

ಬೆಂಗಳೂರು: ವರ್ಗಾವಣೆ ದಂಧೆ ಕುರಿತ ಪೆನ್‌ಡ್ರೈವ್ ಬಗ್ಗೆ ವಾದ ವಿವಾದ ನೋಡಿದ್ದೇನೆ. ಕುಮಾರಸ್ವಾಮಿ ಅಷ್ಟು ಸುಲಭವಾಗಿ ಏನನ್ನೂ ಮಾತನಾಡಲ್ಲ. ಅವರ ಬಳಿ ತುಂಬ ವಿಷಯ ಇದೆ, ಸಾಮಾನ್ಯವಾಗಿ ಎಲ್ಲ ವಿಚಾರಗಳನ್ನು ನನ್ನ ಬಳಿ ಹಂಚಿಕೊಳ್ಳುತ್ತಾರೆ. ಅವರ ಬಗ್ಗೆ ಲಘುವಾಗಿ ಮಾತನಾಡುವುದು ಬೇಡ. ಹೋರಾಟ ನಡೆದಿದ್ದು ಸತ್ಯ ಇದು ಇಲ್ಲಿಗೆ ನಿಲ್ಲಲ್ಲ ಸೆ. 10ರಂದು ಎಲ್ಲ ಮಾತನಾಡುವೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.

ನಗರದ ಜೆಡಿಎಸ್‌ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂ ಮಾಫಿಯಾವನ್ನು ಸರ್ಕಾರ ಮಾಫಿ ಮಾಡಿದೆ. ಬೆಂಗಳೂರಿನಲ್ಲಿ ಸರ್ಕಾರಿ ಜಾಗ ಅತಿಕ್ರಮಣ ಆಗಿದೆ. ಇದು ಒಂದು ಘಟನೆ ಅಷ್ಟೇ. ಇನ್ನು ನನ್ನ ಬಳಿ ತುಂಬ ವಿಷಯ ಇದೆ. ಮುಂದಿನ ದಿನಗಳಲ್ಲಿ ಎಲ್ಲ ಮಾತನಾಡುವೆ, ಯಾರು ಯಾರು ಏನು ಮಾತನಾಡುತ್ತಿದ್ದಾರೆ, ಅವರ ಮಾತಿನ ವೈಖರಿ ಸೇರಿ ಪ್ರತಿಯೊಂದನ್ನು ಗಮನಿಸುತ್ತೇನೆ ಎಂದು ತಿಳಿಸಿದರು.

ಕುಮಾರಸ್ವಾಮಿ ನನ್ನ ಮಗ ಎಂದು ಮಾತನಾಡಲ್ಲ. ನನಗೆ ಚನ್ನಪಟ್ಟಣ, ರಾಮನಗರ, ಕನಕಪುರ, ಮಾಗಡಿ ಎಲ್ಲವೂ ಒಂದೇ. ಆದರೆ, ರಾಮನಗರ ಪ್ರತ್ಯೇಕ ಜಿಲ್ಲೆ ಮಾಡಿದ್ದು ಯಾರು? ಎಸ್.ಎಂ.ಕೃಷ್ಣ ಸಿಎಂ ಆಗಿದ್ದಾಗ ನನ್ನನ್ನು ಸೋಲಿಸಬೇಕೆಂದು ತೀರ್ಮಾನ ಮಾಡಿದ್ದರು. ಆದರೆ, ರಾಮನಗರ ಜಿಲ್ಲೆ ರಚಿಸಲು ಆಗುತ್ತಿರಲಿಲ್ಲವೇ, ಕುಮಾರಸ್ವಾಮಿಯವರೇ ಬಂದು ಮಾಡಬೇಕಿತ್ತಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ | Karnataka Politics: ಪ್ರಾದೇಶಿಕ ಪಕ್ಷ ಉಳಿಸುವುದೇ ನಮ್ಮ ಗುರಿ: ಎಚ್‌.ಡಿ.ದೇವೇಗೌಡ

ರಾಮನಗರದಲ್ಲಿ ಅಂದು ಮೆಡಿಕಲ್ ಕಾಲೇಜು ಮಂಜೂರು ಆಗಿದ್ದು ಎಲ್ಲಿ, ಜಾಗ ಮಂಜೂರು ಆಗಿದ್ದು ಎಲ್ಲಿ. 9 ಎಕರೆ ಬಿಟ್ಟು ಕೆಲಸ ಶುರು ಮಾಡಿ ಎಂದು ಆದೇಶ ಮಾಡಿದ್ದರು. ರೇವಣ್ಣ ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕಿದ್ದರು. ಆದರೆ, ದುರಂತವೆಂದರೆ ಮೈತ್ರಿ ಸರ್ಕಾರದಲ್ಲಿ ಕನಕಪುರದ ನನ್ನ ಮತದಾರರೇ ತಕರಾರರು ತೆಗೆದರು. ಮಾಯಗೊಂಡನಹಳ್ಳಿಯ 9 ಎಕರೆ ಬಗ್ಗೆ ತಕರಾರು ತೆಗೆದರು. ಅದನ್ನು ಬಿಟ್ಟು ಕೆಲಸ ಶುರು ಮಾಡಿ ಎಂದರು. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು. ಅವರು ಕನಕಪುರದಲ್ಲೆ ಮೆಡಿಕಲ್ ಕಾಲೇಜು ಮಾಡಲಿ, ನನ್ನದೇನು ತಕರಾರು ಇಲ್ಲ ಎಂದು ಹೇಳಿದರು.

ರಾಮನಗರ ಮೆಡಿಕಲ್ ಕಾಲೇಜಿಗೆ ತೊಂದರೆ ಮಾಡಬೇಡಿ ಎಂದು ನ್ಯಾಯಯುತವಾಗಿ ಕೇಳುತ್ತಿದ್ದೇವೆ. ಡಿ.ಕೆ. ಶಿವಕುಮಾರ್ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಲು ಹೋಗಲ್ಲ, ಅವರು ಕ್ಷೇತ್ರದ ಬಗ್ಗೆ ಅವರು ಮಾತನಾಡಿದರೆ ನಾನ್ಯಾಕೆ ಆ ರೀತಿ ಮಾತನಾಡಲಿ ಎಂದರು.

ಇದನ್ನೂ ಓದಿ | Cauvery dispute : ತ.ನಾಡಿಗೆ ನಿತ್ಯ 5000 ಕ್ಯೂಸೆಕ್‌ ನೀರು ಹರಿಸಲು CWRC ಆದೇಶ; Don’t worry, ಬಿಡಬೇಕೆಂದೇನೂ ಇಲ್ಲ!

ಸೆ.10ರಂದು ಬೃಹತ್‌ ಸಮಾವೇಶ

ಮಂಡ್ಯ ಜಿಲ್ಲೆಯ ರಾಜಕಾರಣದ ಬಗ್ಗೆ ಬಹಳ ಚರ್ಚೆ ಮಾಡಿದ್ದೇನೆ, ಪ್ರತಿಯೊಂದು ವಿಚಾರ ತಿಳಿದಿದ್ದೇನೆ. ಒಬ್ಬನೇ ಒಬ್ಬ ಶಾಸಕ ಪಕ್ಷ ಬಿಟ್ಟು ಹೋಗುತ್ತಾರೆ ಎಂದರೆ ತಿಳಿಸಿ ಎಂದ ಎಚ್‌.ಡಿ.ದೇವೇಗೌಡ ಅವರು, ಸೆ.10ರಂದು 20 ಸಾವಿರ ಜನ ಸೇರಿಸಿ ಕಾರ್ಯಕ್ರಮ ಮಾಡುತ್ತೇವೆ. ನಾವು ದುಡ್ಡು ಕೊಟ್ಟು ಜನರನ್ನು ಕರೆಸಲ್ಲ. ದೇವೆಗೌಡರ ಪಕ್ಷವನ್ನು ಅವರ ಕೊನೆ ಗಳಿಗೆಯಲ್ಲಿ ಉಳಿಸಲೇಬೇಕೆಂದು ಜನ ಬರುತ್ತಾರೆ. ಈ ಹಿಂದೆ ಏನೇ ಸಮಸ್ಯೆ ಆಗಿದ್ದರೂ ನಾನು ಕ್ಷಮೆ ಕೇಳುತ್ತೇನೆ. ನಮ್ಮ ಪಕ್ಷಕ್ಕೆ ಎಲ್ಲರೂ ಸಹಕಾರ ನೀಡಿ ಎಂದು ಮನವಿ ಮಾಡಿದರು.

Exit mobile version