ಉಡುಪಿ: ಸಮಾಜದಲ್ಲಿ ಏರ್ಪಟ್ಟಿದ್ದ ಪ್ರಮುಖ ಎರಡು ಗೊಂದಲ ನಿವಾರಣೆಗೆ ಮತಾಂತರ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿತ್ತು. ಈಗಿನ ರಾಜ್ಯ ಸರ್ಕಾರ ಎರಡು ಕಾಯ್ದೆ ಹಿಂಪಡೆಯಲು ನಿರ್ಧರಿಸಿರುವುದು ಕಳವಳಕಾರಿ. ಈ ಕಾನೂನುಗಳನ್ನು ಹಿಂಪಡೆಯುವ ದುಸ್ಸಾಹಸಕ್ಕೆ ಕೈಹಾಕದೆ ತಟಸ್ಥರಾಗಿರಬೇಕು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Pejawar Seer) ಆಗ್ರಹಿಸಿದ್ದಾರೆ.
ಮತಾಂತರ ಹಾಗೂ ಗೋ ಹತ್ಯಾ ನಿಷೇಧ ಕಾಯ್ದೆ ಹಿಂಪಡೆಯುವ ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಅವರು ಪ್ರತಿಕ್ರಿಯಿಸಿ, ಮತಾಂತರದ ಹಾವಳಿಯಿಂದ ಕೌಟುಂಬಿಕ ಕಲಹ ಏರ್ಪಟ್ಟು, ಒಂದು ಕುಟುಂಬವೇ ಛಿದ್ರವಾಗುವ ಪ್ರಸಂಗ ನಿರ್ಮಾಣವಾಗಿತ್ತು. ಇದನ್ನು ತಪ್ಪಿಸಲು ಈ ಹಿಂದಿನ ಸರ್ಕಾರವು ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿತ್ತು ಎಂದು ತಿಳಿಸಿದರು.
ಇದನ್ನೂ ಓದಿ | Karnataka Politics : ಸಿದ್ದರಾಮಯ್ಯ ಟೀಮ್ ಡಿಕೆಶಿಯನ್ನು ಸನ್ಯಾಸಿ ಮಾಡಬಹುದೇ?: ಆರ್ ಅಶೋಕ್ ಗೇಲಿ
ಹಲವು ಕುಟುಂಬಗಳು ನಾಲ್ಕು ಗೋವುಗಳನ್ನ ಸಾಕಿ, ಅದರಿಂದ ಬಂದ ಹಾಲನ್ನು ಮಾರಾಟ ಮಾಡಿ ಬದುಕು ಕಟ್ಟಿಕೊಂಡಿವೆ. ಅದರೆ, ಗೋ ಕಳ್ಳರು ತಲವಾರು ತೋರಿಸಿ ಗೊವುಗಳನ್ನು ಕದ್ದೊಯ್ಯುತ್ತಾರೆ. ಇಂತಹ ಹಲವು ಘಟನೆಗಳಿಂದ ಹಲವು ಕುಟುಂಬಗಳಿಗೆ ಈಗ ಬದುಕು ಸಾಗಿಸಲು ಕಷ್ಟವಾಗಿದೆ. ಇವೆಲ್ಲದ್ದಕ್ಕೆ ಕಡಿವಾಣ ಹಾಕಲು ಗೋ ಹತ್ಯೆ ನಿಷೇಧ ಕಾಯ್ದೆ ಈ ಹಿಂದಿನ ಸರ್ಕಾರದಲ್ಲಿ ಜಾರಿಯಾಗಿತ್ತು ಎಂದು ಹೇಳಿದರು.
ಈಗಿನ ರಾಜ್ಯ ಸರ್ಕಾರ ಈ ಎರಡು ಕಾಯಿದೆ ಹಿಂಪಡೆಯಲು ನಿರ್ಧರಿಸಿರುವುದು ಕಳವಳಕಾರಿ. ಈ ಎರಡು ಕಾನೂನು ಹಿಂಪಡೆಯುವ ದುಸ್ಸಾಹಸ ಮಾಡಬಾರದು. ರಾಜ್ಯ ಸರ್ಕಾರ ಜನಪ್ರತಿನಿಧಿಗಳ ಮೂಲಕ ಅಭಿಪ್ರಾಯ ಸಂಗ್ರಹಿಸಿ ಕಾನೂನು ಹಿಂಪಡೆಯುವ ದುಸ್ಸಾಹಸಕ್ಕೆ ಕೈಹಾಕಬಾರದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.