ನವದೆಹಲಿ: ಚಂಡೀಗಢದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಪಾರ್ಟ್‌ಮೆಂಟ್‌ಗಳ (Apartmentalisation) ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಅಂಕುಶ ಹಾಕಿದೆ. ಹಾಗೆಯೇ, ನಗರದ ತುಂಬ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿದರೆ, ಮೊದಲ ಹಂತದ ಅಪಾರ್ಟ್‌ಮೆಂಟ್ ಯೋಜನೆ ಜಾರಿಗೊಳಿಸಿದರೆ ಚಂಡೀಗಢವು ಮತ್ತೊಂದು ಬೆಂಗಳೂರು ಆಗುತ್ತದೆ ಎಂದು ಕೋರ್ಟ್ ಹೇಳಿತು. ಆ ಮೂಲಕ ಬೆಂಗಳೂರು ನಗರದ ಅವ್ಯವಸ್ಥೆಯನ್ನು ಪ್ರಸ್ತಾಪಿಸಿತು.
ಚಂಡೀಗಢದಲ್ಲಿ ಅಪಾರ್ಟ್‌ಮೆಂಟ್ ನಿರ್ಮಾಣ ಯೋಜನೆ ಕುರಿತ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಹಾಗೂ ಬಿ.ವಿ.ನಾಗರತ್ನ ಅವರಿದ್ದ ಪೀಠವು, “ಒಂದು ಕಾಲದಲ್ಲಿ ದೇಶದಲ್ಲೇ ಉತ್ತಮ ಹಾಗೂ ವೈಜ್ಞಾನಿಕ ನಗರ ಎಂದು ಖ್ಯಾತಿಯಾಗಿದ್ದ ಬೆಂಗಳೂರು ಈಗ ಅವೈಜ್ಞಾನಿಕತೆಯಿಂದ ಪರದಾಡುತ್ತಿದೆ. ಸ್ವಲ್ಪ ಮಳೆ ಬಂದರೂ ಪ್ರವಾಹದ ಸ್ಥಿತಿ ನಿರ್ಮಾಣವಾಗುತ್ತದೆ, ಟ್ರಾಫಿಕ್ ಜಾಮ್, ಕಸ ವಿಲೇವಾರಿ ಸಮಸ್ಯೆ ಸೇರಿ ಹಲವು ಸಮಸ್ಯೆಗಳಿಂದ ಬೆಂಗಳೂರು ನರಳುತ್ತಿದೆ. ಹಾಗಾಗಿ, ಚಂಡೀಗಢದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುವುದು ಅವೈಜ್ಞಾನಿಕವಾಗಿದೆ. ಇದು ಪರಿಸರಕ್ಕೂ ಹಾನಿಕರ” ಎಂದು ಹೇಳಿತು.
“ಪ್ರತಿಯೊಂದು ನಗರದ ಬೆಳವಣಿಗೆಗೆ ಅಪಾರ್ಟ್‌ಮೆಂಟ್‌ಗಳು ಮುಖ್ಯವಾಗಿದೆ. ಹಾಗಂತ, ಅಪಾರ್ಟ್‌ಮೆಂಟ್‌ಗಳನ್ನು ಅತಿಯಾಗಿ ನಿರ್ಮಾಣ ಮಾಡುವುದು ನಗರದ ‘ಶ್ವಾಸಕೋಶ’ಕ್ಕೆ ಹಾನಿಯಾಗುತ್ತದೆ. ಹಾಗಾಗಿ, ಚಂಡೀಗಢದಲ್ಲಿ ಬೇಕಾಬಿಟ್ಟಿಯಾಗಿ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಮಾಡುವುದು ಸರಿಯಲ್ಲ. ಇದರ ಕುರಿತು ಸರ್ಕಾರಗಳು ಕೂಡ ಚಿಂತನೆ ನಡೆಸಬೇಕು” ಎಂದು ಸ್ಪಷ್ಟಪಡಿಸಿತು. ನ್ಯಾ.ಬಿ.ವಿ.ನಾಗರತ್ನ ಅವರು ಕರ್ನಾಟಕದ ಮಂಡ್ಯದವರು.
ಇದನ್ನೂ ಓದಿ | Amit Shah | ದೇವನಹಳ್ಳಿಯಲ್ಲಿ ಕೇಂದ್ರೀಯ ಬೇಹುಗಾರಿಕೆ ತರಬೇತಿ ಶಾಲೆ ಕಟ್ಟಡಕ್ಕೆ ಶಂಕುಸ್ಥಾಪನೆ