Site icon Vistara News

ಹಸಿರುಮಕ್ಕಿ ಲಾಂಚ್‌ನ ಡೋರ್‌ ಕೇಬಲ್‌ ಕಟ್;‌ ಶರಾವತಿ ನದಿಯೊಳಗೆ ಬಿದ್ದ ಬೈಕ್‌; ಈಜಿ ದಡ ಸೇರಿದ ಸಿಬ್ಬಂದಿ

door cable cut of the hasirumakki launch Bike falls into Sharavathi river crew swam to the shore

ಶಿವಮೊಗ್ಗ: ಶರಾವತಿ ನದಿಯಲ್ಲಿ (Sharavati River) ಸಾಗುತ್ತಿದ್ದ ವೇಳೆ ಹಸಿರುಮಕ್ಕಿ ಲಾಂಚ್‌ನ ಡೋರ್‌ ಕೇಬಲ್‌ (Door cable of the launch) ತುಂಡಾದ ಪರಿಣಾಮ ಬದಿಯಲ್ಲಿ ನಿಲ್ಲಿಸಿದ್ದ ಬೈಕ್‌ವೊಂದು ನದಿಗೆ ಬಿದ್ದಿದೆ. ಬೈಕ್ ರಕ್ಷಣೆ ಮಾಡಲು ಹೋದ ಲಾಂಚ್ ಸಿಬ್ಬಂದಿ ಸಹ ಹೊಳೆಗೆ ಬಿದ್ದಿದ್ದು, ಕೊನೆಗೆ ಈಜಿ ದಡ ಸೇರಿದ್ದಾರೆ. ಅದೃಷ್ಟವಶಾತ್‌ ಆ ಸ್ಥಳದಲ್ಲಿ ಯಾರೂ ಇಲ್ಲದೇ ಇದ್ದಿದ್ದರಿಂದ ಪ್ರಾಣಾಪಾಯದಿಂದ ಜನ ಪಾರಾಗಿದ್ದಾರೆ.

ಹೊಸನಗರ ತಾಲೂಕಿನ ಹಸಿರುಮಕ್ಕಿ ಲಾಂಚ್‌ನಲ್ಲಿ ಈ ಅವಘಡ ಸಂಭವಿಸಿದೆ. ಲಾಂಚ್‌ನ ಡೋರ್ ಕೇಬಲ್ ಕಟ್ ಆಗಿದ್ದೇ ಇಷ್ಟೆಲ್ಲ ಘಟನೆಗೆ ಕಾರಣವಾಗಿದೆ. ಲಾಂಚ್‌ನಲ್ಲಿದ್ದ ಒಂದು ಬಸ್ ಸೇರಿದಂತೆ 7 ಕಾರು ಮತ್ತು 10 ಬೈಕ್‌ಗಳು ಈಗ ಲಾಂಚ್‌ನಲ್ಲಿಯೇ ಸಿಲುಕಿಕೊಂಡಿವೆ.

ಇದನ್ನೂ ಓದಿ: Karnataka Election 2023: ಕಾಂಗ್ರೆಸ್‌ ಪೇಯ್ಡ್‌ ಎಂಜಿನ್‌ ಬಿಡಿ, ಬಿಜೆಪಿ ಡಬಲ್ ಎಂಜಿನ್ ಕೈಹಿಡಿಯಿರಿ: ಯೋಗಿ ಆದಿತ್ಯನಾಥ ಕರೆ

ಏನಿದು ಘಟನೆ?

ಎಂದಿನಂತೆ ಹಸಿರುಮಕ್ಕಿ ಲಾಂಚ್‌ನಲ್ಲಿ ಬಸ್‌ ಸೇರಿದಂತೆ ಕಾರುಗಳು ಹಾಗೂ ಬೈಕ್‌ಗಳನ್ನು ಹತ್ತಿಸಿಕೊಳ್ಳಲಾಗಿದೆ. ಅಲ್ಲದೆ, ಸಾರ್ವಜನಿಕರು ಸಹ ಇದ್ದರು. ಕೆಬಿ ಸರ್ಕಲ್ ಕಡೆಯಿಂದ ಸಾಗರ ಕಡೆ ಹೋಗುವ ನಿಲ್ದಾಣ ಪಾಯಿಂಟ್‌ ಬಳಿ ಹೋಗುತ್ತಿದ್ದ ಲಾಂಚ್‌ನ ಡೋರ್‌ ಕೇಬಲ್‌ ಕಟ್ ಆಗಿದೆ.

ಕೇಬಲ್‌ ಕಟ್‌ ಆಗುತ್ತಿದ್ದಂತೆ ಡೋರ್‌ ಮೇಲೆ ನಿಲ್ಲಿಸಿದ್ದ ಬೈಕ್‌ ಕೆಳಗೆ ನೀರಿಗೆ ಬೀಳಲಾರಂಭಿಸಿದೆ. ಆಗ ಅಲ್ಲೇ ಇದ್ದ ಲಾಂಚ್‌ ಸಿಬ್ಬಂದಿಯೊಬ್ಬರು ಬೈಕ್‌ ಅನ್ನು ಹಿಡಿದುಕೊಳ್ಳಲು ಮುಂದಾಗಿದ್ದಾರೆ. ಆದರೆ, ಬೈಕ್‌ ನೀರಿನೊಳಗೆ ಜಾರಿದೆ. ಜತೆಗೆ ಇವರಿಗೂ ಸಹ ನಿಯಂತ್ರಣ ತಪ್ಪಿ ನೀರಿಗೆ ಬಿದ್ದಿದ್ದಾರೆ. ಕೊನೆಗೆ ಈಜಿ ದಡ ಸೇರಿದ್ದಾರೆ.

ಪ್ರಯಾಣಿಕರು ಸೇಫ್

‌ಲಾಂಚ್‌ ಅನ್ನು ನಿಲುಗಡೆ ಮಾಡಬೇಕಾದರೆ ಡೋರ್‌ ಬಹಳ ಮುಖ್ಯವಾಗುತ್ತದೆ. ಕೊನೆಗೆ ಆ ಡೋರ್‌ ಮೂಲಕವೇ ವಾಹನಗಳ ಸಹಿತ ಜನರು ಸಹ ರಸ್ತೆಗೆ ದಾಟಬೇಕು. ಆದರೆ, ಡೋರ್‌ ಕೇಬಲ್‌ ಕಟ್‌ ಆಗಿದ್ದರಿಂದ ಜನತೆ ದಡಕ್ಕೆ ಹೋಗಲು ಕಷ್ಟವಾಗಿದೆ. ಕೊನೆಗೆ ಲಾಂಚ್‌ ಅನ್ನು ಹಿಮ್ಮುಖವಾಗಿ ದಡದತ್ತ ತಂದು, ಪ್ರಯಾಣಿಕರನ್ನು ಸುರಕ್ಷಿತವಾಗಿ ದಡ ಸೇರಿಸಲಾಯಿತು.

ಇದನ್ನೂ ಓದಿ: Karnataka Election: ಲೂಟಿ ಸರ್ಕಾರ ಬಿಡಿ, ಪ್ರಾಮಾಣಿಕ ಕಾಂಗ್ರೆಸ್‌ಗೆ ಅಧಿಕಾರ ಕೊಡಿ: ಪ್ರಿಯಾಂಕಾ ಗಾಂಧಿ

ಲಾಂಚ್‌ ಇಲ್ಲದೆ ಪರದಾಟ

ಲಾಂಚ್ ಡೋರ್ ಮೇಲೆ ವಾಹನ ಹಾಕಬಾರದು ಎಂಬ ನಿಯಮ ಇದ್ದರೂ ಲಾಂಚ್ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಈಗ ಲಾಂಚ್‌ನಲ್ಲಿ ಬಸ್‌, ಕಾರುಗಳು, ಬೈಕ್‌ಗಳು ಹಾಗೇ ಸಿಲುಕಿಕೊಂಡಿವೆ. ಹಸಿರು ಮಕ್ಕಿ ಲಾಂಚ್ ಇಲ್ಲದೆ ಮಾರ್ಗ ಬಂದ್ ಆಗಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ.

Exit mobile version